ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆ ಅವಧಿಯಲ್ಲಿ ಕೈಗೆಟುಕುವ ದರದಲ್ಲಿ ಜನ ಸಾಮಾನ್ಯರಿಗೆ ಶುದ್ಧವಾದ ನೀರನ್ನು ಟ್ಯಾಂಕರ್ ಮೂಲಕ ಒದಗಿಸುವ ಜತೆಗೆ, ನಗರದ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಮೊದಲ ಹಂತದಲ್ಲಿ ನಗರದ 10 ಕಡೆ ‘ಕಾವೇರಿ ಕನೆಕ್ಟ್ ಸೆಂಟರ್’ (ಕಾವೇರಿ ಸಂಪರ್ಕ ಕೇಂದ್ರ) ತೆರೆಯುವುದಕ್ಕೆ ಬೆಂಗಳೂರು ಜಲಮಂಡಳಿ ಸಿದ್ಧವಾಗಿದೆ.
ಬೇಸಿಗೆ ಆರಂಭಗೊಳ್ಳುತ್ತಿದಂತೆ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಟ್ಯಾಂಕರ್ ಮಾಫಿಯಾ ಗರಿಗೆದರಲಿದೆ. ಇವರು ನೀರಿಗೆ ಬೇಕಾಬಿಟ್ಟಿ ದರ ನಿಗದಿ ಪಡಿಸಿಕೊಂಡು ಸಾರ್ವಜನಿಕರ ಸುಲಿಗೆ ಮಾಡಲಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳು ಈವರೆಗೆ ಏನೆಲ್ಲಾ ಪ್ರಯತ್ನ ಮಾಡಿದರೂ ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ಜನರ ಬೇಡಿಕೆಯನ್ನೇ ಬಂಡವಾಳವಾಗಿಟ್ಟುಕೊಂಡು ನಡೆಸುವ ಮಾಫಿಯಾಗೆ ಕಡಿವಾಣ ಹಾಕುವುದಕ್ಕೆ ಇದೀಗ ಬೆಂಗಳೂರು ಜಲಮಂಡಳಿಯು ಕಾವೇರಿ ಕನೆಕ್ಟ್ ಸೆಂಟರ್ ಆರಂಭಿಸುವುದಕ್ಕೆ ಮುಂದಾಗಿದೆ.
ಕಾವೇರಿ ಕನೆಕ್ಟ್ ಸೆಂಟರ್ ಹೇಗಿರುತ್ತೆ?:
ಬೇಸಿಗೆ ಅವಧಿಯಲ್ಲಿ ನೀರಿನ ಸಮಸ್ಯೆ ಎದುರಾಗುವ ಪ್ರಮುಖ ಕಡೆ ತಾತ್ಕಾಲಿಕವಾಗಿ ನೀರಿನ ಸಂಗ್ರಹಗಾರಗಳನ್ನು ಸ್ಥಾಪಿಸುವುದು. ಅಲ್ಲಿಂದ ಅಗತ್ಯ ಇರುವ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಟ್ಯಾಂಕರ್ ಮೂಲಕ ಕಾವೇರಿ ನೀರು ಪೂರೈಕೆ ಮಾಡುವುದು ಕಾವೇರಿ ಕೆನೆಕ್ಟ್ ಸೆಂಟರ್‌ನ ಉದ್ದೇಶವಾಗಿದೆ.
ಈವರೆಗೆ ಬೆಂಗಳೂರು ಜಲಮಂಡಳಿಯು ಖಾಸಗಿ ಟ್ಯಾಂಕರ್ ಮಾಲೀಕರಿಗೆ ಕಾವೇರಿ ನೀರು ನೀಡುತ್ತಿರಲಿಲ್ಲ. ಇದೀಗ ಮಂಡಳಿಗೆ ಹೆಚ್ಚುವರಿ ನೀರಿನ ಲಭ್ಯತೆ ಇರುವುದರಿಂದ ಆ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕೆ ಖಾಸಗಿ ನೀರು ಪೂರೈಕೆ ಮಾಡುವ ಟ್ಯಾಂಕರ್‌ಗಳಿಗೂ ನೀರು ನೀಡುವುದಕ್ಕೆ ತೀರ್ಮಾನಿಸಿದೆ.
ಕಾವೇರಿ ನೀರು ಪಡೆಯುವುದು ಹೇಗೆ?
ಕಾವೇರಿ ನೀರು ಅಗತ್ಯ ಇರುವವರು ಖಾಸಗಿ ಟ್ಯಾಂಕರ್ ಬಾಡಿಗೆ ಪಡೆದು ಕಾವೇರಿ ಕನೆಕ್ಟ್ ಸೆಂಟರ್‌ಗೆ ಬಂದು ಜಲಮಂಡಳಿ ನಿಗದಿ ಪಡಿಸಿದ ದರ ಪಾವತಿಸಿ ನೀರು ಪಡೆದುಕೊಳ್ಳಬಹುದಾಗಿದೆ. ನೀರು ಪೂರೈಕೆಗೆ ಅಗತ್ಯ ಇರುವ ಟ್ಯಾಂಕರ್ ಅನ್ನು ಸಾರ್ವಜನಿಕರೇ ಹುಡುಕಿಕೊಳ್ಳಬೇಕಿದೆ. ಅದರ ಬಾಡಿಗೆ ಮೊತ್ತವನ್ನು ಅವರೇ ಪಾವತಿ ಮಾಡಬೇಕಿದೆ.
