ಕಸ್ತೂರಿ ರಂಗನ್ ವರದಿ ಮತ್ತೆ ಪರಿಷ್ಕರಣೆಯಾಗಲಿ :ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ

| Published : Sep 05 2024, 12:38 AM IST / Updated: Sep 05 2024, 01:08 PM IST

ಕಸ್ತೂರಿ ರಂಗನ್ ವರದಿ ಮತ್ತೆ ಪರಿಷ್ಕರಣೆಯಾಗಲಿ :ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಂಕರಘಟ್ಟದಲ್ಲಿರುವ ಕುವೆಂಪು ವಿವಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಎಸ್.ಮಧುಬಂಗಾರಪ್ಪ ಮಾತನಾಡಿದರು.

 ಶಿವಮೊಗ್ಗ :  ಕೇರಳ ರಾಜ್ಯದ ಗುಡ್ಡ ಕುಸಿತ ಪ್ರಕರಣಗಳಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ತರಾತುರಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಮುಂದಾಗಿದೆ. ಇದು ಪರಿಷ್ಕರಣೆಗೆ ಒಳಪಡದೆ ಜಾರಿಗೊಂಡರೆ ಅರಣ್ಯ ಪ್ರದೇಶ ನಿವಾಸಿಗಳು ಊರು ಬಿಡುವ ಸ್ಥಿತಿ ಎದುರಾಗಲಿದೆ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಕಳವಳ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಿಂದ ಅರಣ್ಯ ಪ್ರದೇಶಗಳ ಜನವಸತಿ ಪ್ರದೇಶ ಗಳಲ್ಲಿ ಕಾನೂನು ತೊಡಕಾಗಲಿದೆ. ಅದೇ ರೀತಿ, ಜನರು ಸಂಜೆ 6 ಗಂಟೆಯೊಳಗೆ ಮನೆ ಸೇರಬೇಕಾಗುತ್ತದೆ. ಇಲ್ಲವಾದರೆ, ಊರನ್ನೇ ಬಿಡುವ ಸಂದರ್ಭ ಎದುರಾಗಬಹುದು. ಆದ್ದರಿಂದ, ಈ ವರದಿಯನ್ನು ಪುನಃ ಪರಿಷ್ಕರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷಾತೀತವಾಗಿ ಎಲ್ಲರನ್ನೂ ಕರೆದು, ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದ ಅವರು, ಈ ವಿಚಾರದಲ್ಲಿ ರಾಜಕೀಯ ಸಲ್ಲದು. ಕಸ್ತೂರಿ ರಂಗನ್ ವರದಿಯಲ್ಲಿ ಕೇರಳ ಮಾದರಿ ಕೆಲವು ಬದಲಾವಣೆ ತಂದು ಜಾರಿಗೊಳಿಸಿದರೆ ಸೂಕ್ತ ಎಂದು ಅಭಿಪ್ರಾಯಪಟ್ಟರು.

ಕುವೆಂಪು ವಿ.ವಿ ಆಡಳಿತ ಕುಸಿತ:  ಜಿಲ್ಲೆಯ ಕಿರೀಟವಾಗಿರುವ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಇದರಿಂದ, ಮಕ್ಕಳ ಭವಿಷ್ಯವನ್ನು ಬೀದಿಗೆ ತರಲಾಗಿದೆ. ಈ ಬಗ್ಗೆ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರಲ್ಲದೆ,

ಬಂಗಾರಪ್ಪ ಅವರ ಕನಸು ಹಾಗೂ ರಾಷ್ಟ್ರಕವಿ ಕುವೆಂಪುರವರ ಹೆಸರಿಗೆ ಕಳಂಕ ತರಲು ಬಿಡುವುದಿಲ್ಲ ಎಂದು ತಿಳಿಸಿದರು.

ಸಂಪುಟ ಸಭೆಯಲ್ಲಿ ಚರ್ಚೆ:  ಮೂಲಭೂತ ಸೌಕರ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಪ್ರತಿಭಟಿಸುವ ಅನಿವಾರ್ಯತೆ, ವಿವಿಗಳಿಗೆ ಬರಕೂಡದು. ಇಲ್ಲಿನ ವಿದ್ಯಾರ್ಥಿಗಳಿಗೆ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಯಲ್ಲಿ ತಾಂತ್ರಿಕ ಸಮಸ್ಯೆ ಕಾಡುತ್ತಿದೆ. ಫಲಿತಾಂಶ ಸೇರಿದಂತೆ ಅಂಕಪಟ್ಟಿ ವಿತರಣೆ ವಿಳಂಬ, ಹೀಗೆ ಅನೇಕ ತೊಡಕುಗಳು ಇವೆ. ಆದ್ದರಿಂದ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರ ಗಮನಕ್ಕೆ ತಂದು, ಸೆ. 5ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಲಕ್ಷ್ಮೀಕಾಂತ ಚಿಮಣೂರು, ಡಾ.ಶ್ರೀನಿವಾಸ ಕರಿಯಣ್ಣ, ನಾಗರಾಜ ಗೌ

ಡ,ಜಿ.ಡಿ.ಮಂಜುನಾಥ, ರಮೇಶ್ ಶಂಕರಘಟ್ಟ, ಶಾಂತವೀರನಾಯ್ಕ್, ಗಣಪತಿ, ಬಿ.ಕೆ.ಮೋಹನ್ ಇದ್ದರು.