20 ವರ್ಷಗಳಿಂದ ಡಾಂಬರೀಕರಣವಾಗದೆ ಸಂಚಾರಕ್ಕೆ ಅಯೋಗ್ಯವಾದ ಕಟ್ಟೆಮಾಡು–ಮರಗೋಡು ರಸ್ತೆ ದುಸ್ಥಿತಿಯನ್ನು ಖಂಡಿಸಿ ಮರಗೋಡಿನಲ್ಲಿ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಮಡಿಕೇರಿ: 20 ವರ್ಷಗಳಿಂದ ಡಾಂಬರೀಕರಣವಾಗದೆ ಸಂಚಾರಕ್ಕೆ ಅಯೋಗ್ಯವಾದ ಕಟ್ಟೆಮಾಡು–ಮರಗೋಡು ರಸ್ತೆ ದುಸ್ಥಿತಿಯನ್ನು ಖಂಡಿಸಿ ಮರಗೋಡಿನಲ್ಲಿ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಬೆನ್ನಲ್ಲೇ ಗ್ರಾಮದಲ್ಲಿನ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು.ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ವ್ಯಾಪಾರಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆಗೊಳಗಾದರು. ಗುಂಡಿ ಬಿದ್ದ ರಸ್ತೆಯಲ್ಲಿ ನಿತ್ಯ ಬೈಕ್ ಸವಾರರು ಉರುಳಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿಭಟನೆ ಮಾಹಿತಿ ತಿಳಿದು ಸ್ಥಳಕ್ಕೆ ಮಡಿಕೇರಿ ಡಿವೈಎಸ್‌ಪಿ ಸೂರಜ್ ಭೇಟಿ ನೀಡಿ ಶಾಂತಿಯುತ ಪ್ರತಿಭಟನೆಗೆ ಸೂಚನೆ ನೀಡಿದರು. ನಂತರ ಲೋಕೋಪಯೋಗಿ ಇಲಾಖೆ ಜೂನಿಯರ್ ಎಂಜಿನಿಯರ್ ಗಿರೀಶ್ ಸ್ಥಳಕ್ಕೆ ಆಗಮಿಸಿದ್ದು, ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಮುಂದಿನ 15 ದಿನಗಳೊಳಗೆ 900 ಮೀಟರ್ ರಸ್ತೆ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಲಾಗುವುದು ಹಾಗೂ ಏಪ್ರಿಲ್ ಅಂತ್ಯದೊಳಗೆ ಉಳಿದ ಐದು ಕಿ.ಮೀ. ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಭರವಸೆ ನೀಡಿದರು.ಮರಗೋಡು ರಸ್ತೆಯ ದುಸ್ಥಿತಿ ಇಂದು ನಿನ್ನೆಯದಅಲ್ಲ. ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿ ರಸ್ತೆ ಕಾಣದೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಬಸ್ ಸಂಚಾರ ಸ್ಥಗಿತಗೊಂಡಾಗ ವಿದ್ಯಾರ್ಥಿಗಳು ಮತ್ತು ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಲು ಪರದಾಡುವ ಸ್ಥಿತಿ ಎದುರಾಗಿದೆ. ತೆರಿಗೆ ಕಟ್ಟುವ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿ. ಅಧಿಕಾರಿಗಳು ನೀಡಿರುವ ಭರವಸೆಯನ್ನು ನಿಗದಿತ ಅವಧಿಯೊಳಗೆ ಜಾರಿಗೊಳಿಸಬೇಕು. ಇಲ್ಲದ್ದರೆ ಗ್ರಾಮಸ್ಥರು ಮತ್ತೆ ಸಂಘಟಿತ ಹೋರಾಟಕ್ಕೆ ಮುಂದಾಗಲಿದ್ದು, ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ.-ನಂದಕುಮಾರ್, ಅಧ್ಯಕ್ಷರು ಮರಗೋಡು ಆಟೋ ಚಾಲಕ-ಮಾಲೀಕರ ಸಂಘ ಕಟ್ಟೆಮಾಡು–ಮರಗೋಡು ರಸ್ತೆ ಕಳೆದ ಎರಡು ದಶಕಗಳಿಂದ ದುರಸ್ತಿ ನಡೆಯದೆ ಜನರ ಜೀವಕ್ಕೆ ಅಪಾಯವಾಗುತ್ತಿದೆ. ಶಾಲಾ ಮಕ್ಕಳು, ವೃದ್ಧರು, ರೋಗಿಗಳು ದಿನನಿತ್ಯ ಇದೇ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಗುಂಡಿ ಬಿದ್ದ ರಸ್ತೆಯಲ್ಲಿ ಬೈಕ್ ಸವಾರರು ಉರುಳಿ ಬೀಳುವುದು ಸಾಮಾನ್ಯವಾಗಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಇಲಾಖೆ ಸ್ಪಂದಿಸಿಲ್ಲ. ಇದರಿಂದ ರಸ್ತೆ ತಡೆ ಪ್ರತಿಭಟನೆಗೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಧಿಕಾರಿಗಳು ನೀಡಿದ ಭರವಸೆ ಈ ಬಾರಿ ಕೇವಲ ಮಾತಾಗದೆ, ತಕ್ಷಣ ಕಾರ್ಯರೂಪಕ್ಕೆ ಬರಬೇಕು. ಇಲ್ಲದಿದ್ದರೆ ಮತ್ತಷ್ಟು ತೀವ್ರ ಹೋರಾಟ ಅನಿವಾರ್ಯ.
-ಶರತ್ ಪರಿಚನ, ಮರಗೋಡು ಗ್ರಾಮ ಪಂಚಾಯಿತಿ ಸದಸ್ಯರು