ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರೈತರು ಕೇವಲ ಉತ್ಪಾದಕರಾಗದೆ ಮಾರಾಟಗಾರರೂ ಆಗುವುದುರಿಂದ ಹೆಚ್ಚು ಲಾಭ ಗಳಿಸಬಹುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಡಾ. ಶರಣಪ್ಪ ವಿ. ಹಲಸೆ ಅಭಿಪ್ರಾಯಪಟ್ಟರು.ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ರೇಡಿಯೋ ಕಿಸಾನ್ ದಿನದ ಅಂಗವಾಗಿ ಆಯೋಜಿಸಿದ್ದ ಕೃಷಿ ಪ್ರವಾಸೋದ್ಯಮ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಉತ್ಪಾದಕರಲ್ಲದೆ, ಮಾರಾಟಗಾರರೂ ಆಗುವುದು ಇಂದಿನ ಅನಿವಾರ್ಯ. ಕೃಷಿ ಜೊತೆಗೆ ಅಣಬೆ ಬೇಸಾಯ, ಜೇನುಸಾಕಾಣಿಕೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಮೀನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಸಿರಿಧಾನ್ಯಗಳ ಮೌಲ್ಯವರ್ಧನೆ, ನರ್ಸರಿ, ಎರೆಗೊಬ್ಬರ, ಮಣ್ಣು ಮತ್ತು ನೀರಿನ ಪರೀಕ್ಷೆ ಕೇಂದ್ರ, ಪಶು ಆಹಾರ, ಉಪ್ಪಿನಕಾಯಿ, ಮಸಾಲೆ ಪುಡಿಗಳ ತಯಾರಿಕೆ, ಕೃಷಿ ಪ್ರವಾಸೋದ್ಯಮ ಮತ್ತು ಕೃಷಿ ಪರಿಕರ ಮಾರಾಟ ಕೇಂದ್ರ ಮುಂತಾದ ಕೃಷಿ ಉಪ ಕಸುಬು ಕೈಗೊಳ್ಳಲು ಮುಂದಾಗಬೇಕು ಎಂದರು.
ಈ ಕಾರ್ಯಾಗಾರದಲ್ಲಿ, ಲಾಭದಾಯಕ ದ್ವಿತೀಯ ಕೃಷಿ ಘಟಕಗಳನ್ನು ಗುರುತಿಸಿ ಅವುಗಳನ್ನು ಶೀಘ್ರವಾಗಿ ರೈತರ ಮನೆಬಾಗಿಲಿಗೆ ತಲುಪಿಸಲು ಸೂಕ್ತವಾದ ಕೃಷಿ ವಿಸ್ತರಣಾ ತಂತ್ರಜ್ಞಾನಗಳ ಬಗ್ಗೆ ವಿವರವಾಗಿ ಚರ್ಚಿಸುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸಬೇಕಾದ ಮಾರ್ಗಸೂಚಿಗಳು ಮತ್ತು ನಿಯಮಗಳು ಹೊರಹೊಮ್ಮಿದರೆ ಕಾರ್ಯಗಾರ ಆಯೋಜಿಸುತ್ತಿರುವುದಕ್ಕೆ ಪ್ರತಿಫಲ ದೊರಕಿದಂತೆ ಆಗುತ್ತದೆ ಎಂದು ಅವರು ತಿಳಿಸಿದರು.ಮೈಸೂರು ಆಕಾಶವಾಣಿ ನಿಲಯ ನಿರ್ದೆಶಕ ಎಸ್.ಎಸ್. ಉಮೇಶ್ ಮಾತನಾಡಿ, ಪ್ರತಿಯೊಬ್ಬರಿಗೂ ಒಂದು ದಿನವಿದ್ದು ರೈತರಿಗೆ ಒಂದು ದಿನವನ್ನು ಮೀಸಲಿಟ್ಟಿರುವುದು ಆಕಾಶವಾಣಿ ಎಂದು ಹೇಳುವುದಕ್ಕೆ ಹೆಮ್ಮೆ ಅನಿಸುತ್ತದೆ. ರೇಡಿಯೋ ಕಿಸಾನ್ ಕಾರ್ಯಕ್ರಮ ಅಯೋಜಿಸಿರುವುದಕ್ಕೆ ಪ್ರೊ. ಹಲಸೆ ಅವರ ಸಹಕಾರ ಅಪಾರವಾದದ್ದು ಎಂದರು.
ಮಕ್ಕಳಿಗೆ ಕೃಷಿ ಬಗ್ಗೆ ಮಾಹಿತಿನೀಡುವಂತದ್ದು ನಮ್ಮಿಂದಲೂ ಆಗಬೇಕು. ಕೃಷಿ ಭೂಮಿ ಈಗ ಕಮರ್ಷಿಯಲ್ ಆಗಿ ರಿಯಲ್ ಎಸ್ಟೇಟ್ ಆಗುವುದನ್ನು ತಪ್ಪಿಸಬಹುದು ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಹೈದರಾಬಾದ್ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾಸಂಸ್ಥೆನಿರ್ದೇಶಕ ಡಾ.ಕೆ.ಸಿ. ಗುಮ್ಮಗೋಳ್ ಮಠ್, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೆಶಕಿ ಎಂ.ಕೆ. ಸವಿತಾ, ತುಮಕೂರಿನಅಮ್ಮಘಟ್ಟದ ಎ.ಎಸ್. ಮಹೇಶ್ ಇದ್ದರು.