ಮಲೆನಾಡಿಗೆ ಕಸ್ತೂರಿ ರಂಗನ್ ಯೋಜನೆ ಅಗತ್ಯವಿಲ್ಲ

| Published : Sep 26 2024, 10:01 AM IST

ಸಾರಾಂಶ

ಮಲೆನಾಡಿನಲ್ಲಿ ಇರುವ ಹುಲಿ ಯೋಜನೆ, ಅಭಯಾರಣ್ಯ, ಉದ್ಯಾನವನ ಸೇರಿದಂತೆ ಇನ್ನಿತರೆ ಹತ್ತು ಹಲವು ಯೋಜನೆಗಳ ಮೂಲಕ ಕಾಡನ್ನು ಉಳಿಸಲು ಸಾಧ್ಯವಿದೆ. ಆದರೆ ಕಸ್ತೂರಿ ರಂಗನ್‌ನಂತಹ ಮಾರಕ ಯೋಜನೆ ಮಲೆನಾಡಿಗೆ ಅವಶ್ಯಕತೆಯಿಲ್ಲ ಎಂದು ನಾಗರೀಕ ವೇದಿಕೆಯ ಸಂಚಾಲಕ ಹಿರಿಯಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಮಲೆನಾಡಿನಲ್ಲಿ ಇರುವ ಹುಲಿ ಯೋಜನೆ, ಅಭಯಾರಣ್ಯ, ಉದ್ಯಾನವನ ಸೇರಿದಂತೆ ಇನ್ನಿತರೆ ಹತ್ತು ಹಲವು ಯೋಜನೆಗಳ ಮೂಲಕ ಕಾಡನ್ನು ಉಳಿಸಲು ಸಾಧ್ಯವಿದೆ. ಆದರೆ ಕಸ್ತೂರಿ ರಂಗನ್‌ನಂತಹ ಮಾರಕ ಯೋಜನೆ ಮಲೆನಾಡಿಗೆ ಅವಶ್ಯಕತೆಯಿಲ್ಲ ಎಂದು ನಾಗರೀಕ ವೇದಿಕೆಯ ಸಂಚಾಲಕ ಹಿರಿಯಣ್ಣ ಹೇಳಿದರು.

ಪಟ್ಟಣದ ಬಿ. ಕಣಬೂರು ಗ್ರಾಪಂ ಸಭಾಂಗಣದಲ್ಲಿ ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆಗೆ ಆಕ್ಷೇಪ ವ್ಯಕ್ತಪಡಿಸಲು ಬುಧವಾರ ಸೇರಿದ್ದ ವಿಶೇಷ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

