ಕನ್ನಡ ನಾಡಿನ ಜೀವನದಿ, ದಕ್ಷಿಣದ ಕಾಶ್ಮೀರ, ಕಾವೇರಿ ನದಿ ಉಗಮಿಸುವ ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ನಿಗದಿಯಂತೆ ಶನಿವಾರ ರಾತ್ರಿ 7.50 ಕ್ಕೆ ತೀರ್ಥರೂಪಿಣಿಯಾಗಿ ಕಾವೇರಿ ತಾಯಿ ಭಕ್ತರಿಗೆ ದರ್ಶನ ನೀಡಿದಳು.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡ ನಾಡಿನ ಜೀವನದಿ, ದಕ್ಷಿಣದ ಕಾಶ್ಮೀರ, ಕಾವೇರಿ ನದಿ ಉಗಮಿಸುವ ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ನಿಗದಿಯಂತೆ ಶನಿವಾರ ರಾತ್ರಿ 7.50 ಕ್ಕೆ ತೀರ್ಥರೂಪಿಣಿಯಾಗಿ ಕಾವೇರಿ ತಾಯಿ ಭಕ್ತರಿಗೆ ದರ್ಶನ ನೀಡಿದಳು.ರಾತ್ರಿ 7.50ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜರುಗಿತು. ಈ ಸಂದರ್ಭ ತೀರ್ಥವನ್ನು ನೆರೆದಿದ್ದ ಭಕ್ತರಿಗೆ ಅರ್ಚಕರು ಪ್ರೋಕ್ಷಣೆ ಮಾಡಿದರು. ಈ ವೇಳೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಭೇದಿಸಿದ ತೀರ್ಥ ಸಂಗ್ರಹಕ್ಕಾಗಿ ಭಕ್ತರು ಕಲ್ಯಾಣಿಗೆ ಧುಮುಕಿದರು.

ದೇವಾಲಯದ ಅರ್ಚಕರಾದ ಪ್ರಶಾಂತ್ ಆಚಾರ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. 10ಕ್ಕೂ ಅಧಿಕ ಮಂದಿ ಅರ್ಚಕರು ತಾಯಿಗೆ ವಿಶೇಷ ಪೂಜೆ ನೆರವೇರಿಸಿದರು.

ಕಾವೇರಿಯ ಪವಿತ್ರ ಕುಂಡಿಕೆಗೆ ಮಹಾಸಂಕಲ್ಪ, ಕುಂಕುಮಾರ್ಚನೆ, ಮಹಾಪೂಜೆ ಜರುಗಿತು. ತೀರ್ಥೋದ್ಭವ ಜರುಗುತ್ತಿದ್ದಂತೆ ಜೈ ಜೈ ಮಾತಾ... ಕಾವೇರಿ ಮಾತಾ... ಉಕ್ಕಿ ಬಾ... ತಾಯಿ ಉಕ್ಕಿ ಬಾ... ಎಂದು ಭಕ್ತರು ದೇವಿಗೆ ಜೈಕಾರ ಹಾಕಿದರು.

ತೀರ್ಥೋದ್ಭವದ ಹಿನ್ನೆಲೆಯಲ್ಲಿ ಕೊಡಗು ಸೇರಿದಂತೆ ಕೇರಳ, ತಮಿಳುನಾಡಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶನಿವಾರ ಮಧ್ಯಾಹ್ನದ ವೇಳೆಗೆ ದೇವಾಲಯಕ್ಕೆ ಭಕ್ತರ ಆಗಮನ ಕಂಡುಬಂತು. ತೀರ್ಥೋದ್ಭವದ ಸಂದರ್ಭ ಸಾವಿರಾರು ಭಕ್ತರು ಕಾವೇರಿಯ ದರ್ಶನ ಪಡೆದು ಪುನೀತರಾದರು.

ಪವಿತ್ರ ಕಾವೇರಿ ತೀರ್ಥ ಕುಂಡಿಕೆಯ ಮುಂಭಾಗದ ಕಲ್ಯಾಣಿಯ ಮೆಟ್ಟಿಲಿನಲ್ಲಿ ಕೊಡವ ಸಾಂಪ್ರದಾಯಿಕ ಧರಿಸಿದ್ದ ಮಹಿಳೆಯರು ದೀಪ ಹಿಡಿದು ಕಾವೇರಿ ತಾಯಿಗೆ ನಮಿಸಿದರು. ಕೊಡವರು ದುಡಿಕೊಟ್ಟು ಪಾಟ್ ಹಾಡಿದರು.

ರಾತ್ರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಜಾತ್ರೆಯ ಅಂಗವಾಗಿ ಭಾಗಮಂಡಲದಿಂದ-ತಲಕಾವೇರಿ ವರೆಗೆ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಕೆ ಎಸ್ ಆರ್ ಟಿಸಿ ವತಿಯಿಂದ ಭಾಗಮಂಡಲದಿಂದ ತಲಕಾವೇರಿಗೆ ಸುಮಾರು 25 ಬಸ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತಾದಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಲಾಗಿತ್ತು.

