ಸಾರಾಂಶ
ಧಾರವಾಡ:
ಕರ್ನಾಟಕ ವಿಶ್ವವಿದ್ಯಾಲಯವು ಕಳೆದ ಎರಡು ವರ್ಷಗಳಿಂದ ಕೊಡಮಾಡುತ್ತಿರುವ ‘ಅರಿವೇ ಗುರು’ ಪ್ರಶಸ್ತಿ 2024ನೇ ಸಾಲಿಗೆ ಕಲಾ ಕ್ಷೇತ್ರದಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಸಮಾಜ ವಿಜ್ಞಾನ ಕ್ಷೇತ್ರದಿಂದ ಡಾ. ವಿ.ಜಿ. ತಳವಾರ ಹಾಗೂ ವಿಜ್ಞಾನ ಕ್ಷೇತ್ರದಿಂದ ಕವಿವಿ ಎಮರಿಟೀಸ್ ಪ್ರಾಧ್ಯಾಪಕ, ಗಣಿತ ವಿಜ್ಞಾನಿ ಪ್ರೊ. ಎನ್.ಎಂ. ಬುಜುರ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕರ್ನಾಟಕ ವಿವಿ, ಜ. 29ರಂದು ಬೆಳಗ್ಗೆ 11ಕ್ಕೆ ವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಪ್ರಶಸ್ತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಯದ ಕುಲಪತಿ ಡಾ. ಡಿ.ಬಿ. ಪರಮಶಿವಮೂರ್ತಿ ಪ್ರದಾನ ಮಾಡುವರು. ಅಧ್ಯಕ್ಷತೆಯನ್ನು ಕವಿವಿ ಪ್ರಭಾರ ಕುಲಪತಿ ಪ್ರೊ. ಜಯಶ್ರೀ ಎಸ್ ವಹಿಸಲಿದ್ದು, ಕುಲಸಚಿವ ಡಾ. ಎ. ಚೆನ್ನಪ್ಪ, ಪ್ರಸಾರಾಂಗದ ನಿರ್ದೇಶಕ ಪ್ರೊ. ಕೃಷ್ಣ ನಾಯಕ ಭಾಗವಹಿಸಲಿದ್ದಾರೆ.ಅರಿವೇ ಗುರು ಪ್ರಶಸ್ತಿಯನ್ನು ಕರ್ನಾಟಕ ವಿಶ್ವವಿದ್ಯಾಲಯವು 2022ರಿಂದ ಪ್ರದಾನ ಮಾಡುತ್ತಿದ್ದು, ಪುರಸ್ಕೃತರಿಗೆ ₹ 25 ಸಾವಿರ ನಗದು ಮೊತ್ತವಿರುತ್ತದೆ. 2022ನೇ ಸಾಲಿನ ಕಲಾ ಕ್ಷೇತ್ರದಿಂದ ನಿರುಪಾಧಿಶ ಸ್ವಾಮೀಜಿ, ಸಮಾಜ ವಿಜ್ಞಾನ ಕ್ಷೇತ್ರದಿಂದ ಡಾ. ಸಿ.ಆರ್. ಚಂದ್ರಶೇಖರ, ವಿಜ್ಞಾನ ಕ್ಷೇತ್ರದಿಂದ ಡಾ. ಗೌತಮ್ ದೇಶಿರಾಜುಗೆ ಪ್ರಶಸ್ತಿ ಕೊಡಲಾಗಿದೆ. 2023ನೇ ಸಾಲಿನಲ್ಲಿ ಕಲಾಕ್ಷೇತ್ರದಿಂದ ಡಾ. ವೀರಣ್ಣ ರಾಜೂರ, ವಿಜ್ಞಾನ ಕ್ಷೇತ್ರದಿಂದ ಪ್ರೊ. ಅಜಿತ ಕೆಂಭಾವಿ ಹಾಗೂ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಆರ್.ಜಿ. ಅಕ್ಕಿಹಾಳಗೆ ನೀಡಿ ಸನ್ಮಾನಿಸಲಾಗಿದೆ.