ಕಟೀಲು ದೇವಳ ಜಾತ್ರೆ ಹಗಲು ರಥೋತ್ಸವ

| Published : Apr 20 2024, 01:09 AM IST

ಸಾರಾಂಶ

ಕೊಂಬು ಕಹಳೆ, ಕೇರಳದ ಚೆಂಡೆ, ನಾಗಸ್ವರ, ಥಾಸೆ ವಾದ್ಯ ಬ್ಯಾಂಡು ಕೇರಳದ ಪಂಚ ವಾದ್ಯಗಳ ಸೊಬಗಿನೊಂದಿಗೆ ದೇಗುಲದ ಆನೆ ಲಕ್ಷ್ಮೀಯೊಂದಿಗೆ ಪತಾಕೆ ತೋರಣಗಳನ್ನು ಹಿಡಿದ ಭಕ್ತರೊಂದಿಗೆ ನೂರಾರು ಮಂದಿ ಭಕ್ತರು ಬ್ರಹ್ಮರಥವನ್ನು ಎಳೆದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ದೇವರು ಹೊರಟು ರಥ ಬಲಿಯಾಗಿ ರಥಾರೋಹಣ, ರಥ ಹೂವಿನ ಪೂಜೆ ಮೂಲಕ ಹಗಲು ರಥೋತ್ಸವ ನಡೆಯಿತು. ಕೊಂಬು ಕಹಳೆ, ಕೇರಳದ ಚೆಂಡೆ, ನಾಗಸ್ವರ, ಥಾಸೆ ವಾದ್ಯ ಬ್ಯಾಂಡು ಕೇರಳದ ಪಂಚ ವಾದ್ಯಗಳ ಸೊಬಗಿನೊಂದಿಗೆ ದೇಗುಲದ ಆನೆ ಲಕ್ಷ್ಮೀಯೊಂದಿಗೆ ಪತಾಕೆ ತೋರಣಗಳನ್ನು ಹಿಡಿದ ಭಕ್ತರೊಂದಿಗೆ ನೂರಾರು ಮಂದಿ ಭಕ್ತರು ಬ್ರಹ್ಮರಥವನ್ನು ಎಳೆದರು.

ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಮಜ್ಜಿಗೆಯನ್ನು ವಿತರಿಸಲಾಯಿತು. ಮಜ್ಜಿಗೆಯ ಜೊತೆ ದೇವಸ್ಥಾನದ ವತಿಯಿಂದ ದಿನಂಪ್ರತಿಯಂತೆ ಪಾನಕ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಬಳಿಕ ಎರಡು ಕಟ್ಟೆಯಲ್ಲಿ ಕಟ್ಟೆ ಪೂಜೆ, ಒಳಗೆ ದರ್ಶಬ ಬಲಿ (ಓಡ ಬಲಿ), ರಾತ್ರಿ ಬಲಿ, ದೊಡ್ಡ ಅಜಕಾಯಿ, ಚಿನ್ನದ ರಥೋತ್ಸವ, ಚಿನ್ನದ ಪಲ್ಲಕಿ ಉತ್ಸವ, ವಸಂತ ಮಂಟಪ ಪೂಜೆ ಅಷ್ಟಾವಧಾನ ಸೇವೆ,ರಾತ್ರಿ ಪೂಜೆ, ಅಭಿಷೇಕ, ಶಯನ ಅಲಂಕಾರ, ರಾತ್ರಿ 12.30ಕ್ಕೆ ಭೂತ ಬಲಿ, ಶಯನ, ಕವಾಟ ಬಂಧನ ನೆರವೇರಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರಸ್ವತಿ ಸದನದಲ್ಲಿ ಮಧ್ಯಾಹ್ನ 12ರಿಂದ ಭಜನಾ ಕಾರ್ಯಕ್ರಮ, ಸಂಜೆ 5.30ರಿಂದ ಕಟೀಲು ದುರ್ಗಾ ಮಕ್ಕಳ ಮೇಳದವರಿಂದ ವೀರ ಭಾರ್ಗವ ಯಕ್ಷಗಾನ ಸಂಪನ್ನಗೊಂಡಿತು.

