ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಮಡಿಕೇರಿ : ತೀವ್ರ ಮಳೆ ಕೊರತೆ ಹಾಗೂ ಏರುತ್ತಿರುವ ಬಿಸಿಲಿನ ತಾಪದಿಂದಾಗಿ ರಾಜ್ಯದ ಜೀವ ನದಿ ಕಾವೇರಿ ತವರಿನಲ್ಲೇ ಸಂಪೂರ್ಣ ಬತ್ತಿ ಹೋಗಿದೆ. ಕಾವೇರಿ ನದಿ ಹರಿದು ಹೋಗುವ ಕುಶಾಲನಗರ ಸಮೀಪದ ದುಬಾರೆಯಲ್ಲೂ ಕೂಡ ನೀರು ಖಾಲಿಯಾಗಿದ್ದು, ಬಂಡೆ ಕಲ್ಲುಗಳ ದರ್ಶನವಾಗುತ್ತಿದೆ. ಇಂತಹ ಪರಿಸ್ಥಿತಿ ಕಂಡುಬಂದಿರುವುದು ಇದೇ ಮೊದಲು ಎನ್ನುತ್ತಾರೆ ಇಲ್ಲಿನ ಹಿರಿಯ ಮಾವುತರು.
ಕಾವೇರಿ ನದಿಯ ದಂಡೆಯಲ್ಲಿ ದುಬಾರೆ ಸಾಕಾನೆ ಶಿಬಿರವಿದ್ದು, ಇದೀಗ 23 ಸಾಕಾನೆಗಳು ಶಿಬಿರದಲ್ಲಿದೆ. ಇಲ್ಲಿನ ಸಾಕಾನೆಗಳಿಗೆ ಕಾವೇರಿ ನದಿಯಲ್ಲಿ ಪ್ರತಿ ದಿನ ಬೆಳಗ್ಗೆ ಸ್ನಾನ ಮಾಡಿಸಲಾಗುತ್ತಿತ್ತು. ಆನೆಗಳ ಆಟ, ತುಂಟಾಟವನ್ನು ವೀಕ್ಷಿಸಲು ನಾನಾ ಕಡೆಯಿಂದ ಸಾಕಷ್ಟು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಸಾಕಾನೆಗಳನ್ನು ತಾವು ಸ್ನಾನ ಮಾಡಿಸಿ ಸಂಭ್ರಮಿಸುತ್ತಾರೆ. ಆನೆಗಳು ಕೂಡ ನೀರಿನಲ್ಲಿ ಮಿಂದು ದೇಹವನ್ನು ತಂಪು ಮಾಡಿಕೊಳ್ಳುತ್ತಿದ್ದವು. ಬಂದ ಪ್ರವಾಸಿಗರಿಗೆ ಸಾಕಾನೆಗಳು ಸೊಂಡಿಲಲ್ಲಿ ನೀರು ಹಾಕುತ್ತಿತ್ತು. ಇದರಿಂದ ಪ್ರವಾಸಿಗರು ಕೂಡ ಪುಳಕಿತರಾಗುತ್ತಿದ್ದರು.
ಆದರೆ ಇದೀಗ ದುಬಾರೆಯಲ್ಲಿ ನೀರಿಗಾಗಿ ಹುಡುಕಾಡುವ ಪರಿಸ್ಥಿತಿ ಉಂಟಾಗಿದೆ. ಆನೆಗಳಿಗೆ ಸ್ನಾನಕ್ಕೆ ಹೋಗಲಿ, ಕುಡಿಯಲು ಕೂಡ ನೀರು ಇಲ್ಲದ ವಾತಾವರಣ ಗೋಚರಿಸುತ್ತಿದೆ.
ಬೇಸಗೆ ಸಂದರ್ಭದಲ್ಲಿ ದುಬಾರೆಯಲ್ಲಿ ನೀರು ಇಳಿಮುಖವಾಗುವುದು ಸಾಮಾನ್ಯ. ಆದರೆ ಈ ಬಾರಿ ಇಲ್ಲಿನ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ನದಿಯಲ್ಲಿ ಬಂಡೆಕಲ್ಲುಗಳು ಮಾತ್ರ ಕಾಣುತ್ತಿದ್ದು, ಅಲ್ಲೊಂದಿಷ್ಟು ಇಲ್ಲದೊಂದಿಷ್ಟು ನೀರು ಮಾತ್ರ ಕಾಣಬರುತ್ತಿದೆ. ಆದ್ದರಿಂದ ಆನೆಗಳ ನಿತ್ಯ ಮಜ್ಜನಕ್ಕೆ ಕೂಡ ಸಾಕಷ್ಟು ಸಮಸ್ಯೆಯಾಗಿದೆ. ಇದರಿಂದ ಸ್ನಾನ ಮಾಡಿಸಲಾಗುತ್ತಿಲ್ಲ. ಪ್ರವಾಸಿಗರು ನದಿಯಲ್ಲಿರುವ ಬಂಡೆಕಲ್ಲುಗಳ ಮೇಲೆ ನಡೆದುಕೊಂಡು ದುಬಾರೆಗೆ ಭೇಟಿ ನೀಡುತ್ತಿದ್ದಾರೆ.
