ಸಾರಾಂಶ
ಕನ್ನಡಪ್ರಭ ವಾರ್ತೆ ಕವಿತಾಳ
ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯ ಈ ವರ್ಷದ ಹತ್ತನೇ ತರಗತಿ ಫಲಿತಾಂಶ ತೀವ್ರ ಕುಸಿದಿದ್ದು ಶಿಕ್ಷಕರು ಮತ್ತು ಪಾಲಕರಲ್ಲಿ ಆತಂಕ ಮೂಡಿಸಿದೆ.131 ವಿದ್ಯಾರ್ಥಿಗಳಲ್ಲಿ 65 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 66 ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಕನ್ನಡ ಭಾಷೆಯಲ್ಲಿ 44, ಇಂಗ್ಲೀಷ್, 54, ಹಿಂದಿ, 58, ಗಣಿತ 56, ವಿಜ್ಞಾನ 65 ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ 66 ಮಕ್ಕಳು ಅನುತ್ತೀರ್ಣರಾಗಿದ್ದು ಆರೂ ವಿಷಯಗಳಲ್ಲಿ ಅನುತ್ತೀರ್ಣರಾದವರ ಸಂಖ್ಯೆ 25 ಈ ಕಳಪೆ ಫಲಿತಾಂಶ ಶಿಕ್ಷಕರಲ್ಲಿ ಅಚ್ಚರಿ ಮೂಡಿಸಿದೆ ಆದರೆ ಪಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
2021-22 ರಲ್ಲಿ 201 ಮಕ್ಕಳಲ್ಲಿ 165 ಮಕ್ಕಳು ಉತ್ತೀರ್ಣರಾಗಿದ್ದರು, ಶೇ.82.82 ಫಲಿತಾಂಶ ದಕ್ಕಿತ್ತು, 2022-23 ರಲ್ಲಿ 132 ಮಕ್ಕಳಲ್ಲಿ 122 ಮಕ್ಕಳು ಉತ್ತೀರ್ಣರಾಗಿದ್ದರು ಶೇ.81.82 ಫಲಿತಾಂಶ ಸಿಕ್ಕಿತ್ತು. ಪ್ರಸ್ತುತ ವರ್ಷ 131 ಮಕ್ಕಳಲ್ಲಿ ಕೇವಲ 65 ಮಕ್ಕಳು ಉತ್ತೀರ್ಣರಾಗಿ ಶೇ.49 ಫಲಿತಾಂಶ ಲಭ್ಯವಾಗಿದೆ.ಈ ವರ್ಷ 8, 9 ಮತ್ತು 10ನೇ ತರಗತಿಯಲ್ಲಿ ಒಟ್ಟು 493 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಗ್ರಾಮೀಣ ಕೃಪಾಂಕ ತೆಗೆದ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿಯುತ್ತಿದೆ. ಈ ವರ್ಷ ಫಲಿತಾಂಶ ಕುಸಿದ ಪರಿಣಾಮ ಆತಂಕ ಹೆಚ್ಚಿದೆ.
16 ಶಿಕ್ಷಕರ ಹುದ್ದೆಗಳು ಮಂಜೂರಾತಿ ಇದೆ. ಆದರೆ 7 ಜನ ಕಾಯಂ ಶಿಕ್ಷಕರಿದ್ದು 8 ಜನ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಬಿಸಿಯೂಟ, ಸಮವಸ್ತ್ರ, ಪಠ್ಯ ಪುಸ್ತಕ ಸೇರಿದಂತೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದೆ ಆದರೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸದ ಹಿನ್ನೆಲೆ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ವಾತಾವರಣ ಕಡಿಮೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.ಆಂತರಿಕ 20 ಅಂಕ ನೀಡಿದರೂ ಹೆಚ್ಚಿನ ಸಂಖ್ಯೆಯ ಮಕ್ಕಳು ಅನುತ್ತೀರ್ಣರಾಗಿರುವುದು ಕಂಡು ಬಂದಿದೆ. ಶಾಲೆಗೆ ಬರುವ ಮಕ್ಕಳು ಹಾಜರಾತಿ ನಂತರ ತರಗತಿಗಳಿಗೆ ಗೈರಾಗುವುದು, ಓದಿನ ಬಗ್ಗೆ ಆಸಕ್ತಿ ತೋರದಿರುವುದು, ಗುಟುಕಾ, ಸಿಗರೇಟು ಮತ್ತಿತರ ದುಶ್ಚಟಗಳ ಬಗ್ಗೆ ಒಲವು, ಮೊಬೈಲ್ ಬಳಕೆ ಬಗ್ಗೆ ಹೆಚ್ಚಿನ ಆಸಕ್ತಿ ಹೀಗೆ ಓದಿನ ಕಡೆ ಮಕ್ಕಳು ತೋರಿದ ನಿರ್ಲಕ್ಷವೇ ಈ ಫಲಿತಾಂಶವಾಗಿದೆ.
ತರಗತಿಗೆ ಗೈರಾದ ಮಕ್ಕಳ ಬಗ್ಗೆ ಪಾಲಕರಿಗೆ ತಿಳಿಸಿದರೂ ಅವರು ಕಾಳಜಿ ವಹಿಸುವುದಿಲ್ಲ. ಅವರ ಓದಿನ ಬಗ್ಗೆ ತಿಳಿದುಕೊಳ್ಳುವುದಿಲ್ಲ. ಶಾಲೆಗೆ ಬರುವಂತೆ ಮಾಹಿತಿ ನೀಡಿದರೂ ಯಾವುದೇ ಮೀಟಿಂಗ್‌ಗೆ ಬಾರದೆ ಪಾಲಕರು ನಿರಾಸಕ್ತಿ ತೋರುತ್ತಾರೆ. ಮಕ್ಕಳು ಶಾಲೆಯಿಂದ ಹೊರಗುಳಿದರೆ ಪ್ರಶ್ನಿಸುವಂತಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ ಎನ್ನುತ್ತಾರೆ ಶಿಕ್ಷಕರು.ತರಗತಿ ಹೊರತುಪಡಿಸಿ ವಿಶೇಷ ತರಗತಿ ನಡೆಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ತರಗತಿ ನಡೆಸಲಾಗಿದೆ. ಆದಾಗೂ ಫಲಿತಾಂಶ ಸುಧಾರಣೆ ಕಂಡು ಬಂದಿಲ್ಲ, ಪರೀಕ್ಷಾ ಅಕ್ರಮ ತಡೆಗೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿರುವುದು ಫಲಿತಾಂಶ ಕುಸಿತಕ್ಕೆ ಕಾರಣ ಇರಬಹುದು ಎಂದು ಮುಖ್ಯ ಗುರು ಶಿವನಗೌಡ ಬಿರಾದಾರ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಮೌನೇಶ ಕೊಡ್ಲಿ ಹೇಳಿದರು.