ಸಾರಾಂಶ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಕಸ್ತೂರಿ ರಂಗನ್ ವರದಿ, ಒತ್ತುವರಿ ಸಮಸ್ಯೆಗಳನ್ನು ಒಂದು ತಿಂಗಳ ಒಳಗೆ ಬಗೆಹರಿಸುತ್ತೇವೆ ಎಂದು ಜನಪ್ರತಿನಿಧಿಗಳು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಆದ್ದರಿಂದ ಮುಂದಿನ ಹೋರಾಟ ರೂಪಿಸುತ್ತಿದ್ದೇವೆ ಎಂದು ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಎಚ್ಚರಿಕೆ ನೀಡಿದರು.ಅವರು ಬುಧವಾರ ಸೀತೂರು ಗ್ರಾಮ ಪಂಚಾಯಿತಿ ನಾಗರಮಕ್ಕಿಯಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕರೆದಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿ, ಕಸ್ಕೂರಿ ರಂಗನ್ ವರದಿ, ಒತ್ತುವರಿ ತೆರವು ವಿರೋದಿಸಿ ಕಳೆದ 1 ತಿಂಗಳ ಹಿಂದೆ ಶೃಂಗೇರಿ ಕ್ಷೇತ್ರ ಬಂದ್ ಕರೆ ನೀಡಲಾಗಿತ್ತು. ಆಗ ಕೊಪ್ಪದಲ್ಲಿ ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ವೇದಿಕೆ ನೇತ್ರತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಎಲ್ಲಾ ಜನಪ್ರತಿನಿಧಿಗಳು ಮುಂದಿನ ಒಂದು ತಿಂಗಳ ಒಳಗೆ ನಿಯೋಗ ಕೊಂಡೊಯ್ದು ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಒಂದು ತಿಂಗಳು ಕಳೆದರೂ ಜನಪ್ರತಿನಿಧಿಗಳು ಕೊಟ್ಟ ಮಾತು ಉಳಿಸಿಕೊಂಡಿಲ್ಲ.ಮುಂದೆ ಯಾವ ರೀತಿಯಲ್ಲಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಮುಂದಿನ ದಿನಗಳಲ್ಲಿ ರೈತರು ಪಕ್ಷಾತೀವಾಗಿ ಹೋರಾಟ ಮಾಡಬೇಕಾಗಿದೆ ಎಂದರು.
2020 ರಲ್ಲಿ ಕಸ್ತೂರಿ ರಂಗನ್ ವಿರೋದಿಸಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಆಕ್ಷೇಪಣೆ ಸಲ್ಲಿಸಲಾಗಿತ್ತು. ಆ ಸಮಯದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ನಡೆದಿರಲಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳು ಇದ್ದರೂ ಗ್ರಾಮ ಸಭೆ ಕರೆದಿರಲಿಲ್ಲ. ಬಾಳೆ ಗ್ರಾಮ ಪಂಚಾಯಿತಿಯಲ್ಲಿ ಮೊದಲ ಗ್ರಾಮ ಸಭೆ ಕರೆದು ಕಸ್ಕೂರಿ ರಂಗನ್ ವರದಿಗೆ ಆಕ್ಷೇಪ ಸಲ್ಲಿಸಲಾಗಿತ್ತು. 2022 ರಲ್ಲಿ ರೈತರು ಆಕ್ಷೇಪಣೆ ಸಲ್ಲಿಸಿದ್ದರು. ಆದರೂ ಸರ್ಕಾರ ಸ್ಪಂದಿಸಿಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಒಂದೇ ರೀತಿ ಆಕ್ಷೇಪಣೆ ಸಲ್ಲಿಸಬೇಕು. ಜೊತೆಗೆ ರೈತರು ವೈಯ್ಯಕ್ತಿಕವಾಗಿಯೂ ಕಸ್ತೂರಿ ರಂಗನ್ ವರದಿಯಿಂದ ತಮಗೆ ಆಗುವ ತೊಂದರೆಗಳನ್ನು ತಿಳಿಸಿ ಆಕ್ಷೇಪಣೆ ಸಲ್ಲಿಸಿರಿ ಎಂದು ಕರೆ ನೀಡಿದರು.