ಸಾರಾಂಶ
ಆಲ್ಕೋಡ್ ಗ್ರಾಮದ ಕಸ್ತೂರಿಬಾ ವಸತಿ ಶಾಲೆಯಲ್ಲಿ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಏಕಾಏಕಿ ತಲೆ ತಿರುಗಿದಂತಾಗಿರುವ ಹಿನ್ನೆಲೆಯಲ್ಲಿ 8 ವಿದ್ಯಾರ್ಥಿನಿಯರನ್ನು ದೇವದುರ್ಗದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಮಂಗಳವಾರ ಜರುಗಿದೆ
ಕನ್ನಡಪ್ರಭ ವಾರ್ತೆ ದೇವದುರ್ಗ
ತಾಲೂಕಿನ ಆಲ್ಕೋಡ್ ಗ್ರಾಮದ ಕಸ್ತೂರಿಬಾ ವಸತಿ ಶಾಲೆಯಲ್ಲಿ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಏಕಾಏಕಿ ತಲೆ ತಿರುಗಿದಂತಾಗಿರುವ ಹಿನ್ನೆಲೆಯಲ್ಲಿ 8 ವಿದ್ಯಾರ್ಥಿನಿಯರನ್ನು ದೇವದುರ್ಗದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಮಂಗಳವಾರ ಜರುಗಿದೆ. ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರು ಬೆಳಗ್ಗೆ ಚಿತ್ರನ್ನಾ ಊಟ ಮಾಡಿದ್ದರು ಎನ್ನಲಾಗಿದೆ. ಆದರೆ ಆಹಾರದ ವ್ಯತಿರಿಕ್ತದ ಲಕ್ಷಣಗಳು ವಿದ್ಯಾರ್ಥಿನಿಯರಲ್ಲಿ ಕಂಡುಬಂದಿಲ್ಲ. ವಾಂತಿ-ಭೇದಿ ಲಕ್ಷಣಗಳೂ ಇಲ್ಲಾ. ಉಳಿದ ವಿದ್ಯಾರ್ಥಿನಿಯರು ಹುಷಾರಾಗಿದ್ದಾರೆ ಎನ್ನಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿಯುತ್ತಲೇ ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ ಅರಕೇರಾದಲ್ಲಿ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ಮಾಡಿ, ಆಂಬ್ಯುಲೆನ್‌ನಲ್ಲಿ ದೇವದುರ್ಗ ಆಸ್ಪತ್ರೆಗೆ ಕಳುಹಿಸಿದ್ದಾರೆ. ಕಳೆದ ತಿಂಗಳ ಹಿಂದೆ ಇದೇ ವಸತಿ ಶಾಲೆಯಲ್ಲಿ ಸಾಂಬರ್‌ನಲ್ಲಿ ವಿಷ ಬೆರಿಸಿರುವ ಶಂಕೆ ವ್ಯಕ್ತವಾಗಿತ್ತು, ಮತ್ತೊಂದು ಘಟನೆ ಜರುಗಿರುವದು ಪಾಲಕರಲ್ಲಿ ಆತಂಕ ಮೂಡಿಸಿದೆ.ಅಸ್ವಸ್ತಗೊಂಡ ವಿದ್ಯಾರ್ಥಿನಿಯರೆಲ್ಲರೂ ಆರಾಂ ಆಗಿದ್ದಾರೆ. ದೇವದುರ್ಗ ಸಾರ್ವಜನಿಕ ಆಸ್ಪತ್ರೆ ಪ್ರತ್ಯೇಕ ವಾರ್ಡನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ವಸತಿ ಶಾಲೆಗೆ ಭೇಟಿ ನೀಡಿ, ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದೆ.- ಡಾ.ಬನದೇಶ್ವರ ಜಿ. ತಾಲೂಕು ಆರೋಗ್ಯ ಅಧಿಕಾರಿ ದೇವದುರ್ಗ