ಇಂದಿನ ಕಾರ್ಯಕ್ರಮಗಳು: ಶನಿವಾರ ಬೆಳಗ್ಗೆ ಕವಾಟೋದ್ಘಾಟನೆ, ವಸಂತಮಂಟಪದಲ್ಲಿ ಶಯನ ಪುಷ್ಪ ವಿತರಣೆ, ಸಂಜೆ ವಸಂತಮಂಟಪದಲ್ಲಿ ಪೂಜೆಯ ಬಳಿಕ ಎಕ್ಕಾರಿಗೆ ಸವಾರಿ, ರಾತ್ರಿ ಕಟ್ಟೆಪೂಜೆಗಳು ನಡೆದು ರಾತ್ರಿ ಎರಡು ಗಂಟೆಗೆ ಕಟೀಲಿನ ರಥಬೀದಿಯಲ್ಲಿ ರಥಾರೋಹಣ ನೆರವೇರಲಿದೆ. ರಥದಲ್ಲಿ ಹೂವಿನ ಪೂಜೆ, ರಥೋತ್ಸವ, ಅಜಾರಿನಲ್ಲಿ ಜಳಕ ಸ್ನಾನ, ಬಳಿಕ ರಥಬೀದಿಯಲ್ಲಿ ತೂಟೆದಾರ ದೇವರು ದೇಗುಲದ ಒಳಗೆ ಬಂದು ದರ್ಶನ ಬಲಿ, ಕೊಡಮಣಿತ್ತಾಯ ದೈವ ಭೇಟಿ ನಡೆಯಲಿದೆ. ಸರಸ್ವತೀ ಸದನದಲ್ಲಿ ರಾತ್ರಿ 8 ಗಂಟೆಯಿಂದ ಬೆಂಗಳೂರು ವಿಶ್ವಭಾರತಿ ನೃತ್ಯ ಶಾಲೆಯವರಿಂದ ಭರತನಾಟ್ಯ, ಕದ್ರಿ ನೃತ್ಯ ಭಾರತಿ ಅವರಿಂದ ಭರತನಾಟ್ಯ ನಡೆಯಲಿದೆ.

ಕಟೀಲು ದೇವಳ ಜಾತ್ರೆ 6ನೇ ದಿನ ಬಲಿ ಉತ್ಸವಕನ್ನಡಪ್ರಭ ವಾರ್ತೆ ಮೂಲ್ಕಿಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ 6ನೇ ದಿನವಾದ ಗುರುವಾರ ಮಧ್ಯಾಹ್ನ ಸೇವೆಗಳು, ಮಹಾಪೂಜೆ, ಬ್ರಹ್ಮರಿಗೆ ಭೋಗ, ಸಂಜೆ 6ರಿಂದ ರಾತ್ರಿ ಬಲಿ, ಚಿನ್ನದ ರಥಉತ್ಸವ, ಚಿನ್ನದಪಲ್ಲಕ್ಕಿ ಉತ್ಸವ, ವಸಂತಮಂಟಪ ಪೂಜೆ, ಅಷ್ಟಾವಧಾನ, ಪಡು ಸವಾರಿ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರಸ್ವತೀ ಸದನದಲ್ಲಿ ಬೆಳಿಗ್ಗೆ 9.30ರಿಂದ ಭಜನಾ ಮಂಡಳಿ ಮಂಟ್ರಾಡಿ, ಬಂಟ್ವಾಳ, ಮಹಿಳಾ ಮಂಡಳಿ ಶಿಬರೂರು, ಭಜನಾ ಮಂಡಳಿ ಕಡಬ ಪುತ್ತೂರು, ಶ್ರೀ ಮಹಾಗಣಪತಿ ಭಜನಾ ಮಂಡಳಿ ಕಾರ್ಕಳ, ಭಜನಾ ಮಂಡಳಿ ಬೈಲದಬೆಟ್ಟು ಅವರಿಂದ ಭಜನೆ ನಡೆಯಿತು. ಸಂಜೆ 5ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನೆರವೇರಿತು. ಕುಮಾರಿ ಶೋಭಿತಾ ಭಟ್ ಹಾಗೂ ಕುಮಾರಿ ಆಶ್ವೇಜಾ ಉಡುಪ ಸ್ವರಾಂಜಲಿ ಸಹೋದರಿಯರು ಕಿನ್ನಿಗೋಳಿಯವರಿಂದ, ಸಂಜೆ 7ಕ್ಕೆ ನೃತ್ಯರೂಪಕ- ಗಣೇಶ ಜನನ, ಕದ್ರಿ ನೃತ್ಯ ವಿದ್ಯಾನಿಲಯ, ಕದ್ರಿಯವರಿಂದ ನಡೆಯಿತು. ಏ.19ರಂದು ಶುಕ್ರವಾರ ಬೆಳಗ್ಗೆ 8 ಗಂಟೆಗೆ ದೇವರ ಬಲಿ ಹೊರಟು 9.30ಕ್ಕೆ ಹಗಲು ರಥೋತ್ಸವದ ರಥಾರೋಹಣ ನಡೆಯಲಿದೆ.