ಕಟ್ಟಹಳ್ಳಿ ಏತ ಯೋಜನೆ ಬಿಜೆಪಿ ಸರ್ಕಾರದ ಸಾಧನೆ: ಕೆಸಿಎನ್ ಅಭಿಮಾನಿ ಬಳಗ

| Published : Feb 10 2024, 01:49 AM IST

ಕಟ್ಟಹಳ್ಳಿ ಏತ ಯೋಜನೆ ಬಿಜೆಪಿ ಸರ್ಕಾರದ ಸಾಧನೆ: ಕೆಸಿಎನ್ ಅಭಿಮಾನಿ ಬಳಗ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ಅವಧಿಗೆ ಜೆಡಿಎಸ್ ಪಕ್ಷದ ಶಾಸಕರಾಗಿದ್ದರೂ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದ ಅಭಿವೃದ್ಧಿಗೆ ನಯಾಪೈಸೆ ಅನುದಾನವನ್ನೂ ನೀಡಲಿಲ್ಲ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆ.ಸಿ.ನಾರಾಯಣಗೌಡರು ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವ ಮುನ್ನ ಬಿ.ಎಸ್.ಯಡಿಯೂರಪ್ಪ ಬಳಿ ಮಾತುಕತೆ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಗ್ಯಾರಂಟಿ ಪಡೆದುಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಬೂಕನಕೆರೆ ಹೋಬಳಿಯ 46 ಕೆರೆಗಳನ್ನು ತುಂಬಿಸುವ ಕಟ್ಟಹಳ್ಳಿ ಏತ ನೀರಾವರಿ ಯೋಜನೆ ಈ ಹಿಂದಿನ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಅಥವಾ ಶಾಸಕ ಎಚ್.ಟಿ.ಮಂಜು ಕಾರಣೀಕರ್ತರಲ್ಲ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಅಭಿಮಾನಿ ಬಳಗ ತಿಳಿಸಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ.ಸಿ.ನಾರಾಯಣಗೌಡರ ಅಭಿಮಾನಿ ಬಳಗದ ಮುಖಂಡರು, ಕಟ್ಟಹಳ್ಳಿ ಏತ ನೀರಾವರಿ ಯೋಜನೆ ಲೋಕಾರ್ಪಣೆ ಸಮಾರಂಭಕ್ಕೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರನ್ನು ಆಹ್ವಾನಿಸದಿರುವುದನ್ನು ಖಂಡಿಸಿದರು.

ಎರಡು ಅವಧಿಗೆ ಜೆಡಿಎಸ್ ಪಕ್ಷದ ಶಾಸಕರಾಗಿದ್ದರೂ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದ ಅಭಿವೃದ್ಧಿಗೆ ನಯಾಪೈಸೆ ಅನುದಾನವನ್ನೂ ನೀಡಲಿಲ್ಲ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆ.ಸಿ.ನಾರಾಯಣಗೌಡರು ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವ ಮುನ್ನ ಬಿ.ಎಸ್.ಯಡಿಯೂರಪ್ಪ ಬಳಿ ಮಾತುಕತೆ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಗ್ಯಾರಂಟಿ ಪಡೆದುಕೊಂಡಿದ್ದರು ಎಂದರು.

ಇದರ ಪರಿಣಾಮವಾಗಿಯೇ 265 ಕೋಟಿ ರು. ಅಂದಾಜು ವೆಚ್ಚದ ಕಟ್ಟಹಳ್ಳಿ ಏತ ನೀರಾವರಿ ಯೋಜನೆ, 220 ಕೋಟಿ ರು. ವೆಚ್ಚದ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ, ಪಟ್ಟಣದಲ್ಲಿ ಹೈಟೆಕ್ ಒಳಾಂಗಣ ಕ್ರೀಡಾಂಗಣ, ಕೆರೆಗಳ ಅಭಿವೃದ್ಧಿ ಸೇರಿ ಹಲವು ಅಭಿವೃದ್ಧಿ ಕಾರ್ಯಗಳು ಚಾಲನೆಗೆ ಬಂದಿವೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇಂದು ಕಾಂಗ್ರೆಸ್ ಸಚಿವರು ಮತ್ತು ಕ್ಷೇತ್ರದ ಶಾಸಕರು ಉದ್ಘಾಟನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಇವರು ಸಮರ್ಪಕ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೊಳಿಸಲಿ ಎಂದು ಆಗ್ರಹಿಸಿದರು.

ಯೋಜನೆ ಯಶಸ್ವಿ ರೂವಾರಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರನ್ನು ಕಡೆಗಣಿಸಿರುವುದು ಸರಿಯಲ್ಲ. ಕ್ಷೇತ್ರದಲ್ಲಿ ಸೋತಿದ್ದರೂ ಅವರ ಕಾರ್ಯಕ್ರಮಗಳಿಗೆ ಸೋಲಿಲ್ಲ. ಅವು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲಿವೆ. ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಸಚಿವರನ್ನು ಆಹ್ವಾನಿಸುವ ಮೂಲಕ ಜಿಲ್ಲಾಡಳಿತ ಅವರಿಗೆ ಗೌರವ ಸೂಚಿಸಬೇಕು ಎಂದು ಮನವಿ ಮಾಡಿದರು.

ಕಟ್ಟಹಳ್ಳಿ ಏತ ನೀರಾವರಿ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮದ ಸ್ವಿಚ್ ಆನ್ ಮಾಡಲು ಕಾಂಗ್ರೆಸ್ಸಿಗರು ಮತ್ತು ಕ್ಷೇತ್ರದ ಶಾಸಕ ಎಚ್.ಟಿ.ಮಂಜು ನಡುವೆ ಪರಸ್ಪರ ಪೈಪೋಟಿ ನಡೆಯುತ್ತಿದೆ. ಪೈಪೋಟಿಯ ಕಾರಣದಿಂದಾಗಿಯೇ ಫೆ.10 ರಂದು ಲೋಕಾರ್ಪಣೆಗೊಳ್ಳಬೇಕಾಗಿದ್ದ ಏತ ನೀರಾವರಿ ಉದ್ಗಾಟನೆ ಫೆ.11ರ ಭಾನುವಾರಕ್ಕೆ ನಿಗಧಿಯಾಗಿದೆ ಎಂದು ಗೇಲಿ ಮಾಡಿದರು.

ಸುದ್ಧಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಶೀಳನೆರೆ ಅಂಬರೀಶ್, ತಾಪಂ ಮಾಜಿ ಅಧ್ಯಕ್ಷ ಬೂಕನಕೆರೆ ಬಿ.ಜವರಾಯಿಗೌಡ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್, ಪುರಸಭೆ ಸದಸ್ಯರಾದ ಕೆ.ಎಸ್.ಸಂತೋಷ್ ಕುಮಾರ್, ಕೆ.ಎಸ್.ಪ್ರಮೋದ್ ಕುಮಾರ್, ಮುಖಂಡರಾದ ಚಲುವರಾಜು, ಮಿತ್ರ ಗಿರೀಶ್, ಕೆ.ವಿನೋದ್ ಕುಮಾರ್, ಕೆಸಿಎನ್ ಆಪ್ತ ಸಹಾಯಕ ದಯಾನಂದ ಸೇರಿ ಹಲವರು ಇದ್ದರು.