ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಿಲ್ದಾಣದ ಸಮೀಪ ರೈಲು ಅಪಘಾತ ಸಂಭವಿಸುತ್ತಿದ್ದಂತೆ ದೇಶದಲ್ಲಿ ಮತ್ತೆ ಕವಚ್ ತಂತ್ರಜ್ಞಾನ ಅಳವಡಿಸುವ ಕುರಿತಂತೆ ಕೂಗು ಎದ್ದಿದೆ. ಆದರೆ ವಿಚಿತ್ರವೆಂದರೆ 5 ರಾಜ್ಯಗಳಲ್ಲಿ ಸಂಚರಿಸುವ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಎಲ್ಲೂ ಈ ವರೆಗೂ ಕವಚ್ ತಂತ್ರಜ್ಞಾನ ಅಳವಡಿಸಿಲ್ಲ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಈ ಸಂಬಂಧ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂಬ ಆಗ್ರಹ ಪ್ರಜ್ಞಾವಂತರದ್ದು. ರೈಲುಗಳ ಅಪಘಾತ ತಡೆಯುವ ನಿಟ್ಟಿನಲ್ಲಿ ಕವಚ್ ವ್ಯವಸ್ಥೆಯೂ ಸಾಕಷ್ಟು ಕೆಲಸ ಮಾಡುತ್ತದೆ. ಉತ್ತರ ಭಾರತ ಸೇರಿದಂತೆ ಹಲವು ರಾಜ್ಯಗಳಲ್ಲಿ ಕವಚ್ ವ್ಯವಸ್ಥೆ ಅಳವಡಿಸಲಾಗಿದೆ. ಆದರೆ ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಎಲ್ಲೂ ಈ ಸಿಸ್ಟಂ ಅಳವಡಿಸಿಲ್ಲ.
ನೈಋತ್ಯ ರೈಲ್ವೆ ವಲಯವು ಕರ್ನಾಟಕದ ಶೇ. 84ರಷ್ಟು, ಇನ್ನುಳಿದ ಶೇ. 16ರಷ್ಟು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳನಾಡು, ಗೋವಾ ರಾಜ್ಯಗಳ ಪ್ರದೇಶಗಳನ್ನೊಳಗೊಂಡಿದೆ. ಪ್ರತಿನಿತ್ಯ ನೂರಾರು ರೈಲುಗಳು ಓಡಾಡುತ್ತಿದ್ದರೆ, ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರು ವಿಭಾಗಗಳನ್ನು ಹೊಂದಿದೆ. ಬರೋಬ್ಬರಿ 384 ರೈಲು ನಿಲ್ದಾಣಗಳಿವೆ. ಅವುಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರು ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣವಾಗಿದೆ, ಮೂರು ವಿಭಾಗಗಳನ್ನು ಲೆಕ್ಕ ಹಾಕಿದರೆ ಕೋಟಿಗಟ್ಟಲೇ ಜನ ಪ್ರತಿನಿತ್ಯ ಪ್ರಯಾಣಿಸುತ್ತಾರೆ. ಜಗತ್ತಿನ ಅತಿ ಉದ್ದದ ಫ್ಲಾಟ್‌ಫಾರಂ ಹೊಂದಿರುವುದು ಇದೇ ವಲಯದ ವ್ಯಾಪ್ತಿಯಲ್ಲಿನ ಶ್ರೀಸಿದ್ಧಾರೂಢ ರೈಲ್ವೆ ನಿಲ್ದಾಣ ಹುಬ್ಬಳ್ಳಿಯಲ್ಲಿ. ಇಷ್ಟೆಲ್ಲ ಇದ್ದರೂ ಕವಚ್ ತಂತ್ರಜ್ಞಾನ ಮಾತ್ರ ಇಲ್ಲಿ ಈವರೆಗೂ ಅಳವಡಿಕೆಯೇ ಆಗಿಲ್ಲ.ಕವಚ್ ಇಲ್ಲವೇಕೆ?:
ಇಷ್ಟೊಂದು ದೊಡ್ಡ ವಲಯವಾದರೂ ಕರ್ನಾಟಕದ ಬಹುತೇಕ ಪ್ರದೇಶ, ಉಳಿದ ನಾಲ್ಕು ರಾಜ್ಯಗಳ ಅಲ್ಪಸ್ವಲ್ಪ ಪ್ರದೇಶಗಳು ಇದರ ವ್ಯಾಪ್ತಿಗೆ ಬರುತ್ತಿದ್ದರೂ ಈವರೆಗೂ ಕವಚ್ ತಂತ್ರಜ್ಞಾನ ಏಕೆ ಅಳವಡಿಸಿಲ್ಲ ಎಂಬುದು ಪ್ರಜ್ಞಾವಂತರ ಪ್ರಶ್ನೆ. ರೈಲ್ವೆ ಇಲಾಖೆಯಲ್ಲಿ ಏನೇ ಹೊಸದಾಗಿ ಬಂದರೂ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತವೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಅಷ್ಟೊಂದು ಸಿಗುವುದಿಲ್ಲ ಎಂಬ ಕೊರಗು ಇಲ್ಲಿನ ಜನರದ್ದು ಆದರೆ ರೈಲ್ವೆ ಇಲಾಖೆ, ಹೆಚ್ಚಿನ ಡೆನ್ಸಿಟಿ ಇರುವ ಪ್ರದೇಶಗಳಲ್ಲಿ ಕವಚ್ ತಂತ್ರಜ್ಞಾನ ಅಳವಡಿಸುತ್ತಿದೆ. ಹಂತ-ಹಂತವಾಗಿ ದೇಶದ ಎಲ್ಲೆಡೆ ಅಳವಡಿಸಲಾಗುವುದು ಎಂದು ತಿಳಿಸುತ್ತದೆ. ಆದರೆ ಕರ್ನಾಟಕದವರೇ ಆಗಿರುವ ವಿ. ಸೋಮಣ್ಣ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದಾರೆ. ಅವರು ಹೆಚ್ಚಿನ ಮುತುವರ್ಜಿ ವಹಿಸಿ ಈ ವಲಯದ ವ್ಯಾಪ್ತಿಯಲ್ಲಿ ಕವಚ್ ತಂತ್ರಜ್ಞಾನ ಅಳವಡಿಸಲು ಮುತುವರ್ಜಿ ವಹಿಸಬೇಕು. ಇದರೊಂದಿಗೆ ರೈಲ್ವೆ ಇಲಾಖೆಯಲ್ಲಿ ನನಗುದಿಗೆ ಬಿದ್ದಿರುವ ಯೋಜನೆಗಳನ್ನು ಕೈಗೆತ್ತಿಕೊಂಡು ಶೀಘ್ರವಾಗಿ ಚಾಲನೆ ನೀಡುವಂತಹ ಕೆಲಸ ಮಾಡಬೇಕು ಎಂಬುದು ಈ ಭಾಗದ ಸಾರ್ವಜನಿಕರ ಒಕ್ಕೊರಲಿನ ಆಗ್ರಹ.ಏನಿದು ಕವಚ್:
ಕವಚ್ ಎಂಬುದು ಸ್ವಯಂಚಾಲಿತ ರೈಲು ಸುರಕ್ಷಾ ತಂತ್ರಜ್ಞಾನ. ಅಪಾಯಕಾರಿ ಸನ್ನಿವೇಶಗಳಲ್ಲಿ ರೈಲು ದುರಂತವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ತಂತ್ರಜ್ಞಾನದ ಪ್ರಕಾರ, ಹಳಿಗಳ ಮೇಲೆ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಟ್ಯಾಗ್ ಅಳವಡಿಸಲಾಗುತ್ತದೆ. ಯಾವುದೇ ರೈಲು ಹಳಿಯ ಮೇಲೆ ಒಂದು ರೈಲಿನ 5 ಕಿಮೀ ಮುಂದೆ ಅಥವಾ ಹಿಂದೆ ಮತ್ತೊಂದು ರೈಲು ಚಲಿಸುತ್ತಿದ್ದರೆ, ಅಂತಹ ರೈಲನ್ನು ಸ್ವಯಂ ಚಾಲಿತವಾಗಿ ನಿಲ್ಲಿಸುತ್ತದೆ.ನೈಋತ್ಯ ರೈಲ್ವೆ ವಲಯವೂ ಬಹುದೊಡ್ಡ ವಲಯ. ಇಲ್ಲೂ ನೂರಾರು ರೈಲುಗಳು ಓಡಾಡುತ್ತವೆ. ಲಕ್ಷಾಂತರ ಜನ ಪ್ರತಿನಿತ್ಯ ಪ್ರಯಾಣಿಸುತ್ತಾರೆ. ಇಲ್ಲೂ ಕವಚ್‌ದಂತಹ ತಂತ್ರಜ್ಞಾನ ಅಳವಡಿಸಬೇಕು. ಈ ನಿಟ್ಟಿನಲ್ಲಿ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ಮುತುವರ್ಜಿ ವಹಿಸಬೇಕು. ಜತೆಗೆ ರಾಜ್ಯದಲ್ಲಿ ರೈಲ್ವೆ ಕಾಮಗಾರಿಗಳಿಗೆ ತ್ವರಿತಗತಿಯಲ್ಲಿ ಕೈಗೊಳ್ಳಬೇಕು ಎಂದು ಹುಬ್ಬಳ್ಳಿ ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಹೇಳಿದರು.