ಸಾರಾಂಶ
ಗುಳೇದಗುಡ್ಡ ತಾಲೂಕಿನ ಚಾಮುಂಡೇಶ್ವರಿ ಕಟಗೇರಿ ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟ ಆತ್ಮನಿರ್ಭರ ಸಂಘಟನಾ ರಾಷ್ಟ್ರ ಪ್ರಶಸ್ತಿ ಪಡೆದಿದುಕೊಂಡಿದೆ. ಒಂದು ಕುಟುಂಬ ಸದೃಢವಾಗಿ ಆರ್ಥಿಕವಾಗಿ ಸಬಲಗೊಳ್ಳಲು ಮಹಿಳೆಯರ ಪಾತ್ರ ಅಪಾರವಾಗಿದೆ. ಗೃಹಿಣಿಯರು ಕೇವಲ ಮನೆ ಕೆಲಸಕ್ಕೆ ಸೀಮಿತವಾಗದೆ ಸ್ವಯಂ ಉದ್ಯೋಗ ಪ್ರಾರಂಭಿಸಿ ರಾಷ್ಟ್ರ ಪ್ರಶಸ್ತಿ ಪಡೆದಿರುವುದು ಸಂತಸದ ವಿಚಾರ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗುಳೇದಗುಡ್ಡ ತಾಲೂಕಿನ ಚಾಮುಂಡೇಶ್ವರಿ ಕಟಗೇರಿ ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟ ಆತ್ಮನಿರ್ಭರ ಸಂಘಟನಾ ರಾಷ್ಟ್ರ ಪ್ರಶಸ್ತಿ ಪಡೆದಿದುಕೊಂಡಿದೆ.ಒಂದು ಕುಟುಂಬ ಸದೃಢವಾಗಿ ಆರ್ಥಿಕವಾಗಿ ಸಬಲಗೊಳ್ಳಲು ಮಹಿಳೆಯರ ಪಾತ್ರ ಅಪಾರವಾಗಿದೆ. ಗೃಹಿಣಿಯರು ಕೇವಲ ಮನೆ ಕೆಲಸಕ್ಕೆ ಸೀಮಿತವಾಗದೆ ಸ್ವಯಂ ಉದ್ಯೋಗ ಪ್ರಾರಂಭಿಸಿ ರಾಷ್ಟ್ರ ಪ್ರಶಸ್ತಿ ಪಡೆದಿರುವುದು ಸಂತಸದ ವಿಚಾರ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೂತನವಾಗಿ ನಿರ್ಮಿಸಿದ ಸಾವಿತ್ರಿಬಾಯಿ ಪುಲೆ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸಂಜೀವಿನಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಸ್ವಯಂ ಉದ್ಯೋಗ ಮೂಲಕ ಸಾವಲಂಬಿಗಳಾಗಿ ಬದುಕಿದರೆ ಗ್ರಾಮಗಳು ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಅನೇಕ ಜನರಿಗೆ ಉದ್ಯೋಗಾವಕಾಶ ಸಿಗುತ್ತದೆ. ಕಟಗೇರಿ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದಲ್ಲಿ ಸುಮಾರು 1400 ಮಹಿಳೆಯರು ಉದ್ಯೋಗಸ್ಥರಾಗಿದ್ದು, ನೇಕಾರಿಕೆ, ಬಟ್ಟೆ, ಊದುಬತ್ತಿ ತಯಾರಿಕೆ ಮುಂತಾದ ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡು ಉತ್ಪನ್ನ ಮಾರಾಟ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಒಂದು ಮಹತ್ವದ ಸಾಧನೆಯಾಗಿದೆ. ಈ ಒಕ್ಕೂಟದ ಕಾರ್ಯ ಹೀಗೆ ಮುಂದುವರೆಯಲಿ ಎಂದು ಹೇಳಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮೈಲಾರಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಮಹೇಶ ಹೊಸಗೌಡ್ರು, ಗುಳೇದಗುಡ್ಡ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ, ಕಟಗೇರಿ ಗ್ರಾಪಂ ಮಾಜಿ ಅಭಿವೃದ್ಧಿ ಅಧಿಕಾರಿ ಆರತಿ ಎಂ. ಕ್ಷತ್ರಿ, ಗ್ರಾಪಂ ಅಧ್ಯಕ್ಷೆ ಸುಮಿತ್ರ ದ್ಯಾವನ್ನವರ್, ಉಪಾಧ್ಯಕ್ಷ ರಾಮಚಂದ್ರಪ್ಪ ದೋಣಿ, ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.