ಕಸ್ತೂರಿರಂಗನ್ ವರದಿ: ಜಿಲ್ಲೆಗೆ ವಿನಾಯ್ತಿ ನೀಡಲು ಸಂಸದ ಕಾಗೇರಿಗೆ ಆಗ್ರಹ

| Published : Nov 06 2024, 11:47 PM IST

ಕಸ್ತೂರಿರಂಗನ್ ವರದಿ: ಜಿಲ್ಲೆಗೆ ವಿನಾಯ್ತಿ ನೀಡಲು ಸಂಸದ ಕಾಗೇರಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರಕನ್ನಡ ಜಿಲ್ಲೆಯು ಶೇ.೮೦ ರಷ್ಟು ಭಾಗ ಅರಣ್ಯ ಪ್ರದೇಶವನ್ನು ಹೊಂದಿದ್ದು, ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದರಿಂದ ಜನಜೀವನದ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಈ ಕಾರಣದಿಂದ ಈ ವರದಿಯನ್ನು ತಿರಸ್ಕರಿಸಬೇಕು.

ಶಿರಸಿ: ಕಸ್ತೂರಿ ರಂಗನ್ ವರದಿ ಅನುಷ್ಠಾನದಲ್ಲಿ ಉತ್ತರಕನ್ನಡ ಜಿಲ್ಲೆಯನ್ನು ಕೈಬಿಟ್ಟು ವಿಶೇಷ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ, ಜಿಲ್ಲೆಯ ವಿವಿಧ ತಾಲೂಕುಗಳಿಂದ ಮುಖಂಡರು ಪಕ್ಷಾತೀತವಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಭೇಟಿ ಮಾಡಿ, ಕೇಂದ್ರ ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಿದರು.ಉತ್ತರಕನ್ನಡ ಜಿಲ್ಲೆಯು ಶೇ.೮೦ ರಷ್ಟು ಭಾಗ ಅರಣ್ಯ ಪ್ರದೇಶವನ್ನು ಹೊಂದಿದ್ದು, ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದರಿಂದ ಜನಜೀವನದ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಈ ಕಾರಣದಿಂದ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.ಪ್ರಮುಖರ ಅಹವಾಲನ್ನು ಆಲಿಸಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕಸ್ತೂರಿರಂಗನ್ ವರದಿಯಿಂದ ತೊಂದರೆ ಉಂಟಾಗುವುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲಾಗಿದ್ದು, ಇನ್ನೂ ಪ್ರಭಾವಿಯಾಗಿ ತಿಳಿಸುವ ಪ್ರಯತ್ನ ಮಾಡುತ್ತೇವೆ. ಪರಿಸರ ಉಳಿಯಬೇಕು ಎಂಬ ಬಗ್ಗೆ ನಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ.

ಭವಿಷ್ಯದ ಜನಾಂಗದ ದೃಷ್ಟಿಯಿಂದ ಪ್ರಕೃತಿ ಉಳಿಯಬೇಕು. ಆದರೆ ಜನಜೀವನವನ್ನು ಕಡೆಗಣಿಸಿ, ವರದಿ ಜಾರಿಗೊಳಿಸುವುದು ಅವೈಜ್ಞಾನಿಕವಾಗಿದೆ. ನಮ್ಮ ಜಿಲ್ಲೆಯ ಜನರು ವನ್ಯಜೀವಿ ಕಾಯ್ದೆ, ಪರಿಸರ ಸೂಕ್ಷ್ಮವಲಯ, ಪರಿಸರ ಸಂರಕ್ಷಕ ಕಾಯ್ದೆ, ವಾಯುಮಾಲಿನ್ಯ ನಿಯಂತ್ರಣ ಕಾಯ್ದೆ ಸೇರಿದಂತೆ ಇನ್ನಿತರ ಕಾಯ್ದೆ ಮಧ್ಯೆ ಈಗಾಗಲೇ ಇದ್ದೇವೆ. ಆಡಳಿತ ಮತ್ತು ಪ್ರತಿಪಕ್ಷದ ಶಾಸಕನಾಗಿದ್ದ ವೇಳೆ ವಿರೋಧ ಮಾಡಿದ್ದೇವೆ. ಅಲ್ಲದೇ ಶಾಸಕರೆಲ್ಲರೂ ಸೇರಿ ಕೇಂದ್ರ ಸಚಿವರನ್ನು ಭೇಟಿಯಾಗಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿದ್ದೇವೆ. ಸುಪ್ರೀಂಕೋರ್ಟ್‌ನ ಹಸಿರು ಪೀಠದಲ್ಲಿ ಪ್ರಕರಣ ನಡೆಯುತ್ತಿದೆ. ಸೆಟ್‌ಲೈಟ್ ಮೂಲಕ ಸರ್ವೇ ಮಾಡಿ, ವರದಿ ಘೋಷಣೆ ಮಾಡಿರುವುದು ಅವೈಜ್ಞಾನಿಕ. ಆದ್ದರಿಂದ ಈ ವರದಿ ಕೈಬಿಡಬೇಕು ಎಂಬ ಒತ್ತಾಯ ಖಂಡಿತ ಜಿಲ್ಲೆ ಜನರ ಪರವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.ಕೇರಳ ರಾಜ್ಯದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಕರ್ನಾಟಕದಲ್ಲಿ ಸ್ಥಳ ಪರಿಶೀಲನೆಯಾಗಿಲ್ಲ. ಅರಣ್ಯ ಭೂಮಿ ಮಂಜೂರಾತಿಗೆ ೩ ತಲೆಮಾರಿನ ದಾಖಲೆಗಳನ್ನು ಕೇಳಿದ್ದಾರೆ. ಅದನ್ನು ಸರಳೀಕರಣಗೊಳಿಸುವಂತೆ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿ ವಿನಂತಿಸುವುದರ ಜತೆ ಅಧಿಕಾರಿಗಳ ಜತೆಯೂ ಈ ವಿಷಯದ ಕುರಿತು ಚರ್ಚಿಸಿದ್ದೇನೆ. ಕೇಂದ್ರ ಸರ್ಕಾರದ ಅಧಿವೇಶನ ನ. ೨೪ರಿಂದ ಪ್ರಾರಂಭವಾಗಲಿದ್ದು, ಅಲ್ಲಿ ಕಸ್ತೂರಿರಂಗನ್ ವರದಿಯನ್ನು ಸರಳೀಕರಣಗೊಳಿಸಬೇಕು ಮತ್ತು ಉತ್ತರಕನ್ನಡ ಜಿಲ್ಲೆಗೆ ವಿನಾಯಿತಿ ನೀಡಬೇಕೆಂಬ ಒತ್ತಾಯ ಮಾಡುತ್ತೇನೆ.

ಕರಾವಳಿ ಭಾಗದ ಸಂಸದರು ಹಾಗೂ ಕೇಂದ್ರ ಸಚಿವರ ಸಹಾಯ ಪಡೆದು ವರದಿ ಕೈಬಿಡಬೇಕೆಂಬ ಒತ್ತಡ ಕೇಂದ್ರ ಸರ್ಕಾರದ ಮೇಲೆ ಹೇರುತ್ತೇನೆ. ಸುಪ್ರೀಂಕೋರ್ಟ್‌ನ ಹಸಿರು ಪೀಠದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದ್ದು, ಕೇಂದ್ರ ಸರ್ಕಾರವು ಸಮರ್ಥ ವಾದ ಮಂಡಿಸಿ, ನಮ್ಮ ಪ್ರಯತ್ನ ಮಾಡುತ್ತೇವೆ. ಜನಜೀವನದ ಮೇಲೆ ಪರಿಣಾಮ ಬೀರುವ ವರದಿ ನಮಗೆ ಬೇಡ ಎಂದರು.ನ್ಯಾಯವಾದಿ ನಾಗರಾಜ ನಾಯಕ ಕಾರವಾರ ಮಾತನಾಡಿ, ರಾಜ್ಯದಲ್ಲಿ ೧೫೭೦ ಹಳ್ಳಿಗಳು ಕಸ್ತೂರಿರಂಗನ್ ವ್ಯಾಪ್ತಿಗೆ ಒಳಪಡಲಿದ್ದು, ಜಿಲ್ಲೆಯಲ್ಲಿ ಸುಮಾರು ೭೦೪ ಹಳ್ಳಿಗಳು ಈ ವರದಿಯಿಂದ ತೊಂದರೆಗೆ ಒಳಗಾಗುತ್ತದೆ. ಪಶ್ಚಿಮ ಘಟ್ಟ ಹಸಿರಾಗಿರುವ ಜತೆ ರಾಜ್ಯದ ಎಲ್ಲ ಜಿಲ್ಲೆಗಳು ಹಸಿರಾಗಿರಬೇಕು. ಜನವಸತಿ ಪ್ರದೇಶವನ್ನೂ ಕಸ್ತೂರಿರಂಗನ್ ವ್ಯಾಪ್ತಿಗೆ ಒಳಪಡಿಸಿರುವುದು ಅವೈಜ್ಞಾನಿಕ ಎಂದರು.ಈ ವೇಳೆ ಜಿಪಂ ಮಾಜಿ ಸದಸ್ಯ ಗಜಾನನ ಪೈ, ಅಚವೆ ಗ್ರಾಪಂ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಪ್ರಮುಖರಾದ ಭಾಸ್ಕರ ನಾರ್ವೇಕರ, ಗಣೇಶ ಹೆಗಡೆ, ಮನೋಜ ಭಟ್ಟ, ಎಂ.ಜಿ. ಭಟ್ಟ ಕುಮಟಾ, ರಮೇಶ ನಾಯ್ಕ, ಬಿಂದೇಶ ನಾಯ್ಕ ಹಿಚ್ಕಡ, ದಿನೇಶ ಪೂಜಾರಿ, ಉದಯ ಗುನಗಾ, ನಿತ್ಯಾನಂದ ಗಾಂವ್ಕರ, ನರಸಿಂಹ ನಾಯ್ಕ ಉಮ್ಮಚ್ಚಗಿ, ಆನಂದ ಪೂಜಾರಿ ಯಲ್ಲಾಪುರ, ಸಂತೋಷ ಪೂಜಾರಿ ಯಲ್ಲಾಪುರ, ಬಾಬು ಕಮ್ಮಾರ ಶಿರಸಿ, ಗಣಪತಿ ಹೆಗಡೆ ಕುಮಟಾ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮುಖಂಡರು ಇದ್ದರು.