ಹರಿಹರ ನಗರಸಭಾ ಅಧ್ಯಕ್ಷರಾಗಿ ಕವಿತಾ, ಉಪಾಧ್ಯಕ್ಷರಾಗಿ ಜಂಬಣ್ಣ ಆಯ್ಕೆ

| Published : Sep 03 2024, 01:37 AM IST

ಹರಿಹರ ನಗರಸಭಾ ಅಧ್ಯಕ್ಷರಾಗಿ ಕವಿತಾ, ಉಪಾಧ್ಯಕ್ಷರಾಗಿ ಜಂಬಣ್ಣ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ನಗರದ ನಗರಸಭಾ ಸಭಾಂಗಣದಲ್ಲಿ ಸೋಮವಾರ ನಡೆದ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಕವಿತಾ ಮಾರುತಿ ಬೇಡರ್ ಅಧ್ಯಕ್ಷೆ ಹಾಗೂ ಜಂಬಣ್ಣ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

- ಶಾಸಕ ಹರೀಶ್‌, ಜೆಡಿಎಸ್‌, ಬಿಜೆಪಿ ಮುಖಂಡರಿಂದ ಅಭಿನಂದನೆ - - - ಕನ್ನಡಪ್ರಭ ವಾರ್ತೆ ಹರಿಹರ

ಇಲ್ಲಿಯ ನಗರಸಭಾ ಸಭಾಂಗಣದಲ್ಲಿ ಸೋಮವಾರ ನಡೆದ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಕವಿತಾ ಮಾರುತಿ ಬೇಡರ್ ಅಧ್ಯಕ್ಷೆ ಹಾಗೂ ಜಂಬಣ್ಣ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ಚುನಾವಣಾ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ೩೧ನೇ ವಾರ್ಡಿನ ಕವಿತಾ ಮಾರುತಿ ಬೇಡರ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ೧ನೇ ವಾರ್ಡಿನ ಜಂಬಣ್ಣ ನಾಮಪತ್ರ ಸಲ್ಲಿಸಿದ್ದರು. ಅವರನ್ನು ಹೊರತುಪಡಿಸಿ, ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿದ್ದ ಜಿಲ್ಲಾ ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್‌ ಆಯ್ಕೆ ಘೋಷಣೆ ಮಾಡಿದರು.

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್.ಟಿ. ಮಹಿಳೆ ಮೀಸಲು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ಘೋಷಣೆಯಾಗಿತ್ತು. ಎಸ್.ಟಿ. ಮೀಸಲಾತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಕವಿತಾ ಮಾರುತಿ ಬೇಡರ್ ಹಾಗೂ ಸಾಮಾನ್ಯ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಜಂಬಣ್ಣ ಆಯ್ಕೆ ಆಗುವ ಮೂಲಕ ಹರಿಹರ ನಗರಸಭಾ ಆಡಳಿತವು ಜೆಡಿಎಸ್ ಪಕ್ಷದ ತೆಕ್ಕೆಗೆ ಸಿಕ್ಕಂತಾಗಿದೆ.

ನಗರಸಭೆ ಅಧಿಕಾರ ಹಿಡಿಯಲಿಕ್ಕೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಮೂರು ಪಕ್ಷಗಳು ಅತಂತ್ರ ಸಂಖ್ಯಾಬಲವನ್ನು ಹೊಂದಿದ್ದರು. ಜೆಡಿಎಸ್ ಪಕ್ಷವು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನವನ್ನ ತನ್ನ ವಶಕ್ಕೆ ಪಡೆದುಕೊಳ್ಳುವ ಮೂಲಕ ಸ್ವತಂತ್ರವಾಗಿ ಆಡಳಿತ ನಡೆಸಲು ಅವಕಾಶ ಸಿಕ್ಕಂತಾಗಿದೆ. ನಗರಸಭಾ ಸದಸ್ಯರ ಸಂಖ್ಯಾಬಲ ೨೯ ಆಗಿದ್ದು, ಜೆಡಿಎಸ್ ೧೫ ಕಾಂಗ್ರೆಸ್ ೧೦ ಬಿಜೆಪಿ ೪, ಪಕ್ಷೇತರ ೨ ಸದಸ್ಯರು ಆಯ್ಕೆಯಾಗಿದ್ದರು.

ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಯ್ಕೆಯಾಗುತ್ತಿದ್ದಂತೆಯೇ ಅವರ ಬೆಂಬಲಿಗರು ನಗರಸಭೆಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಚುನಾವಣಾ ಪ್ರಕ್ರಿಯೆ ನಡೆದ ನಂತರ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್. ಎಂ. ವೀರೇಶ್, ನಗರಸಭಾ ಸದಸ್ಯರಾದ ಶಂಕರ್ ಖಟಾವ್‌ಕರ್, ಎ. ವಾಮನಮೂರ್ತಿ, ಎನ್. ರಜನಿಕಾಂತ್, ಬಿ. ಅತ್ತಾವುಲ್ಲಾ, ಪಿ.ಎನ್. ವಿರೂಪಾಕ್ಷ, ಆಟೋ ಹನುಮಂತಪ್ಪ, ಆರ್. ದಿನೇಶ್‌ಬಾಬು, ಎಸ್.ಎಂ. ವಸಂತ್, ದಾದಾ ಖಲಂದರ್, ಎಂ.ಆರ್, ಮುಜಾಮಿಲ್, ಎಸ್.ಕೆ. ಷಹಜಾದ್ ಸನಾವುಲ್ಲಾ, ಪಕೀರಮ್ಮ, ಲಕ್ಷ್ಮಿ ಮೋಹನ್, ಆರ್.ಸಿ. ಜಾವಿದ್, ಅಶ್ವಿನಿ ಕೃಷ್ಣ, ನಿಂಬಕ್ಕ ಚಂದಾಪುರ್, ಕೆ.ಜಿ. ಸಿದ್ದೇಶ್, ಶಾಹೀನಾ ಬಾನು, ಎಸ್.ಕೆ. ನಾಗರತ್ನ, ಸೈಯದ್ ಅಬ್ದುಲ್ ಅಲೀಂ, ಇಬ್ರಾಹಿಂ, ಸುಮಿತ್ರ ಕೆ ಮರಿದೇವ, ರೇಷ್ಮಾ ಬಾನು, ಎಂ.ವಿ. ಉಷಾ ಕಿರಣ್, ರತ್ನಮ್ಮ ಡಿ ಉಜ್ಜೇಶ್, ಎಂ. ಬಾಬುಲಾಲ್, ಕೆ.ಬಿ ರಾಜಶೇಖರ್, ಸಂತೋಷ್ ದೊಡ್ಮನಿ ಸೇರಿದಂತೆ ಇತರೆ ಸದಸ್ಯರು ಹಾಗೂ ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಹಾಗೂ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ಪಕ್ಷಗಳ ಮುಖಂಡರು, ಅಭಿಮಾನಿಗಳು, ಸಮಾಜದವರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಶುಭ ಹಾರೈಸಿದರು.

- - - -೨ಎಚ್‌ಆರ್‌ಆರ್೩:

ಹರಿಹರದ ನಗರಸಭಾ ಸಭಾಂಗಣದಲ್ಲಿ ಸೋಮವಾರ ನಡೆದ ನಗರಸಭಾ ಅಧ್ಯಕ್ಷರಾಗಿ ಕವಿತಾ ಮಾರುತಿ ಬೇಡರ್ ಹಾಗೂ ಉಪಾಧ್ಯಕ್ಷರಾಗಿ ಜಂಬಣ್ಣ ಅವಿರೋಧವಾಗಿ ಆಯ್ಕೆಯಾದರು. ಶಾಸಕ ಬಿ.ಪಿ. ಹರೀಶ್ ಸೇರಿದಂತೆ ಇತರರು ಶುಭ ಹಾರೈಸಿದರು.