ಕಾವೇರಿ ಉತ್ಸವ: ಜನರ ಮನಗೆದ್ದ ಮಂಡ್ಯ ಸಂಭ್ರಮ

| Published : Nov 09 2024, 01:17 AM IST

ಸಾರಾಂಶ

ಸಾಂಸ್ಕೃತಿಕವಾಗಿ ಯಾವ ಜಿಲ್ಲೆ ಬೆಳವಣಿಗೆ ಸಾಧಿಸಿರುತ್ತದೋ ಅದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಬೆಳವಣಿಗೆ ಸಾಧಿಸಿರುವುದನ್ನು ಕಾಣಬಹುದು. ಬೇರನ್ನು ಮರೆತರೆ ಮರ ಉಳಿಯುವುದಿಲ್ಲ. ಅದೇ ರೀತಿ ಇತಿಹಾಸ ಮತ್ತು ಇತಿಹಾಸ ಸೃಷ್ಟಿದವರನ್ನು ನಾವು ಎಂದಿಗೂ ಮರೆಯಬಾರದು. ಅದನ್ನು ಮರೆತರೆ ಇನ್ನೊಂದು ಇತಿಹಾಸವನ್ನು ಸೃಷ್ಟಿಸಲಾಗುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದೊಂದಿಗೆ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಕಾವೇರಿ ಉತ್ಸವ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭ ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಕರ್ನಾಟಕದ ನೆಚ್ಚಿನ ತಿಂಡಿ, ಫ್ಯಾಷನ್, ಶಾಪಿಂಗ್ ಹಾಗೂ ಮನರಂಜನೆ ಜನರಲ್ಲಿ ಬಹುವಾಗಿ ಆಕರ್ಷಿಸಿದವು. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಮಳಿಗೆಗಳಲ್ಲಿದ್ದ ನೆಚ್ಚಿನ ತಿಂಡಿಗಳನ್ನು ಸವಿದು ಆನಂದಿಸಿದರು. ಪುಟ್ಟ ಮಕ್ಕಳು ಮನರಂಜನಾ ಕ್ರೀಡೆಗಳಲ್ಲಿ ಭಾಗವಹಿಸಿ ಸಂತಸಪಟ್ಟರು.

ಮಂಡ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಸಾಂಸ್ಕೃತಿಕವಾಗಿ ಯಾವ ಜಿಲ್ಲೆ ಬೆಳವಣಿಗೆ ಸಾಧಿಸಿರುತ್ತದೋ ಅದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಬೆಳವಣಿಗೆ ಸಾಧಿಸಿರುವುದನ್ನು ಕಾಣಬಹುದು. ಬೇರನ್ನು ಮರೆತರೆ ಮರ ಉಳಿಯುವುದಿಲ್ಲ. ಅದೇ ರೀತಿ ಇತಿಹಾಸ ಮತ್ತು ಇತಿಹಾಸ ಸೃಷ್ಟಿದವರನ್ನು ನಾವು ಎಂದಿಗೂ ಮರೆಯಬಾರದು. ಅದನ್ನು ಮರೆತರೆ ಇನ್ನೊಂದು ಇತಿಹಾಸವನ್ನು ಸೃಷ್ಟಿಸಲಾಗುವುದಿಲ್ಲ. ಅದರೊಂದಿಗೆ ನಾವೂ ಉಳಿಯುವುದಿಲ್ಲ ಎಂದು ಸೂಕ್ಷ್ಮವಾಗಿ ಹೇಳಿದರು.

ಸಾಧನೆಗಳ ಬಗ್ಗೆ ನಾವು ಮಾತನಾಡಬಾರದು. ಸಾಧನೆಗಳು ಮಾತನಾಡಬೇಕು ಎಂಬ ಮಾತಿಗೆ ಅನ್ವರ್ಥವಾಗುವಂತೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಸಾಧನೆಗಳು ಎಲ್ಲೆಡೆ ಮಾತನಾಡುತ್ತಿವೆ. ಅವರು ನೀಡಿದ ಕೊಡುಗೆ, ಸಾಧನೆಗಳನ್ನು ಯಾರೂ ಮರೆಯುವಂತೆಯೇ ಇಲ್ಲ. ಅದೊಂದು ಹೆಮ್ಮೆಯ ವಿಷಯ ಎಂದು ನುಡಿದರು.

