ಸಾರಾಂಶ
ಸಂಡೂರು: ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ರಕ್ಷಿಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ನಿರಂತರವಾದ ಕಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ವರ್ಷದ ೩೬೫ ದಿನಗಳೂ ಜಾಗೃತಿಗಾಗಿ ದತ್ತಿ ಉಪನ್ಯಾಸಗಳು ನಡೆಯುತ್ತಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಮಾಜಿ ಅಧ್ಯಕ್ಷ ಬಿ.ಅರ್. ಮಸೂತಿ ತಿಳಿಸಿದರು.
ತಾಲೂಕಿನ ಕೃಷ್ಣಾನಗರ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಗುರುವಾರ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಿರಂತರವಾಗಿ ಕನ್ನಡ ಕಾರ್ಯಕ್ರಮಗಳು ನೆರವೇರಬೇಕಾದರೆ ದತ್ತಿ ಮುಖ್ಯ. ಕನ್ನಡದ ಶ್ರೀಗಳು ಕನ್ನಡ ನಾಡು ನುಡಿ ಸಂಸ್ಕೃತಿ ಹೆಸರಿನಲ್ಲಿ ದತ್ತಿ ನೀಡಿರುವುದು ಶ್ಲಾಘನೀಯ. ಇಡೀ ಕರ್ನಾಟಕದಲ್ಲಿ ಸಂಡೂರು ತಾಲೂಕಿನಿಂದ ಅತಿ ಹೆಚ್ಚು ದತ್ತಿ ನೀಡುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದರು.ಬಸವರಾಜ ಬಣಕಾರ ಅವರು ಸಂಡೂರು ವಿರಕ್ತಮಠದ ಪ್ರಭುದೇವರ ಸಂಸ್ಥಾನ ಕೊಡಮಾಡಿದ ಕನ್ನಡ ನಾಡು ನುಡಿ ಸಂಸ್ಕೃತಿ ಎನ್ನುವ ದತ್ತಿ ವಿಷಯ ಕುರಿತು ಮಾತನಾಡಿ, ಕನ್ನಡಿಗರು ಬರೀ ಭಾರತಕ್ಕೆ ಸೀಮಿತವಾಗದೇ ಪಕ್ಕದ ನೇಪಾಳಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇಂದಿನ ಪಶುಪತಿ ದೇವಾಲಯದಲ್ಲಿ ಕನ್ನಡದ ಅರ್ಚಕರೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಇರಾನ್ ದೇಶ ದಿವಾಳಿಯಾದಾಗ ಇಮ್ಮಡಿ ಪುಲಿಕೇಶಿ ಆ ದೇಶದ ರಾಜನಿಗೆ ರಕ್ಷಣೆಯ ಜತೆಗೆ ಆರ್ಥಿಕ ಬೆಂಬಲ ನೀಡಿದ್ದರು. ಇಂತಹ ಕನ್ನಡ ನಾಡು ಬಹು ವಿಸ್ತಾರವಾಗಿತ್ತು. ಇದು ಶಿಲ್ಪಕಲೆಯ ತವರೂರು. ದೇಶದಲ್ಲಿ ಅತಿ ಹೆಚ್ಚು ಬಂಗಾರ ಉತ್ಪಾದಿಸಿದ ನಾಡು ನಮ್ಮ ಹಟ್ಟಿ ಚಿನ್ನದ ಗಣಿ. ಬ್ರಿಟಿಷರು ಪ್ರತಿವರ್ಷ ೧೦ ಸಾವಿರ ಕೆಜಿ ಬಂಗಾರ ಸಾಗಿಸಿದ ಇತಿಹಾಸವಿದೆ. ಕನ್ನಡ ನಾಡಿನ ಸಂಸ್ಕೃತಿ ಉಜ್ವಲವಾದ ಸಂಸ್ಕೃತಿಯಾಗಿದೆ ಎಂದರು.ಸಂಡೂರಿನ ವಿರಕ್ತಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಎರಡು ಸಂಸ್ಥೆಗಳು ಕನ್ನಡ ಕಟ್ಟುವ, ಬೆಳೆಸುವ ಮಹತ್ತರ ಕಾರ್ಯ ಮಾಡಿವೆ. ಸಾವಿತ್ರಿಬಾಯಿ ಫುಲೆ ಹಾಗೂ ಬಿ.ಎಂ. ಶ್ರೀಕಂಠಯ್ಯ ಅವರ ಅವರ ಜನ್ಮದಿನದ ಮಧ್ಯೆ ದತ್ತಿ ಉಪನ್ಯಾಸ ನಡೆಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಎ. ಚಂದ್ರಶೇಖರ ಹಾಗೂ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಬಿ. ನಾಗನಗೌಡ ಮಾತನಾಡಿದರು. ವಿದ್ಯಾರ್ಥಿಗಳಾದ ಅನುಷಾ ತಂಡದವರು ಪ್ರಾರ್ಥಿಸಿದರು. ಜಿ. ವೀರೇಶ್ ಸ್ವಾಗತಿಸಿದರು. ಶಿಕ್ಷಕ ರವೀಂದ್ರಗೌಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸಿ.ಎಂ. ಸಿಗ್ಗಾವಿ, ಮುಖಂಡರಾದ ವೆಂಕಟಸುಬ್ಬಯ್ಯ, ಎ.ಎಂ. ಶಿವಮೂರ್ತಿಸ್ವಾಮಿ, ಗುಂಡಮುಣುಗು ಚಂದ್ರೇಗೌಡ, ಎಚ್.ಎನ್. ಬೋಸ್ಲೆ, ಬಶೀರ್, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))