ತಾಯಿ ಕಾವೇರಿ ಮಾತೆ ಪವಿತ್ರ ತೀಥೋದ್ಭವಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ನಿರ್ಮಾಣ, ಬೆಳಕಿನ ವ್ಯವಸ್ಥೆ, ಹೂವಿನ ಅಲಂಕಾರ, ಮೂಲ ಸೌಲಭ್ಯಗಳು ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ, ಗೀತಾ ಗಾಯನ ಕಾರ್ಯಕ್ರಮಕ್ಕೆ ಪ್ರತ್ಯೇಕ ವೇದಿಕೆ ನಿರ್ಮಾಣ, ಪ್ರಸಾದ ವಿತರಣಾ ಕೊಠಡಿ ಮಾಡಲಾಗಿತ್ತು.

ತಲಕಾವೇರಿ ಜಾತ್ರೆ ಅಂಗವಾಗಿ ಭಾಗಮಂಡಲದ ತ್ರವೇಣಿ ಸಂಗಮದಲ್ಲಿ ಪಿಂಡ ಪ್ರದಾನ, ಪುಣ್ಯ ಸ್ನಾನ ಕಂಡುಬಂತು. ಭಗಂಡೇಶ್ವರ ದೇವಾಲಯದ ಸನ್ನಿಧಿಯಲ್ಲಿ ಕೂಡಾ ವಿಶೇಷ ಪೂಜೆಗಳು ಜರುಗಿತು. ಕಾವೇರಿ ಸಂಕ್ರಮಣ ಪ್ರಯುಕ್ತ ಸುಳ್ಯದ ಶಾಸಕಿ ಭಾಗೀರತಿ ಮುರುಳ್ಯ ಅವರು ತಮ್ಮ ಕುಟುಂಬಸ್ಥರ ಸಮೇತ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ತೀರ್ಥೋದ್ಭವದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಶಾಸಕ ಡಾ. ಮಂತರ್ ಗೌಡ, ಮಾಜಿ ಸಚಿವ ರಾಮದಾಸ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

32ನೇ ವರ್ಷದ ಅನ್ನಪ್ರಸಾದ ಜಾತ್ರೆಯ ಅಂಗವಾಗಿ ಕೊಡಗು ಏಕೀಕರಣ ರಂಗದಿಂದ ಒಂದು ತಿಂಗಳ ಕಾಲ ತಲಕಾವೇರಿ ಕ್ಷೇತ್ರದಲ್ಲಿ ಮೂರು ವೇಳೆ ಕೂಡ ಅನ್ನ ಪ್ರಸಾದ ವಿತರಣೆ ಆರಂಭಿಸಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ತಿಂಡಿ ವ್ಯವಸ್ಥೆ, ಮಧ್ಯಾಹ್ನ ಊಟ ಹಾಗೂ ರಾತ್ರಿಯೂ ಅನ್ನ ಪ್ರಸಾದ ಇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮ:

ಜಿಲ್ಲಾಡಳಿತ, ಭಗಂಡೇಶ್ವರ - ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಾಹಿತ್ಯ ಹಾಗೂ ಸಂಸ್ಕೃತಿ ಅಕಾಡಮಿ ವತಿಯಿಂದ ತಲಕಾವೇರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕೊಡವರಿಂದ ಪಾದಾಯಾತ್ರೆ

ವಿವಿಧ ಕೊಡವ ಸಂಘಟನೆಗಳಿಂದ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಿಂದ ತಲಕಾವೇರಿ ವರೆಗೆ ಪಾದಯಾತ್ರೆ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಕೊಡವರು ಸಾಂಪ್ರದಾಯಿಕ ಉಡುಪಿನೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಕೇರಳ, ತಮಿಳುನಾಡಿನ ಭಕ್ತರು....

ಕೇರಳ, ತಮಿಳುನಾಡು ರಾಜ್ಯಗಳಿಂದ ಭಕ್ತರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ತಲಕಾವೇರಿಗೆ ಭೇಟಿ‌ ನೀಡಿದರು. ಮಧ್ಯಾಹ್ನವೇ ತಲಕಾವೇರಿ ಕ್ಷೇತ್ರಕ್ಕೆ ಆಗಮಿಸಿ ತೀರ್ಥೋದ್ಭವನ್ನು ಕಣ್ತುಂಬಿಸಿಕೊಂಡಿದ್ದರು.

