ಕಾಪು: ನಮ್ಮ ಕರಾವಳಿ ಭಾಗದ ಶೈಕ್ಷಣಿಕ ಸಾಧನೆಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಯುವಜನಾಂಗವನ್ನು ಸಿದ್ಧಪಡಿಸುವಲ್ಲಿ ದಾರಿಯಾಗಬೇಕು. ಹೆಚ್ಚೆಚ್ಚು ಜನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬೇಕು. ಅದರೆ ಅಂಕ ಗಳಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತರಾಗದೆ ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಎನ್‌ಎಸ್‌ಎಸ್ ಶಿಬಿರಗಳು ಇದಕ್ಕೆ ಸಹಕಾರಿಯಾಗಿದೆ ಎಂದು ಉಡುಪಿ ಎಸ್‌ವಿಎಚ್‌ ಶಿಕ್ಷಣ ಸಂಸ್ಥೆಗಳ ಕಾರ್‍ಯದರ್ಶಿ ರತ್ನ ಕುಮಾರ್ ಹೇಳಿದರು.

ಇನ್ನಂಜೆಯ ಎಸ್‌ವಿಎಚ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾರೋಪ ಉಪನ್ಯಾಸ ಮಾಡಿದ ಎಂಜಿಎಂ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ. ಚನ್ನ ಪೂಜಾರಿ, ಇನ್ನಂಜೆ ಗ್ರಾಮದ ಸಮಗ್ರ ಅರ್ಥ ವ್ಯವಸ್ಥೆಯ ಚಿತ್ರಣವನ್ನು ಅಂಕಿ-ಅಂಶಗಳ ಸಮೇತ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಕೃಷಿ ಪ್ರಧಾನ ವ್ಯವಸ್ಥೆ ಆರ್ಥಿಕತೆ ಮತ್ತು ಪರಿಸರ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂಬ ಸಂಗತಿಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದರು.ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವನಿತ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಡಾ. ಎಂ. ವಿಶ್ವನಾಥ ಪೈ, ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಾಲತಿ ದೇವಿ ಎ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ವೀರಾ ಐಡಾ ಪಿಂಟೋ, ಐಕ್ಯುಎಸಿ ಸಂಯೋಜಕಿ ಪ್ರೊ. ಶೈಲಜಾ ಎಚ್., ಎಂಜಿಎಂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಎಸ್‌ವಿಎಚ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜೇಂದ್ರ ಪ್ರಭು, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ರೇಖಾ ಎನ್. ಚಂದ್ರ, ಸಹ ಶಿಬಿರಾಧಿಕಾರಿ ಸುರಭಿ ನಾಯ್ಕ್ ಉಪಸ್ಥಿತರಿದ್ದರು‌‌. ಎನ್‌ಎಸ್‌ಎಸ್ ಅಧಿಕಾರಿ ಸುಚಿತ್ ಕೋಟ್ಯಾನ್ ಬಹುಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಅಶ್ವಿಭಾ ಸ್ವಾಗತಿಸಿ, ಅನಘಾ ವಂದಿಸಿದರು. ಸಾತ್ವಿ ಭಟ್ ನಿರೂಪಿಸಿದರು.