ಸೆಕ್ಷನ್- 4 ನೋಟಿಫಿಕೇಶನ್ ಆಗುತ್ತಲೇ ಇದೆ. ಡೀಮ್ ಫಾರೆಸ್ಟ್ ಮಾಡುತ್ತಿದ್ದಾರೆ. ಕಂದಾಯ ಭೂಮಿಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್, ಅಂಗನವಾಡಿ ಇದೆ. ರೈತರು ಮನೆ ಕಟ್ಟಿಕೊಂಡಿದ್ದಾರೆ. ಅಂತಹ ರೈತರು ಅದನ್ನು ಆಕ್ಷೇಪಣೆಯಲ್ಲಿ ವಿವರವಾಗಿ ಸೇರಿಸಬೇಕು ಎಂದು ಸಲಹೆ ನೀಡಿದರು. 2022ರ ಅಕ್ಟೋಬರ್ 15ರಂದು ತಾಲೂಕಿನಲ್ಲಿ ರೈತರು ದೊಡ್ಡ ಪ್ರತಿಭಟನೆ ಮಾಡಲಾಗಿತ್ತು. 22ರಂದು ಕೇಂದ್ರಕ್ಕೆ ರಾಜ್ಯದಿಂದ ನಿಯೋಗ ಹೋಗಲಾಗಿತ್ತು. ಕೇಂದ್ರ ಸಚಿವ ಪ್ರಕಾಶ್ ಜಾವಡಕರ್ ಅವರು ಸಂಬಂಧಪಟ್ಟವರು ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯಕ್ಕೆ ಆದೇಶ ನೀಡಿದ್ದರು. ಆದರೆ, ಆದೇಶಗಳು ಗ್ರಾಮ ಪಂಚಾಯಿತಿಗೆ ಬರಲೇ ಇಲ್ಲ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ದಿವಾಕರ್ ಮಾತನಾಡಿ, ಈ ವಿಶೇಷ ಗ್ರಾಮ ಸಭೆಯು ರೈತರ ಪರವಾದ ಸಭೆಯಾಗಿದೆ. ಸದ್ಯಕ್ಕೆ ರೈತರು ಸಂಕಷ್ಠದಲ್ಲಿದ್ದಾರೆ. ಆದ್ದರಿಂದ ರೈತರು ಒಟ್ಟಾಗಿ ಕಸ್ತೂರಿ ರಂಗನ್ ವರದಿ ವಿರುದ್ಧ ಆಕ್ಷೇಪಣೆ ಸಲ್ಲಿಸಬೇಕು. ಗ್ರಾಮ ಪಂಚಾಯಿತಿಯಿಂದ ರೆಜಿಲೇಷನ್ ಮಾಡಿ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ ಎಂದರು.ನಂತರ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ನಿರ್ಣಯ ಕೈಗೊಳ್ಳಲಾಯಿತು. ಪ್ರತಿಯೊಬ್ಬರೂ ವೈಯ್ಯಕ್ತಿಕ ಆಕ್ಷೇಪಣೆ ಸಲ್ಲಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿಯ ಸದಸ್ಯ ಹಾತೂರು ಪ್ರಸನ್ನ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷೆ ಪ್ರೇಮ, ಸದಸ್ಯರುಗಳಾದ ಎನ್.ಪಿ.ರಮೇಶ್, ಎಸ್.ಉಪೇಂದ್ರ, ಕವಿತಾ, ದಾಮಿನಿ, ಸಿದ್ದಪ್ಪಗೌಡ, ವಿಜಯ, ಸುಜಾತ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾದ ಎನ್.ಪಿ.ರವಿ, ಸದಾಶಿವ, ಗ್ರಾಮ ಪಂಚಾಯಿತಿ ಪಿಡಒ ಶ್ರೀನಿವಾಸ, ಸೀತೂರು ವೃತ್ತದ ಉಪ ವಲಯ ಅರಣ್ಯಾಧಿಕಾರಿ ಈಶ್ವರ್ ಇದ್ದರು.
ನೂರಾರು ರೈತರು ಸಭೆಯಲ್ಲಿ ಹಾಜರಿದ್ದು ಚರ್ಚೆ ನಡೆಸಿದರು.