1915ರಲ್ಲಿ ಬ್ರಿಟೀಷರು ಅರಣ್ಯ ಕಾಯ್ದೆಗಳನ್ನು ತಂದು ಅರಣ್ಯವನ್ನು ಉಳಿಸುವ ಕೆಲಸ ಮಾಡಿದ್ದಾರೆ. ಆ ಕಾಯ್ದೆಯನ್ವಯ ನಾವೂ ಕೂಡ ಅರಣ್ಯವನ್ನು ಉಳಿಸಬೇಕಿದೆ. ಇದರ ಬಗ್ಗೆ ನಮ್ಮ ತಕರಾರು ಇಲ್ಲ. ಶೇ.33ರಷ್ಟು ಅರಣ್ಯ ಇರಬೇಕು ಎಂಬುದು ಅರಣ್ಯ ಕಾಯ್ದೆಯಾಗಿದೆ ಎಂದು ತಿಳಿಸಿದರು.ಹಿಂದಿನ ಯೋಜನೆಗಳು ಕೆಲವೊಂದು ವ್ಯಾಪ್ತಿಗೆ ಸೀಮಿತವಾಗಿರುತಿತ್ತು. ಆದರೆ ಕಸ್ತೂರಿ ರಂಗನ್ ಯೋಜನೆಯಲ್ಲಿ ಎಲ್ಲಾ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ನೀತಿಗಳೇ ಇವೆ. ಕಸ್ತೂರಿ ರಂಗನ್ ವರದಿ ಉಪಗ್ರಹ ಆಧಾರಿತವಾಗಿ ಸರ್ವೆಯನ್ನು ಮಾಡಿದ್ದು, ಅಡಕೆ, ಕಾಫಿ ತೋಟ, ಗದ್ದೆಯನ್ನೂ ಸಹ ಅರಣ್ಯ ಎಂದು ಉಲ್ಲೇಖಿಸಿದ್ದಾರೆ. ಭೌತಿಕವಾದ ಸರ್ವೆಯನ್ನು ಮಾಡಿಲ್ಲ. ಸುಮಾರು 60 ಸಾವಿರ ಹೆಕ್ಟೇರ್ ಭೂಮಿಯನ್ನು ಯೋಜನೆಯಡಿ ಗುರುತಿಸಿಕೊಂಡಿದ್ದಾರೆ ಎಂದರು. ಇದರಿಂದ ಕೃಷಿ ಸಂಬಂಧಿತ ಚಟುವಟಿಕೆ ಮಾಡಲು ಸಾಧ್ಯವೇ ಇಲ್ಲ. ಮಾನವರು ಉಪಯೋಗಿಸುವ ರಸಗೊಬ್ಬರದಿಂದ ಸೂಕ್ಷ್ಮ ಜೀವಿಗಳಿಗೆ ತೊಂದರೆಯಾಗಲಿದೆ ಎಂದು ಕಸ್ತೂರಿ ರಂಗನ್ ವರದಿ ಹೇಳಿದೆ ಎಂದು ತಿಳಿಸಿದರು.

ಈ ಬಗ್ಗೆ ಬಹಳ ಚಿಂತನೆ ಮಾಡಬೇಕಿದೆ. ಈ ವರದಿ ಪ್ರಕಾರ ನಾವು ಕೃಷಿ ಮಾಡುವುದೇ ಅಸಾಧ್ಯವಾಗಲಿದೆ. ಎನ್‌ಜಿಓಗಳು ಪರಿಸರದ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಂಡು ಸುಪ್ರೀಂ ಕೋರ್ಟ್ನ ಹಸಿರು ಪೀಠದ ಮೂಲಕ ಯೋಜನೆ ಜಾರಿಗೆ ಒತ್ತಡ ತರುತ್ತಿದ್ದು, ಯೋಜನೆ ವ್ಯಾಪ್ತಿಗೆ ಬರುವ ಆರು ರಾಜ್ಯಗಳು ಯೋಜನೆಗೆ ವಿರೋಧ ಮಾಡಿರುವುದರಿಂದ ಯೋಜನೆ ಜಾರಿಯಲ್ಲಿ ವಿಳಂಬವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಪುನಃ ಅಧಿಸೂಚನೆ ಯಥಾವತ್ತಾಗಿ ಹೊರಡಿಸಿದ್ದಾರೆ. ಈ ಬಗ್ಗೆ ಜನ ಯಾಕೆ ವಿರೋಧ ಮಾಡುತ್ತಿದ್ದಾರೆ ಎಂದು ಅಧಿಕಾರಿಯನ್ನು ಜನರ ಅಭಿಪ್ರಾಯ ಸಂಗ್ರಹಿಸಲು ನೇಮಕ ಮಾಡಿದ್ದರೂ ಸಹ, ಅವರು ಜನರ ಸಮಸ್ಯೆ ಆಲಿಸಲು ಬರಲಿಲ್ಲ. ಅಧಿಸೂಚನೆಗೆ ಆಕ್ಷೇಪ ಸಲ್ಲಿಸಲು ಸೆ.30 ಕಡೆಯ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಮಲೆನಾಡಿನಾದ್ಯಂತ ಲಕ್ಷಾಂತರ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನರು ಅರಣ್ಯ ಇಲಾಖೆ, ಸರ್ಕಾರಕ್ಕೆ ನೇರವಾಗಿ ಆಕ್ಷೇಪ ಪತ್ರ ಬರೆದಿದ್ದು, ಹೋರಾಟ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಸೆ. 26ರಂದು ರಾಜ್ಯ ಸರ್ಕಾರದ ಸಂಪುಟ ಸಭೆ ನಡೆಯಲಿದ್ದು, ಈ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಯೋಜನೆ ಜಾರಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಒತ್ತಡವಿದ್ದು ಸಂಪುಟ ಸಭೆ ಯಾವ ನಿರ್ಧಾರ ಹೊರಹಾಕಲಿದೆ ಎಂಬುದನ್ನು ನೋಡಬೇಕು ಎಂದು ತಿಳಿಸಿದರು.