ಇಡೀ ದೇಶದಲ್ಲೇ ಮಂಡ್ಯಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಈ ನೆಲದಲ್ಲಿ ಕಾಣಬಹುದಾದ ಅಚ್ಚರಿಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ದಕ್ಕೆ ಮಂಡ್ಯ ಎಂದರೆ ಇಂಡಿಯಾ ಎಂಬ ಮಾತಿದೆ. ಕೆಆರ್‌ಎಸ್ ಅಣೆಕಟ್ಟು ನಿರ್ಮಾಣದ ಹಿಂದೆ ಎಂತಹದೊಂದು ಮಹಾ ತ್ಯಾಗವಿದೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಮಂಡ್ಯಕ್ಕೆ ರೈತರ ನಾಡು ಎಂದು ಹೆಸರು ಬಂದಿದ್ದೇ ನಾಲ್ವಡಿ ಅವರಿಂದ ಎಂದು ಬಣ್ಣಿಸಿದರು.

ಹರಟೆಗಾರ ಪ್ರೊ.ಕೃಷ್ಣೇಗೌಡ ಮಾತನಾಡಿ, ಕೃತಜ್ಞತೆಯ ಮೌಲ್ಯ ನಮ್ಮಲ್ಲಿ ಸದಾ ಇರಬೇಕು. ನಾವೇನು ಪಡೆದೆವು ಎಂದು ನೆನಪಿಟ್ಟುಕೊಳ್ಳಬೇಕು. ನೆನೆಯುವುದು, ಮರೆಯದಿರುವುದು, ಕೊಡುವುದು, ಹೋರಾಡುವುದು, ಶರಣಾಗಿ ಬಂದವರ ಕಾಪಾಡುವುದು ಈ ಎಲ್ಲ ಮೌಲ್ಯಗಳು ಮಂಡ್ಯದೊಳಗೆ ಜೀವಂತವಾಗಿವೆ. ಮಂಡ್ಯದ ಜನರಿಗೆ ಕೃತಜ್ಞತೆ ಎಂಬ ಮೌಲ್ಯವಿದೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ರಂತಹ ಒಬ್ಬ ರಾಜರಿದ್ದರೆ ಪ್ರಜಾಪ್ರಭುತ್ವವೇ ಬೇಕಿಲ್ಲ. ಭಾರತದಲ್ಲಿ ಹುಡುಕಿದರೂ ಅಂತಹ ಮಹಾರಾಜ ಸಿಗುವುದಿಲ್ಲ. ಅಂತಹ ವ್ಯಕ್ತಿ ಇದ್ದ ಪುಣ್ಯದ ನಾಡು ನಮ್ಮದು. ಅವರ ದೂರದೃಷ್ಟಿ, ಅಭಿವೃದ್ಧಿಯ ಪರಿಕಲ್ಪನೆಯಿಂದಲೇ ಆದರ್ಶ ಆಡಳಿತಗಾರನಾಗಿ, ಮೈಸೂರು ಸಂಸ್ಥಾನವನ್ನು ಮಾದರಿ ರಾಜ್ಯವನ್ನಾಗಿ ರಾಜಯೋಗಿಯಾದರು ಎಂದು ವರ್ಣಿಸಿದರು.

ಪ್ರಪಂಚದಲ್ಲಿರುವ ೪,೫೦೦ ಭಾಷೆಗಳಲ್ಲಿ ಅದ್ಭುತ ಶಬ್ಧಕೋಶ, ಅದ್ಭುತ ರಚನೆಯನ್ನೊಳಗೊಂಡಿರುವ ಶ್ರೇಷ್ಠ ಭಾಷೆಗಳಳಲ್ಲಿ ಕನ್ನಡವೂ ಒಂದು ಎಂದು ಅಮೆರಿಕಾದ ವರದಿಯೊಂದು ಹೇಳಿದೆ. ಇದು ನಮಗೆೆಮ್ಮೆಯ ವಿಷಯ. ಭಾಷೆ ಎನ್ನುವುದು ಮಾತನಾಡುವುದಕ್ಕೆ ಬಳಸುವ ಸರಕಲ್ಲ. ಕನ್ನಡದ ಜಗತ್ತಿನಲ್ಲಿ ಏನೇನು ಬೆಳವಣಿಗೆಯಾಗಿರುತ್ತದೋ ಅದೆಲ್ಲವನ್ನೂ ಭಾಷೆ ತನ್ನೊಳಗೆ ಅಡಗಿಸಿಕೊಂಡಿರುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ನಾಲ್ವಡಿ ಕುರಿತು ಗೀತೆ ರಚಿಸಿದ ಅನಸೋಗೆ ಸೋಮಶೇಖರ್, ಕಾವೇರಿ ಗೀತೆ ರಚನೆಕಾರ ಕೊತ್ತತ್ತಿ ರಾಜು ಅವರನ್ನು ಸನ್ಮಾನಿಸಲಾಯಿತು. ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು. ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ, ನಟ ನೀನಾಸಂ ಸತೀಶ್, ಉದ್ಯಮಿ ಸ್ಟಾರ್ ಚಂದ್ರು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಶೇಖ್ ತನ್ವೀರ ಆಸಿಫ್, ಮಾಜಿ ಶಾಸಕ ಎಂ.ಶ್ರೀನಿವಾಸ್, ನಾಲ್ವಡಿ ಕೃಷ್ಣ ರಾಜ ಒಡೆಯರ್ ಟ್ರಸ್ಟ್‌ನ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಎಚ್.ಎನ್.ಯೋಗೇಶ್, ವಿನಯ್ ಕೃಷ್ಣ ಇತರರಿದ್ದರು.ರುಚಿಕರ ತಿಂಡಿಗಳ ಆಕರ್ಷಣೆ

ಮಂಡ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಕರ್ನಾಟಕ ವಿವಿಧ ಭಾಗದ ರುಚಿಕರ ತಿಂಡಿಗಳು ಜನರನ್ನು ಬಹುವಾಗಿ ಆಕರ್ಷಿಸಿದವು. ಮೇಲುಕೋಟೆ ಪುಳಿಯೋಗರೆ, ಚಾಟ್ಸ್‌ಗಳು, ವೈವಿಧ್ಯಮಯ ಕೇರಳ ಹಲ್ವಾ, ವಿವಿಧ ಮಾದರಿಯ ಚಿಪ್ಸ್‌ಗಳು, ಮಸಾಲೆ ಪಾಪಡ್‌ಗಳು, ಹಲವಾರು ಮಾದರಿಯ ಬಜ್ಜಿ, ಬೊಂಡ ಸೇರಿದಂತೆ ವಿವಿಧ ಬಗೆಯ ರುಚಿಕರ ತಿನಿಸುಗಳು ತಣ್ಣನೆಯ ವಾತಾವರಣದಲ್ಲಿ ಜನರನ್ನು ಬೆಚ್ಚಗಿರಿಸುವಂತೆ ಮಾಡಿದ್ದವು. ಜನರಿಗೆ ರುಚಿಕರವಾದ ಎಲ್ಲ ಬಗೆಯ ತಿಂಡಿ-ತಿನಿಸುಗಳನ್ನು ಸ್ಯಾಂಪಲ್ ನೀಡಿ ಆಕರ್ಷಿಸುತ್ತಿದ್ದುದು ಕಂಡುಬಂದಿತು. ಜನರೂ ಸಹ ಇಷ್ಟವಾದ ತಿಂಡಿಗಳನ್ನು ಸವಿದು ಆನಂದಿಸಿದರು.

ವಿವಿಧ ಮಾದರಿಯ ಸ್ಪರ್ಧೆಗಳು

ಎಲ್ಲಾ ವಯೋಮಾನದವರಿಗೂ ಮೂರು ದಿನಗಳ ಕಾಲ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಮೊದಲ ದಿನ ನಡೆದ ಮುದ್ದು ಮಗು ಸ್ಪರ್ಧೆಯಲ್ಲಿ ಹಲವು ಮಕ್ಕಳು ಭಾಗವಹಿಸಿದ್ದರು. ಬೊಂಬಾಟ್‌ಜೋಡಿ, ಕಿಡ್ಸ್ ಫ್ಯಾಷನ್ ಷೋ, ಚಿತ್ರಕಲಾ ಸ್ಪರ್ಧೆ, ಫ್ಯಾಮಿಲಿ ಫ್ಯಾಷನ್ ಷೋ, ಬೊಂಬಾಟ್ ಜೋಡಿ, ಬೆಂಕಿ ರಹಿತ ಅಡುಗೆ, ಅಡುಗೆ ಮಹಾರಾಣಿ ಸೇರಿದಂತೆ ಇನ್ನೂ ಹಲವು ಸ್ಪರ್ಧೆಗಳು ಮಂಡ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನಡೆಯಲಿವೆ.