ತಲಕಾಡು: ಪ್ರವಾಹ ನೋಡಲು ಪ್ರವಾಸಿಗರ ದಂಡು

| Published : Jul 29 2024, 12:55 AM IST

ಸಾರಾಂಶ

ಹೆಮ್ಮಿಗೆ ಸೇತುವೆ ಮೇಲಿನ‌ಸಂಚಾರ ಸ್ಥಗಿತಗೊಂಡಿದ್ದರಿಂದ ಸಮೀಪದ ಕಾವೇರಿಪುರ ನೂತನ‌ಸೇತುವೆ ಮೇಲೆ ವಾಹನ ಸಂಚಾರ ದಟ್ಟಣೆ ಇತ್ತು

ಕನ್ನಡಪ್ರಭ ವಾರ್ತೆ ತಲಕಾಡು

ಪ್ರವಾಹದ ಹಿನ್ನೆಲೆಯಲ್ಲಿ ಹೆಮ್ಮಿಗೆ ಸೇತುವೆ ಮೇಲಿನ ವಾಹನ ಸಂಚಾರ ನಿರ್ಬಂಧ ಮುಂದುವರೆದಿದ್ದು, ಹೆಚ್ಚಿನ ಪ್ರವಾಸಿಗರು ಆಗಮಿಸಿದ ಹಿನ್ನೆಲೆಯಲ್ಲಿ ಭಾನುವಾರ ತಹಸೀಲ್ದಾರ್‌ ಸುರೇಶಾಚಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಹಸೀಲ್ದಾರ್ ಸೇತುವೆ ಬಳಿ ಆಗಮಿಸಿ‌ಪ್ರಮುಖ ಪ್ರವಾಹದ ವಾಸ್ತವ ಸ್ಥಿತಿ ಪರಿಶೀಲಿಸಿದರು. ಭಾನುವಾರ ರಜಾ ದಿನವಾದ್ದರಿಂದ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ತಲಕಾಡಿಗೆ ಆಗಮಿಸಿದ್ದರು. ಹೆಮ್ಮಿಗೆ ಸೇತುವೆ‌ಬಂದ್ ಸೇರಿದಂತೆ ನದಿಪಾತ್ರದ ಪ್ರವಾಸಿ ತಾಣಗಳ ಬಳಿ ತೆರಳದಂತೆ ನಿರ್ಬಂಧಿಸಿದ್ದರಿಂದ ನಿರಾಸೆಯಿಂದ ಹಿಂದಿರುಗಿದರು.

ಸೇತುವೆ ಮೇಲೆ ಜನಪ್ರವಾಹ

ಹೆಮ್ಮಿಗೆ ಸೇತುವೆ ಮೇಲಿನ‌ಸಂಚಾರ ಸ್ಥಗಿತಗೊಂಡಿದ್ದರಿಂದ ಸಮೀಪದ ಕಾವೇರಿಪುರ ನೂತನ‌ಸೇತುವೆ ಮೇಲೆ ವಾಹನ ಸಂಚಾರ ದಟ್ಟಣೆ ಇತ್ತು. ಅಲ್ಲದೆ ಸೇತುವೆ ಮೇಲಿಂದ ಪ್ರವಾಹದ ಸೊಬಗು, ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು‌ಸಮೀಪದ ಕೊಳ್ಳೇಗಾಲ ಪಟ್ಟಣದಿಂದ ಪ್ರವಾಸಿಗರ ದಂಡೇ ಆಗಮಿಸಿತ್ತು.

ಸೇತುವೆ ಮೇಲೆ ಜನಜಂಗುಳಿಯಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ತೊಡಕಾಯಿತು. ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಆಗಮಿಸಿ ಧ್ವನಿವರ್ಧಕದಲ್ಲಿ ಎಚ್ಚರಿಸುತ್ತ ಸಾರ್ವಜನಿಕರ ವಾಹನಗಳಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಇಲ್ಲಿನ ನದಿದಂಡೆಯ ದಾಸನಪುರ ಗ್ರಾಮದ ಸುತ್ತ ಪ್ರವಾಹದ ನೀರು ಆವರಿಸಿಕೊಂಡಿದೆ. ಗ್ರಾಮದ ಸುತ್ತಲಿನ ಬೆಳೆ ಪ್ರದೇಶದ ಪ್ರವಾಹದಲ್ಲಿ ಮುಳುಗಡೆಯಾಗಿದೆ.

ಶಿವನಸಮುದ್ರ ಸೇತುವೆ ಜಾಮ್‌

ಶಿವನಸಮುದ್ರ ಸೇತುವೆ ಮೇಲೆ ಭಾನುವಾರ ಮಧ್ಯಾಹ್ನದ ನಂತರ ಪ್ರವಾಸಿ ವಾಹನಗಳ ದಟ್ಟಣೆಯಿಂದ ಗಂಟೆಗಳ ಕಾಲ ಸೇತುವೆ ಮೇಲೆ ಸಂಚಾರ ದಟ್ಟಣೆ ಉಂಟಾಗಿತ್ತು. ಲ್ಲಿನ ಸೇತುವೆಯಿಂದ ಸತ್ತೇಗಾಲ ಗ್ರಾಮದವರೆಗೂ ಎರಡರಿಂದ ಮೂರು ಕಿಮೀ ದೂರದವರೆಗೂ ಸೇತುವೆ ದಾಟಲು ವಾಹನಗಳು ಹರ ಸಾಹಸ ಪಟ್ಟವು.