ಸಾರಾಂಶ
ಕನ್ನಡ ಭಾಷೆ ನಗರ ಪ್ರದೇಶದಲ್ಲಿ ಮಾಯವಾಗುತ್ತಿದೆ. ಕನ್ನಡ ಭಾಷೆ ಹೆಚ್ಚು ಬಳಸುವ ಮೂಲಕ ಬೆಳೆಸಬೇಕು.
ಕುಷ್ಟಗಿ:
ಕನ್ನಡ ಭಾಷೆ, ಜಲ, ನೆಲದ ರಕ್ಷಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ ಟೊಂಕ ಕಟ್ಟಿ ನಿಂತಿದೆ ಎಂದು ಸಾಹಿತಿ ನಿಂಗಪ್ಪ ಸಜ್ಜನ ಹೇಳಿದರು.ಪಟ್ಟಣದ ಮಾತೋಶ್ರೀ ಹೋಳಿಯಮ್ಮ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ವತಿಯಿಂದ ನಡೆದ 111ನೇ ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪನೆ ದಿನಾಚರಣೆ ಹಾಗೂ ಕಾಲೇಜಿಗೊಂದು ಕವಿನುಡಿಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.111 ವರ್ಷದಿಂದ ಕಸಾಪ ಕನ್ನಡ ನಾಡಿನ ರಕ್ಷಣೆ ಮಾಡಿಕೊಂಡು ಬರುತ್ತಿದೆ ಎಂದ ಅವರು, ಕನ್ನಡ ಭಾಷೆ ನಗರ ಪ್ರದೇಶದಲ್ಲಿ ಮಾಯವಾಗುತ್ತಿರುವುದು ವಿಪರ್ಯಾಸದ ಸಂಗತಿ ಎಂದ ಅವರು, ಕನ್ನಡ ಭಾಷೆ ಹೆಚ್ಚು ಬಳಸುವ ಮೂಲಕ ಬೆಳೆಸಬೇಕೆಂದು ಎಂದರು.
ಕೇಂದ್ರ ಕಸಾಪ ಪ್ರತಿನಿಧಿ ನಬಿಸಾಬ ಕುಷ್ಟಗಿ ಮಾತನಾಡಿ, ಕಸಾಪ ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಕಲೆಗೆ ಪ್ರೋತ್ಸಾಹಿಸುತ್ತಿದೆ. ಕಸಾಪ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲ್ಪನೆ ಮತ್ತು ಆಶಯಗಳನ್ನು ಕನ್ನಡಿಗರು ಸಾಕಾರಗೊಳಿಸಬೇಕು ಎಂದು ಕರೆ ನೀಡಿದರು.ಹಕ್ಕಬುಕ್ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಚೌಡ್ಕಿ ಮಾತನಾಡಿ, ಕನ್ನಡ ಬದುಕಿನ ಭಾಗ. ನಮ್ಮ ಆಲೋಚನೆ, ಸಂಸ್ಕಾರ, ಸಂಸ್ಕೃತಿ, ಜೀವನ ಶೈಲಿ, ಬದುಕು, ಬರಹ ಎಲ್ಲೆಡೆಯೂ ಕನ್ನಡವಿದ್ದು ಕನ್ನಡ ಕಾಪಾಡುವಲ್ಲಿ ಕಸಾಪ ಪ್ರಮುಖಪಾತ್ರ ವಹಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲೆಂಕಪ್ಪ ವಾಲಿಕಾರ, ಕಸಾಪ ಪುಸ್ತಕ ಪ್ರಕಟಣೆ, ಅಖಿಲ ಭಾರತ ಸಮ್ಮೇಳನ, ಜಿಲ್ಲಾ ಮತ್ತು ತಾಲೂಕು ಸಮ್ಮೇಳನ ಆಯೋಜಿಸಿ ಕನ್ನಡಿಗರನ್ನು ಒಗ್ಗೂಡಿಸುತ್ತಿದೆ ಎಂದು ಹೇಳಿದರು.ವಿದ್ಯಾರ್ಥಿನಿಯರಾದ ತಂಜುಮಾನ್, ಬಿ ಸುಮಯ್ಯಾ, ವಾಸವಿ ಶೆಟ್ಟರ್, ಸಂಗೀತಾ, ತಸ್ಮಿಯಾ ಸೇರಿದಂತೆ ಹಲವರು ಕವಿತೆ ಹಾಗೂ ಕನ್ನಡದ ಕುರಿತು ಮಾತನಾಡಿದರು.
ಈ ವೇಳೆ ವಕೀಲ ಫಕೀರಪ್ಪ ಚಳಗೇರಿ, ರವೀಂದ್ರ ಬಾಕಳೆ, ಎಸ್.ಜಿ. ಕಡೆಮನಿ, ಹನುಮಂತಪ್ಪ ಈಟಿಯವರು, ವಿದ್ಯಾ ಕಂಪಾಪುರಮಠ, ನಟರಾಜ ಸೋನಾರ, ಲಲಿತಮ್ಮ ಹಿರೇಮಠ, ಹನುಮೇಶ ಗುಮಗೇರಿ, ಬುಡ್ನೇಸಾಬ್ ಕಲಾದಗಿ, ಪ್ರಾಚಾರ್ಯ ತಿಪ್ಪಣ್ಣ ಬಿಜಕಲ್, ಪರಶಿವಮೂರ್ತಿ ದೋಟಿಹಾಳ, ಶರಣಪ್ಪ ಲೈನದ್, ಬಸವರಾಜ ಗಾಣಿಗೇರ, ದೇವರಾಜ ವಿಶ್ವಕರ್ಮ, ಭೀಮಸೇನರಾವ್ ಕುಲಕರ್ಣಿ, ಅನಿಲ ಕಮ್ಮಾರ, ದೊಡ್ಡಪ್ಪ ಕೈಲವಾಡಗಿ ಸೇರಿದಂತೆ ವಿದ್ಯಾರ್ಥಿನಿಯರು ಇದ್ದರು.