ವಯನಾಡು ದುರಂತವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಜಾರಿ ಮಾಡಲು ಮುಂದಾಗುತ್ತಿರುವುದು ಆಕ್ಷೇಪಾರ್ಹವಾಗಿದ್ದು, ವಯನಾಡು ದುರಂತವೇ ಎಲ್ಲಕ್ಕೆ ಹೊಣೆಯಲ್ಲ. ಇಂತಹ ಎಷ್ಟೋ ದುರಂತಗಳು ದೇಶದಲ್ಲಿ ನಡೆದಿವೆ. 1924ರಿಂದಲೂ ದೇಶದಲ್ಲಿ ಹಲವು ದುರಂತ, ಬರಗಾಲಗಳು ನಡೆದಿವೆ. ಯಾವುದೇ ರೀತಿಯ ಅತಿಕ್ರಮಣ, ಅರಣ್ಯ ನಾಶದಿಂದ ದುರಂತಗಳು ನಡೆಯಲ್ಲ. ಇವು ಪ್ರಕೃತಿದತ್ತವಾಗಿ ನಡೆಯುವಂತಹುದು ಎಂದರು.

ಇದೀಗ ಪತ್ರದ ಮೂಲಕ ಮಾತ್ರ ವಿರೋಧ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ತೀವ್ರ ಸ್ವರೂಪದ ಹೋರಾಟಗಳು ನಡೆಯಲಿದೆ ಎಂದು ಹೇಳಿದರು.ಬಿ. ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಗೆ ಬಿ. ಕಣಬೂರು ಗ್ರಾಮಸ್ಥರು ಸಂಪೂರ್ಣ ವಿರೋಧಿಸಿದ್ದು, ಈ ಬಗ್ಗೆ ವಿಶೇಷ ಗ್ರಾಮಸಭೆ ನಡೆಸಿ ಗ್ರಾಮಸ್ಥರ ಆಕ್ಷೇಪಣೆಯನ್ನು ಸಭಾ ನಡವಳಿಕೆಯಲ್ಲಿ ದಾಖಲಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಯಾವುದೇ ಕಾರಣಕ್ಕೂ ಯೋಜನೆ ಜಾರಿಗೆ ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಿದರು.

ಬಿ. ಕಣಬೂರು ಗ್ರಾಪಂ ಉಪಾಧ್ಯಕ್ಷೆ ರಂಜಿತಾ, ಪಿಡಿಓ ಕಾಶಪ್ಪ, ಕಾರ್ಯದರ್ಶಿ ರಾಮಪ್ಪ, ಸದಸ್ಯರಾದ ಬಿ. ಜಗದೀಶ್ಚಂದ್ರ, ಕೋಕಿಲಮ್ಮ, ಎಂ.ಎಸ್. ಅರುಣೇಶ್, ಇಬ್ರಾಹಿಂ ಶಾಫಿ, ರವಿಚಂದ್ರ, ಪ್ರತಿಮಾ, ಕವಿತಾ, ಪ್ರಮುಖರಾದ ಜಾನ್ ಡಿ. ಸೋಜಾ, ಸಿ.ಕೆ. ಶ್ರೀನಿವಾಸ್, ಕೌಶಿಕ್ ಮತ್ತಿತರರು ಹಾಜರಿದ್ದರು.