ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರುತಂಬಾಕಿಗೆ ಸೂಕ್ತ ಬೆಲೆ ದೊರಕಿಸುವ ನಿಟ್ಟಿನಲ್ಲಿ ಶಾಸಕ ಜಿ.ಡಿ. ಹರೀಶ್ ಗೌಡ ಕೈಗೊಂಡ ಉಪಕ್ರಮಗಳಿಂದ ಸಂತಸಗೊಂಡ ರೈತ ಸಮೂಹ ಹರೀಶ್ ಗೌಡರನ್ನು ಸನ್ಮಾನಿಸಿದರು.ತಾಲೂಕಿನ ಕಟ್ಟೆಮಳಲವಾಡಿ ಹರಾಜು ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಶಾಸಕ ಹರೀಶ್ ಗೌಡರನ್ನು ರೈತಮುಖಂಡರು ಸನ್ಮಾನಿಸಿದರು.ಈ ವೇಳೆ ಮಾತನಾಡಿದ ತಂಬಾಕ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಂಡುವಾಡಿ ಸಿ. ಚಂದ್ರೇಗೌಡ, ಈ ಹಿಂದೆ ನಾವು ಕೇಂದ್ರ ಸಚಿವರನ್ನು ನವ ದೆಹಲಿಯಲ್ಲಿ ಕಾಣಲು ಹೋದಾಗ ಒಂದೆರಡು ನಿಮಿಷದಲ್ಲಿ ನಮ್ಮ ಮನವಿ ಸ್ವೀಕರಿಸಿ ಆಗಲಿ ಎಂದು ತಲೆಯಲ್ಲಾಡಿಸಿ ಕಳುಹಿಸುತ್ತಿದ್ದರು. ಆದರೆ ಶಾಸಕ ಜಿ.ಡಿ. ಹರೀಶ್ ಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪ್ರಯತ್ನದ ಫಲವಾಗಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಂಬಾಕು ಬೆಳೆಗಾರರ ಸಮಸ್ಯೆಗಳ ಕುರಿತು ಒಂದೂವರೆ ತಾಸು ಆಲಿಸಿದ್ದಾರೆ. ನಮ್ಮೊಂದಿಗೆ ಚರ್ಚಿಸಿದ್ದಾರೆ. ತಂಬಾಕು ಬೆಳೆಗಾರರ 50 ವರ್ಷಗಳ ಇತಿಹಾಸದಲ್ಲಿ ಶಾಸಕರೊಬ್ಬರಿಂದ ಇಂತಹ ಪ್ರಯತ್ನ ನಡೆದಿರುವುದು ಇದೇ ಮೊಲಾಗಿದ್ದು, ಶಾಸಕರ ರೈತಪರ ನಿಲುವು ನಮಗೆ ಸಂತಸ ಮತ್ತು ನೈತಿಕ ಧೈರ್ಯ ತಂದಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.ರೈತಮುಖಂಡ ತಟ್ಟೆಕೆರೆ ಶ್ರೀನಿವಾಸ್ ಮಾತನಾಡಿ, ಈ ಬಾರಿಯ ಅತಿವೃಷ್ಟಿಯಿಂದಾಗಿ ಕಡಿಮೆ ಗುಣಮಟ್ಟದ ತಂಬಾಕು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಿದ್ದು, ಸೂಕ್ತ ದರ ಸಿಗುತ್ತಿಲ್ಲ ಎನ್ನುವ ಮಾಹಿತಿ ಪಡೆದ ಕೂಡಲೇ ಶಾಸಕ ಜಿ.ಡಿ. ಹರೀಶ್ ಗೌಡ ಕಾರ್ಯಪ್ರವೃತ್ತರಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸಂಪರ್ಕ ಸಾದಿಸಿ ದೆಹಲಿಗೆ ರೈತ ನಿಯೋಗವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕರೆದುಕೊಂಡು ಹೋಗಿ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಲು ಅವಕಾಶ ನೀಡಿದರು.ಶಾಸಕರ ಈ ಪ್ರಯತ್ನ ಅನನ್ಯ ಮತ್ತು ಅದರ ಫಲವಾಗಿ ಇಂದು ತಂಬಾಕಿಗೆ ಸಮಾಧಾನಕರ ಬೆಲೆ ಸಿಗುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ನಿಲುವಾಗಿಲು ಪ್ರಭಾಕರ್, ಮೋದೂರು ಶಿವಣ್ಣ, ಕಟ್ಟೆಮಳಲವಾಡಿ ಆಂಜನೇಯ, ದೇವರಾಜ್, ಪುಟ್ಟರಾಜು, ಅಗ್ರಹಾರ ರಾಮೇಗೌಡ ಮೊದಲಾದವರು ಇದ್ದರು.