ಕಾಶ್ಮೀರ ಪಹಲ್ಗಾಮ್‌ ಉಗ್ರ ದಾಳಿ: ಉಡುಪಿ ಬಿಷಪ್‌ ಖಂಡನೆ

| Published : Apr 24 2025, 12:05 AM IST

ಸಾರಾಂಶ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಉಗ್ರವಾದಿಗಳಿಂದ ನಡೆದಿರುವ ಹೃದಯ ವಿದ್ರಾವಕ ಘಟನೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಖಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಉಗ್ರವಾದಿಗಳಿಂದ ನಡೆದಿರುವ ಹೃದಯ ವಿದ್ರಾವಕ ಘಟನೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಖಂಡಿಸಿದ್ದಾರೆ.

ಈ ಘಟನೆಯಿಂದ ಆಮಾಯಕರ ಜೀವಗಳನ್ನು ಬಲಿಯಾಗುವುದರೊಂದಿಗೆ ಅನೇಕ ಕುಟುಂಬಗಳನ್ನು ಧ್ವಂಸಗೊಂಡಿವೆ. ಇಂತಹ ಹಿಂಸಾಚಾರಗಳು ಸಂಪೂರ್ಣವಾಗಿ ಅಮಾನವೀಯವಾಗಿದ್ದು, ನ್ಯಾಯ, ಘನತೆ ಮತ್ತು ಶಾಂತಿಯನ್ನು ಬಯಸುವ ಸಮಾಜದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಪ್ರತಿಯೊಂದು ಜೀವವೂ ಕೂಡ ಅಮೂಲ್ಯವಾಗಿದ್ದು ಹಿಂಸಾಚಾರದಿಂದ ಉಂಟಾಗುವ ಜೀವ ನಷ್ಟವು ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ಆಗುವ ಗಾಯವಾಗಿದೆ ಎಂದವರು ಹೇಳಿದ್ದಾರೆ.

‘ಶಾಶ್ವತ ಶಾಂತಿಯ ನಿಜವಾದ ಅಡಿಪಾಯವೇ ಸಹೋದರತ್ವ’ ಎಂದು ಪವಿತ್ರ ಪೋಪ್ ಫ್ರಾನ್ಸಿಸ್ ನಮಗೆ ಆಗಾಗ್ಗೆ ನೆನಪಿಸಿದ್ದಾರೆ. ಈ ಮಾತುಗಳು ನಂಬಿಕೆಯ ಜನರಿಗೆ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಸಹಾನುಭೂತಿ ಮತ್ತು ಪರಸ್ಪರ ಗೌರವದಲ್ಲಿ ನೆಲೆಗೊಂಡ ಭವಿಷ್ಯವನ್ನು ನಿರ್ಮಿಸುವ ತುರ್ತು ಅಗತ್ಯ ನೆನಪಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸುವುದರೊಂದಿಗೆ, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. ಪ್ರದೇಶ ಮತ್ತು ರಾಷ್ಟ್ರದಾದ್ಯಂತದ ನಾಯಕರು, ಸಮುದಾಯಗಳು ಮತ್ತು ವ್ಯಕ್ತಿಗಳು ಧೈರ್ಯ, ಒಗ್ಗಟ್ಟು ಮತ್ತು ಶಾಂತಿಗಾಗಿ ಬದ್ಧತೆಯಿಂದ ಪ್ರತಿಕ್ರಿಯಿಸುವಂತೆ ಒತ್ತಾಯಿಸುತ್ತೇವೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.