ಗುಣಮಟ್ಟದ ನೀರು
ಈವರೆಗೆ ಟ್ಯಾಂಕರ್ ಮಾಲೀಕರು ಎಲ್ಲಿಂದ ನೀರು ತೆಗೆದುಕೊಂಡು ಬಂದರೂ ಪ್ರಶ್ನೆ ಮಾಡದೇ ಜನರು ನಿಗದಿ ಪಡಿಸಿದಷ್ಟು ದರ ಪಾವತಿಸಬೇಕಾಗಿತ್ತು. ಪೂರೈಕೆಯಾದ ನೀರು ಶುದ್ಧವಾಗಿದೆಯೋ ಇಲ್ಲವೋ ಖಾತ್ರಿ ಇರುತ್ತಿರಲಿಲ್ಲ. ಇದರಿಂದ ಸಾರ್ವಜನಿಕರು ಆರೋಗ್ಯ ಸಮಸ್ಯೆ ಎದುರಿಸಬೇಕಾದ ಪ್ರಸಂಗ ಉಂಟಾಗುತ್ತಿತ್ತು. ಆದರೆ, ಕಾವೇರಿ ಸೆಂಟರ್ ನೀರು ಶುದ್ಧವಾಗಿರುವುದರಿಂದ ಯಾವುದೇ ಆತಂಕ ಪಡುವ ಅಗತ್ಯ ಇರುವುದಿಲ್ಲ ಎಂದು ಜಲಮಂಡಳಿಯ ಅಧಿಕಾರಿಗಳು ಹೇಳುತ್ತಾರೆ.
110 ಹಳ್ಳಿ ಜನರಿಗೆ ಅನುಕೂಲ
110 ಹಳ್ಳಿ ಸೇರಿದಂತೆ ನಗರದ ಬಹುತೇಕ ಅಪಾರ್ಟ್‌ಮೆಂಟ್‌ಗಳು ಕಾವೇರಿ ನೀರಿನ ಸಂಪರ್ಕ ಪಡೆದು ಕೊಳ್ಳದೇ ಟ್ಯಾಂಕರ್ ನೀರಿನ ಮೇಲೆ ಅವಲಂಬನೆಯಾಗಿದ್ದಾರೆ. ತಕ್ಷಣ ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗದವರು ಕಾವೇರಿ ಕನೆಕ್ಟ್ ಸೆಂಟರ್‌ನಿಂದ ಕಾವೇರಿ ನೀರು ಪಡೆದುಕೊಳ್ಳಬಹುದಾಗಿದೆ.
ಕೊಳವೆ ಬಾವಿ ಮೇಲಿನ ಒತ್ತಡ ಇಳಿಕೆ
ಬೇಸಿಗೆ ಅವಧಿಯಲ್ಲಿ ನಗರದ ಹೊರ ವಲಯದಲ್ಲಿ ಕೊಳವೆ ಬಾವಿಯಿಂದ ಹೆಚ್ಚಿನ ಪ್ರಮಾಣದ ನೀರು ತೆಗೆಯಲಾಗುತ್ತದೆ. ಕಾವೇರಿ ಕನೆಕ್ಟ್ ಸೆಂಟರ್‌ನಿಂದ ಕೊಳವೆ ಬಾವಿ ನೀರು ತೆಗೆಯುವ ಪ್ರಮಾಣವೂ ಕಡಿಮೆಯಾಗಲಿದೆ. ಟ್ಯಾಂಕರ್ ಮಾಲೀಕರು ಕೊಳವೆ ಬಾವಿಯಿಂದ ಹೆಚ್ಚಿನ ಪ್ರಮಾಣದ ನೀರು ತೆಗೆದು ಮಾರಾಟದಿಂದ ಸುತ್ತಮುತ್ತಲಿನ ಜನಸಾಮಾನ್ಯರ ಕೊಳವೆ ಬಾವಿ ಒಣಗಿ ಉಂಟಾಗುತ್ತಿದ್ದ ಸಮಸ್ಯೆ ಸಹ ಕಡಿಮೆಯಾಗಲಿದೆ ಎಂಬ ಅಭಿಪ್ರಾಯವನ್ನು ಜಲಮಂಡಳಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.ಕೊಳವೆ ಬಾವಿ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಕಾವೇರಿ ಕನೆಕ್ಟ್ ಸೆಂಟರ್ ಆರಂಭಿಸಲಾಗುತ್ತಿದ್ದು, ಅಗತ್ಯ ಇರುವವರು ಟ್ಯಾಂಕರ್ ಮೂಲಕ ಕಾವೇರಿ ನೀರು ಪಡೆಯಬಹುದಾಗಿದೆ. ಸದ್ಯಕ್ಕೆ 10 ಕಡೆ ಸ್ಥಾಪನೆ ಮಾಡಲಾಗುತ್ತಿದೆ.
-ಡಾ। ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ.