ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ರೈತ ಹೋರಾಟ ಸಮಿತಿಯಿಂದ ೧೧ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಚಕ್ರವರ್ತಿ ಹೇಳಿದರು.
ಸೋಮವಾರಪೇಟೆ: ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ರೈತ ಹೋರಾಟ ಸಮಿತಿಯಿಂದ ೧೧ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಚಕ್ರವರ್ತಿ ಹೇಳಿದರು.
ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಂಬಂಧ ೭ನೇ ಕರಡು ಅಧಿಸೂಚನೆ ಬಂದಿದ್ದು, ಇದರಲ್ಲಿ ಜಿಲ್ಲೆಯ ೫೫ ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ. ಕೆಲವರು ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಯಾವುದೇ ಸಮಸ್ಯೆಯಿಲ್ಲ ಎಂಬ ಹೇಳಿಕೆಗಳನ್ನು ನೀಡುವ ಮೂಲಕ ರೈತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಂತಹ ಗೊಂದಲಕ್ಕೆ ಅವಕಾಶ ನೀಡದೇ ರೈತರು ೧೧ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.೧೧ರಂದು ಬೆಳಿಗ್ಗೆ ೧೦.೩೦ಕ್ಕೆ ಸುದರ್ಶನ ವೃತ್ತದಲ್ಲಿ ಜಮಾವಣೆಗೊಂಡು ನಂತರ ಪ್ರತಿಭಟನಾ ಮೆರವಣಿಗೆಯ ಮೂಲಕ ಟೋಲ್‌ಗೇಟ್, ಗಾಂಧಿ ಮೈದಾನಕ್ಕೆ ತೆರಳಿ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲಾಗುವುದು. ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು, ಸಂಘ ಸಂಸ್ಥೆಗಳ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.
ಕಸ್ತೂರಿ ರಂಗನ್ ವರದಿಯಲ್ಲಿ ಕೊಡಗಿನ ೫೫ ಗ್ರಾಮಗಳು ಉಲ್ಲೇಖವಾಗಿವೆ. ಗ್ರಾಮಗಳ ಅಂಚಿನಿಂದ ೧೩ ಕಿ.ಮೀ. ವ್ಯಾಪ್ತಿಗೆ ಈ ವರದಿಯ ಪ್ರಭಾವ ಇರಲಿದೆ. ಕೊಡಗಿನ ಬಹುತೇಕ ಗ್ರಾಮಗಳು ಅರಣ್ಯದ ಅಂಚಿಗೆ ಇದ್ದು, ವರದಿಯ ಅನುಷ್ಠಾನದಲ್ಲಿ ಭವಿಷ್ಯದಲ್ಲಿ ಸಮಸ್ಯೆ ಎದುರಾಗಲಿದೆ ಎಂದರು. ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಸಮಸ್ಯೆಯೇ ಇಲ್ಲ ಎಂದು ಪರಿಸರವಾದಿಗಳೆಂದು ಹೇಳಿಕೊಳ್ಳುವ ಕೆಲವರು ಹೇಳುವ ಮೂಲಕ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಭೂಮಿ ಉಳಿಯಬೇಕಾಗಿದೆ. ಇದನ್ನು ಅರಣ್ಯ ಅಥವಾ ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಣೆ ಮಾಡಲು ಯಾವ ರೈತರೂ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದು ಸುರೇಶ್ ಚಕ್ರವರ್ತಿ ಹೇಳಿದರು.ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆ ಕರೆದು ವರದಿಯ ಬಗ್ಗೆ ಚರ್ಚೆ ನಡೆಸಿ, ಜನರ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸುವಂತೆ, ತಕರಾರು ಸಲ್ಲಿಸುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಮಾಡಿದ್ದೆವು. ಈವರೆಗೆ ಅಧಿಕಾರಿಗಳು ಸಭೆ ಕರೆದಿಲ್ಲ. ಈ ಹಿನ್ನೆಲೆ ಎಲ್ಲಾ ಗ್ರಾಮ ಸಮಿತಿಗಳು ಸ್ವಯಂಪ್ರೇರಿತರಾಗಿ ತಕರಾರು ಸಲ್ಲಿಸಬೇಕು ಎಂದರು.
ಸಮಿತಿಯ ಕಾನೂನು ಸಲಹೆಗಾರ ಬಿ.ಜೆ. ದೀಪಕ್ ಮಾತನಾಡಿ, ೭ನೇ ಅಧಿಸೂಚನೆಗೆ ತಕರಾರು ಸಲ್ಲಿಸದೇ ಹೋದಲ್ಲಿ, ಇದೇ ಅಂತಿಮವಾಗಲಿದೆ. ತಕರಾರು ಸಲ್ಲಿಸಿದರೆ ಮಾರ್ಪಾಡು ಅಥವಾ ಕೈಬಿಡಲಾಗುತ್ತದೆ. ಈ ಹಿಂದೆ ಕೇರಳ ಸರ್ಕಾರ ವರದಿಗೆ ತಕರಾರು ಸಲ್ಲಿಸಿದ ಹಿನ್ನೆಲೆ ೭ನೇ ಕರಡು ಅಧಿಸೂಚನೆಯಲ್ಲಿ ಕೇರಳ ರಾಜ್ಯದ ಹೆಸರು ಇಲ್ಲ ಎಂಬುದನ್ನು ಮನಗಾಣಬೇಕಿದೆ ಎಂದು ದೀಪಕ್ ಹೇಳಿದರು.ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ಹಿಂಪಡೆಯಬೇಕು. ಪರಿಸರ ಸೂಕ್ಷ್ಮ ವಲಯವನ್ನು ಶೂನ್ಯಕ್ಕೆ ಇಳಿಸಬೇಕು. ಸೆಕ್ಷನ್ ೪ ವಾಪಸ್ ಪಡೆಯಬೇಕು. ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದರು.
ಬೆಳೆಗಾರರ ಸಮಸ್ಯೆಗೆ ಬೇಕು ಪರಿಹಾರ: ಈ ವರ್ಷ ಮಳೆಯ ಪ್ರಮಾಣದಲ್ಲಿ ಏರುಪೇರಾಗಿರುವ ಪರಿಣಾಮ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಕಾಫಿ ಕಾಯಿಗಳಲ್ಲಿ ಕಪ್ಪು ಕೊಳೆ (ಬ್ಲ್ಯಾಕ್ ರಾಟ್) ರೋಗ ಕಾಣಿಸಿಕೊಂಡು ಉದುರುವಿಕೆ ಹೆಚ್ಚಾಗಿದೆ. ಕೂಡಲೇ ಕ್ರಮ ಕೈಗೊಂಡು ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘ ಸರ್ಕಾರವನ್ನು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದೆ.ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ, ಕಾಫಿ ಗಿಡಗಳಲ್ಲಿ ಹೂ ಅರಳುವಿಕೆ ವಿಳಂಬವಾಗಿದೆ. ಬಳಿಕ ಆಗಾಗ್ಗೆ ಸಣ್ಣ ಪ್ರಮಾಣದ ಮಳೆಯಾದ ಕಾರಣ ಹಲವು ಹಂತಗಳಲ್ಲಿ ಕಾಫಿ ಗಿಡಗಳು ಹೂ ಬಿಟ್ಟಿವೆ. ಇದರಿಂದ ಕಾಫಿ ಕಾಯಿಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರಿದೆ ಎಂದು ಸಂಘದ ಅಧ್ಯಕ್ಷ ಬಿ.ಎಂ. ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಸರ್ಕಾರಕ್ಕೆ ತಿಳಿಸಿದ್ದಾರೆ.
ಜುಲೈ ತಿಂಗಳ ಕೊನೆಯ ವಾರದಿಂದ ಆರಂಭವಾದ ಹೆಚ್ಚಿನ ಮಳೆಯ ಪರಿಣಾಮ ಕಾಫಿ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ, ಕಾಫಿ ಕಾಯಿಗಳಲ್ಲಿ ಬ್ಲ್ಯಾಕ್ ರಾಟ್ ರೋಗ ಕಾಣಿಸಿಕೊಂಡಿದೆ. ಇದರಿಂದ ಕಾಯಿಗಳು ಉದುರುತ್ತಿದ್ದು, ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಕಾಫಿ ಗಿಡಗಳಿಗೆ ಅಗತ್ಯವಿರುವ ಔಷಧೋಪಚಾರದ ಬಗ್ಗೆ ತೋಟಗಾರಿಕಾ ಹಾಗೂ ಕಾಫಿ ಮಂಡಳಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಂಘ ಮನವಿ ಮಾಡಿದೆ.ಮಳೆಯ ಕೊರತೆಯಿಂದ ಉಂಟಾಗುವ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಮೋಡ ಬಿತ್ತನೆ ಕೊಡಗಿಗೆ ಅವಶ್ಯಕತೆ ಇಲ್ಲ. ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ನೆರವು ನೀಡಬೇಕು ಎಂದು ಸಂಘ ಆಗ್ರಹಿಸಿದೆ.
ಇದಲ್ಲದೆ, ಕಸ್ತೂರಿರಂಗನ್ ವರದಿ ಜಾರಿ ಹಾಗೂ ಪರಿಸರ ಸೂಕ್ಷ್ಮ ವಲಯ ವಿಸ್ತರಣೆಯಿಂದ ಕಾಫಿ ಬೆಳೆಗಾರರು ಸೇರಿದಂತೆ ರೈತರ ಬದುಕು ಅತಂತ್ರವಾಗಲಿದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ. ಅವೈಜ್ಞಾನಿಕವಾಗಿ ಇಎಸ್‌ಜೆಡ್ ವ್ಯಾಪ್ತಿಯನ್ನು ವಿಸ್ತರಿಸುವ ಕ್ರಮವನ್ನು ವಿರೋಧಿಸುವುದಾಗಿ ತಿಳಿಸಿರುವ ಸಂಘ, ಕಸ್ತೂರಿರಂಗನ್ ವರದಿಯಿಂದ ಕೊಡಗಿನ ಗ್ರಾಮಗಳನ್ನು ಕೈಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನವನ್ನು ರಾಜ್ಯ ಸರ್ಕಾರ ತಿರಸ್ಕರಿಸಿರುವುದನ್ನು ಸಂಘ ಸ್ವಾಗತಿಸಿದೆ ಎಂದು ತಿಳಿಸಿದ್ದಾರೆ.