ಶಾಲಾ ಮಕ್ಕಳಿಗೆ ರಜೆಯ ಅವಧಿಯಾಗಿರುವುದರಿಂದ ಪ್ರವಾಸಿಗರು ಬೇಸಗೆಯಲ್ಲಿ ಪ್ರವಾಸಕ್ಕೆ ಹೆಚ್ಚಾಗಿ ಬರುತ್ತಾರೆ. ದುಬಾರೆಗೆ ಆಗಮಿಸಿ ಸಾಕಾನೆಗಳ ಶಿಬಿರಕ್ಕೆ ಭೇಟಿ ನೀಡಿ ಕಾವೇರಿ ನದಿಯಲ್ಲಿ ಆನೆಗಳನ್ನು ಸ್ನಾನ ಮಾಡಿಸಿ ಖುಷಿ ಪಡುತ್ತಾರೆ. ಆದರೆ ಈಗ ನದಿಯಲ್ಲಿ ನೀರಿಲ್ಲದ ಪರಿಣಾಮ ಆನೆಗಳಿಗೆ ಸ್ನಾನ ಮಾಡಿಸಲಾಗುತ್ತಿಲ್ಲ. ಇದರಿಂದ ಪ್ರವಾಸಿಗರು ಕೂಡ ನಿರಾಸೆ ಅನುಭವಿಸುವಂತಾಗಿದೆ.
ತೀವ್ರ ಬಿಸಿಲು ಇರುವುದರಿಂದ ಆನೆಗಳು ನೀರಿನಲ್ಲಿರಲು ಇಚ್ಚಿಸುತ್ತದೆ. ಪ್ರತಿ ದಿನ ನಾವು ನದಿಯಲ್ಲಿ ಸ್ನಾನ ಮಾಡಿಸಿ ನಂತರ ಅವುಗಳಿಗೆ ಆಹಾರ ನೀಡಿ ಕಾಡಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದೆವು. ಆದರೆ ಇದೀಗ ನೀರಿಲ್ಲದೆ ಇರುವುದರಿಂದ ಆನೆಗಳು ಕೂಡ ನಿರಾಶೆಗೆ ಒಳಗಾಗಿದೆ ಎಂದು ಇಲ್ಲಿನ ಮಾವುತರು ಬೇಸರದಿಂದ ನುಡಿಯುತ್ತಾರೆ.
ದುಬಾರೆಯಲ್ಲಿ ಕಾವೇರಿ ನದಿ ಸಂಪೂರ್ಣ ಬತ್ತಿ ಹೋಗಿದೆ. ಇಂತಹ ಪರಿಸ್ಥಿತಿಯನ್ನು ನನ್ನ ಜೀವನದಲ್ಲಿ ಎಂದಿಗೂ ಕಂಡಿಲ್ಲ. ನೀರು ಇಲ್ಲದ ಪರಿಣಾಮ ಸಾಕಾನೆಗಳಿಗೆ ಸ್ನಾನಕ್ಕೆ ಸಮಸ್ಯೆಯಾಗುತ್ತಿದೆ. ಇದರಿಂದ ಸ್ನಾನ ಮಾಡಿಸಲಾಗುತ್ತಿಲ್ಲ. ಮುಂದಿನ ತಿಂಗಳು ಮತ್ತಷ್ಟು ನೀರಿನ ಸಮಸ್ಯೆ ಕಾಡಲಿದೆ. ಆದ್ದರಿಂದ ಮಳೆ ಅನಿವಾರ್ಯವಾಗಿದೆ ಎಂದು ದುಬಾರೆ ಸಾಕಾನೆ ಶಿಬಿರ ಮಾವುತ ಡೋಬಿ ಹೇಳಿದರು.
ನದಿಯಲ್ಲಿ ಸಾಕಾನೆಗಳನ್ನು ಪ್ರತಿ ದಿನ ಸ್ನಾನ ಮಾಡಿಸಲಾಗುತ್ತಿತ್ತು. ಆದರೆ ಕಾವೇರಿ ನದಿಯಲ್ಲಿ ಈಗ ನೀರಿಲ್ಲದಂತಾಗಿದೆ. ಇದರಿಂದ ಈಗ ಸ್ನಾನ ಮಾಡಿಸಲಾಗುತ್ತಿಲ್ಲ. ಆನೆಗಳಿಗೆ ಕುಡಿಯಲು ನೀರಿನ ಸಮಸ್ಯೆ ಸದ್ಯಕ್ಕಿಲ್ಲ. ಕೆರೆಗಳಲ್ಲಿ ನೀರಿನ ವ್ಯವಸ್ಥೆಯಿದೆ ಎಂದು ದುಬಾರೆ ಸಾಕಾನೆ ಶಿಬಿರ ಅರಣ್ಯಾಧಿಕಾರಿ ರಂಜನ್ ತಿಳಿಸಿದರು.