ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದೇವಿಯ ಪರಿವಾರ ದೇವತೆಯಾದ ಶ್ರೀ ರಕ್ತೇಶ್ವರೀ ಗುಡಿಯನ್ನು ಬರೋಡ ಶಶಿಧರ ಶೆಟ್ಟಿ ಸೇವಾ ರೂಪದಲ್ಲಿ ಸುಮಾರು 90 ಲಕ್ಷ ರು. ವೆಚ್ಚದಲ್ಲಿ ನವೀಕರಿಸಿ ನೀಡಿದ್ದು, ಏ. 2ರಂದು ಶ್ರೀ ರಕ್ತೇಶ್ವರಿ ದೇವರ ಪುನರ್ ಪ್ರತಿಷ್ಠೆ ಹಾಗೂ ಅಷ್ಟೋತ್ತರ ಕಲಶಾಭಿಷೇಕ ನಡೆಯಲಿದೆ.

ಆ ಪ್ರಯುಕ್ತ ಮಾ.31ರಂದು ತೋರಣ ಮುಹೂರ್ತ, ವಾಸ್ತುಪೂಜೆ, ವಾಸ್ತು ಹೋಮಾದಿಗಳು, ಏ. 1ರಂದು ಪ್ರಾಯಶ್ಚಿತ್ತ ಹೋಮಾದಿಗಳು, ರಕ್ತೇಶ್ವರಿಯ ಅಧಿವಾಸ ಹೋಮ, ಶಕ್ತಿದಂಡಕ ಮಂಡಲ ಪೂಜೆ, ಏ.2ರಂದು ಬೆಳಗ್ಗೆ ಕಲಶಾಧಿವಾಸ, ದುರ್ಗಾ ಹೋಮ, ರಕ್ತೇಶ್ವರೀ ದೇವಿಯ ಪ್ರತಿಷ್ಠೆ, ಬೆಳಿಗ್ಗೆ 11ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.ಸಭಾ ಕಾರ್ಯಕ್ರಮ:

ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಎಂಆರ್‌ಜಿ ಸಮೂಹ ಸಂಸ್ಥೆಗಳ ಡಾ. ಕೆ. ಪ್ರಕಾಶ್ ಶೆಟ್ಟಿ, ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ತೆಯ ಡಾ. ಮೋಹನ ಆಳ್ವ, ಪುಣೆಯ ಸಂತೋಷ್‌ ಕುಮಾರ್ ಶೆಟ್ಟಿ, ಕಾರ್ಕಳ ಡಾ. ಸುಧಾಕರ ಶೆಟ್ಟಿ, ಶಾಸಕರಾದ ಉಮಾನಾಥ ಕೋಟ್ಯಾನ್, ಗುರ್ಮೆ ಸುರೇಶ್ ಶೆಟ್ಟಿ, ಹರೀಶ್ ಪೂಂಜ, ಮಾಜಿ ಸಂಸದ ನಳಿನ್ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜ್ಯೆನ್‌ ಮತ್ತಿತರ ಗಣ್ಯರು ಭಾಗವಹಿಸುವರು. (ಚಿತ್ರ:24ಕಟೀಲು ರಕ್ತೇಶ್ವರಿ)ರಕ್ತೇಶ್ವರೀ ಮಹತ್ವ:ಕಟೀಲು ದೇವಳದ ಎದುರಿನಲ್ಲಿರುವ ರಕ್ತೇಶ್ವರೀ ಸಾನ್ನಿಧ್ಯವನ್ನು ದೇಗುಲದ ಒಳ ಹೋಗುವ ಭಕ್ತರೆಲ್ಲರೂ ನಮಿಸಿಯೇ ಹೋಗುತ್ತಾರೆ. ಇಲ್ಲಿ ಒಂದು ಕಟ್ಟೆ ಇದೆ. ರಥಬೀದಿಯಲ್ಲಿ ಆಟ ಆಗುವಾಗ ಯಕ್ಷಗಾನ ಪ್ರಿಯೆ ಭ್ರಾಮರೀ ಇದೇ ಕಟ್ಟೆಯಲ್ಲಿ ಕೂತು ಯಕ್ಷಗಾನ ನೋಡುತ್ತಾಳೆ ಎಂಬ ನಂಬಿಕೆ. ನಿಗ್ರಹ ಶಕ್ತಿಯುಳ್ಳ ರಕ್ತೇಶ್ವರೀ ಸಾನ್ನಿಧ್ಯದಲ್ಲಿ ದಿನಂಪ್ರತಿ ಎರಡು ಸಲ ಅಜೆಕಾಯಿ ಸೇವೆ, ಸಂಕ್ರಮಣಕ್ಕೆ ಪರ್ವ ನಡೆಯುತ್ತದೆ. ರಕ್ತೇಶ್ವರೀ ಸಾನ್ನಿಧ್ಯ ಇರುವ ಇದೇ ಬಂಡೆಕಲ್ಲಿನಲ್ಲಿ ಶ್ರೀ ದುರ್ಗಾಪರಮೇಶ್ವರೀ ಭ್ರಾಮರಿ ರೂಪ ತಾಳಿ ಅಡಗಿ ಕೂತಳು. ಆಗ ಅರುಣಾಸುರ ಕತ್ತಿಯಲ್ಲಿ ಬಂಡೆಗೆ ಹೊಡೆದಾಗ, ಒಡೆದ ಬಂಡೆಯೊಳಗಿಂದ ಹೊರಬಂದ ಜಗನ್ಮಾತೆ ದುರುಳ ಅರುಣನನ್ನು ತರಿದಳು ಎಂದು ಕಥೆಯಿದೆ.

ಕಟೀಲು ಕ್ಷೇತ್ರ ಮಾಹಾತ್ಮ್ಯೆ ಪ್ರಸಂಗದಲ್ಲಿ ಭ್ರಮರ ವೇಷ ಬರುವಾಗ ಇದೇ ಬಂಡೆಯ ಚಿತ್ರವನ್ನು ಇರಿಸಲಾಗುತ್ತದೆ. ಈ ಬಂಡೆ ಕಲ್ಲಿನ ಚಿತ್ರಕ್ಕೆ ಅರುಣಾಸುರ ವೇಷಧಾರಿ ಖಡ್ಗದಿಂದ ಹೊಡೆದಾಗ ಭ್ರಾಮರಿ ಹೊರ ಬರುವುದನ್ನು ಕಾಣಬಹುದು.