ಕಾವೇರಿ ನದಿ ತೀರದಲ್ಲಿರುವ ಐತಿಹಾಸಿಕ ಗುಹ್ಯ ಶ್ರೀ ಅಗಸ್ತ್ಯೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವವು ಶ್ರೀ ದೇವರ ಜಳಕ (ತೀರ್ಥಸ್ನಾನ) ಕಾರ್ಯಕ್ರಮದೊಂದಿಗೆ ಭಕ್ತಿಭಾವದಿಂದ ಸಂಪನ್ನಗೊಂಡಿತು.

ಸಿದ್ದಾಪುರ: ಕಾವೇರಿ ನದಿ ತೀರದಲ್ಲಿರುವ ಐತಿಹಾಸಿಕ ಗುಹ್ಯ ಶ್ರೀ ಅಗಸ್ತ್ಯೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವವು ಶ್ರೀ ದೇವರ ಜಳಕ (ತೀರ್ಥಸ್ನಾನ) ಕಾರ್ಯಕ್ರಮದೊಂದಿಗೆ ಭಕ್ತಿಭಾವದಿಂದ ಸಂಪನ್ನಗೊಂಡಿತು.

ದೀಪಾವಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ಐದು ದಿನಗಳ ಕಾಲ ನಡೆದ ಈ ವಾರ್ಷಿಕ ಉತ್ಸವದಲ್ಲಿ ಪ್ರತಿ ವರ್ಷದಂತೆ ನೂರಾರು ಭಕ್ತರು ಪಾಲ್ಗೊಂಡು ಕಾವೇರಿ ನದಿಯಲ್ಲಿ ಪುಣ್ಯ ತೀರ್ಥಸ್ನಾನ ಮಾಡಿ, ಶ್ರೀ ಅಗಸ್ತ್ಯೇಶ್ವರ ಸ್ವಾಮಿಯ ದರ್ಶನ ಪಡೆದರು.

ಉತ್ಸವದ ದಿನಗಳಲ್ಲಿ ದೇವಸ್ಥಾನದಲ್ಲಿ ಗಣಪತಿ ಪೂಜೆ, ಶಿವಲಿಂಗಕ್ಕೆ ವಿಶೇಷ ಅಭಿಷೇಕ, ರುದ್ರಾಭಿಷೇಕ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಪುಣ್ಯ ತೀರ್ಥಸ್ನಾನಕ್ಕೆ ಭಕ್ತರ ಸಾಗರ: ಕಾವೇರಿ ನದಿ ದಡದಲ್ಲಿರುವ ಈ ಕ್ಷೇತ್ರದಲ್ಲಿ ತೀರ್ಥಸ್ನಾನ ಮಾಡುವುದರಿಂದ ಜೀವನ ಪಾವನವಾಗುತ್ತದೆ ಎಂಬ ಧಾರ್ಮಿಕ ನಂಬಿಕೆಯಿದ್ದು, ಭಕ್ತಾದಿಗಳು ನದಿಯಲ್ಲಿ ಪವಿತ್ರ ಸ್ನಾನ ಮಾಡಿ ದೇವರ ಕೃಪೆಗೆ ಪಾತ್ರರಾದರು.

ದೀಪಾವಳಿ ಅಮಾವಾಸ್ಯೆಯಂದು ನೂರಾರು ಮಂದಿ ತಮ್ಮ ಪೂರ್ವಜರಿಗೆ ಪಿಂಡ ಪ್ರದಾನ ಮತ್ತು ತರ್ಪಣ ನೆರವೇರಿಸಿದರು. ಇಲ್ಲಿ ಪಿಂಡ ಪ್ರದಾನ ನೀಡುವುದರಿಂದ ಮೃತರ ಆತ್ಮಕ್ಕೆ ಮೋಕ್ಷ ಸಿಗುತ್ತದೆ ಎಂಬ ಬಲವಾದ ನಂಬಿಕೆ ಇದೆ. ದೀಪಾವಳಿ ರಜಾ ದಿನಗಳ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಈ ಸಂದರ್ಭದಲ್ಲಿ ದೇವಾಲಯ ಆಡಳಿತ ಮಂಡಳಿ ಪ್ರಮುಖರು, ಗ್ರಾಮಸ್ಥರು ಇದ್ದರು.