ಅರ್ಚಕರು ಹಿಂದಿನ ಬಾಗಿಲಿಂದ ಬರುವುದಾ? : ಅರ್ಚಕರ ಅಸಮಾಧಾನ :::

ತೀರ್ಥೋದ್ಭವದ ಪೂಜೆಗಾಗಿ ತಲಕಾವೇರಿಗೆ ಸಂಜೆ 5.20ಕ್ಕೆ ಅರ್ಚಕರ ತಂಡ ಆಗಮಿಸಿತು. ಈ ಸಂದರ್ಭ ಪ್ರಮುಖ ಅರ್ಚಕರಾದ ಪ್ರಶಾತ್ ಆಚಾರ್ ಅಸಮಾಧಾನಗೊಂಡು ಅರ್ಚಕರು ದೇವಾಲಯದ ಹಿಂಭಾಗದಿಂದ ಬರುವುದಲ್ಲ ಎಂದು ಪೊಲೀಸರೊಂದಿಗೆ ತಮ್ಮ ಆಕ್ರೋಶ ಹೊರ ಹಾಕಿದರು. 20ಕ್ಕೂ ಅಧಿಕ ಮಂದಿ ಆಗಮಿಸಿದ ಹಿನ್ನೆಲೆಯಲ್ಲಿ ಇಷ್ಟು ಮಂದಿಯನ್ನು ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಪೊಲೀಸರು ತಡೆಯೊಡ್ಡಿದರು. ಇದಕ್ಕೆ ಅರ್ಚಕರು ಅಸಮಾಧಾನಗೊಂಡು ನಾವು ಪೂಜೆ ಮಾಡುವುದಾದರೆ ಒಟ್ಟಿಗೆ ಮಾಡುತ್ತೇವೆ. ಇಲ್ಲದಿದ್ದರೆ ನಾವು ತೆರಳುತ್ತೇವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಎಲ್ಲಾ ಅರ್ಚಕರಿಗೆ ಕುಂಡಿಕೆ ಬಳಿ ತೆರಳಲು ಅವಕಾಶ ಮಾಡಿಕೊಡಲಾಯಿತು.

ಮತ್ತೊಂದು ಕಡೆ ನಾರಾಯಣಾಚಾರ್ ಅವರು ಪುತ್ರಿ ನಮಿತ ಅವರು ನನ್ನನ್ನು ಕೂಡಾ ಕುಂಡಿಕೆ ಬಳಿ ಬಿಡುವಂತೆ ಪಟ್ಟು ಹಿಡಿದರು. ಆದರೆ ಪೊಲೀಸರು ಅವರಿಗೆ ಅವಕಾಶ ನಿರಾಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅವರ ನಡುವೆ ವಾಗ್ವಾದ ನಡೆಯಿತು.

20ಕ್ಕೂ ವಾಹನಗಳಲ್ಲಿ ತೀರ್ಥ ಸಂಗ್ರಹ‌...

ತಲಕಾವೇರಿಯಲ್ಲಿ ಸುಮಾರು 20ಕ್ಕೂ ಅಧಿಕ ಪಿಕ್ ಅಪ್, ಟ್ಯಾಕ್ಟರ್ ವಾಹನಗಳಲ್ಲಿ ಸಿಂಟೆಕ್ಸ್ ಗಳ‌ ಮೂಲಕ ಲಕ್ಷಾಂತರ ಲೀಟರ್ ತೀರ್ಥವನ್ನು ಸಂಗ್ರಹವನ್ನು ಮಾಡಲಾಯಿತು. ಅಲಂಕೃತ ಮಂಟಪಗಳು ಕೂಡ ಗಮನ ಸೆಳೆಯಿತು. ಭಾನುವಾರದಿಂದ ಜಿಲ್ಲೆ ಸೇರಿದಂತೆ ಹಲವು ಕಡೆಗಳಲ್ಲಿ ತೀರ್ಥ ವಿತರಣೆ ಕಾರ್ಯಕ್ರಮ ನಡೆಯಲಿದೆ.ಬತ್ತದ ಕಾವೇರಿ ಪವಿತ್ರ ತೀರ್ಥ ಕುಂಡಿಕೆ!

ತಲಕಾವೇರಿಯ ಪವಿತ್ರ ಕಾವೇರಿ ತೀರ್ಥ ಕುಂಡಿಕೆಯಲ್ಲಿ ನೂರಾರು ಬಿಂದಿಗೆಗಳಲ್ಲಿ ತೀರ್ಥವನ್ನು ಭಕ್ತರು ಕೊಂಡೊಯ್ದರೂ ಕೂಡಾ ಪವಿತ್ರ ತೀರ್ಥ ಕುಂಡಿಕೆ ತುಂಬಿ ತುಳುಕುತ್ತಿತ್ತು. ಸ್ಟೀಲ್ ಬಿಂದಿಗೆ, ಚೆಂಬು, ಕ್ಯಾನ್ ಗಳಲ್ಲಿ ಭಕ್ತರು ತೀರ್ಥವನ್ನು ಸಂಗ್ರಹಿಸಿದರು.