ಕವಿವಿ ಕ್ರೀಡಾಕೂಟ: ಜೆಎಸ್‌ಎಸ್‌ ಸಮಗ್ರ ವೀರಾಗ್ರಣಿ

| Published : Dec 15 2024, 02:00 AM IST

ಕವಿವಿ ಕ್ರೀಡಾಕೂಟ: ಜೆಎಸ್‌ಎಸ್‌ ಸಮಗ್ರ ವೀರಾಗ್ರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದಲ್ಲಿ ಸೋಲು-ಗೆಲುವು ಸಾಮಾನ್ಯ. ಪಾಲಕರು ಮಕ್ಕಳಲ್ಲಿ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ಅಂಕಗಳು ಮಾತ್ರ ಭವಿಷ್ಯವನ್ನು ನಿರ್ಧರಿಸುವುದಿಲ್ಲ.

ಧಾರವಾಡ:

ಇಲ್ಲಿಯ ಜೆಎಸ್‌ಎಸ್‌ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಆತಿಥ್ಯದಲ್ಲಿ ಇಲ್ಲಿಯ ಆರ್‌.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ವಿವಿ 71ನೇ ಅಂತರ್ ಕಾಲೇಜುಗಳ ಅಥ್ಲೆಟಿಕ್‌ನಲ್ಲಿ ಜೆಎಸ್‌ಎಸ್‌ ಸಮಗ್ರ ವೀರಾಗ್ರಣಿ ಮಾತ್ರವಲ್ಲದೇ ಪುರುಷ, ಮಹಿಳಾ ವೀರಾಗ್ರಣಿ ಸಹ ತನ್ನದಾಗಿಸಿಕೊಂಡಿದೆ. ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪುರುಷರ ವಿಭಾಗದಲ್ಲಿ 65 ಮತ್ತು ಮಹಿಳಾ ವಿಭಾಗದಲ್ಲಿ 97, ಮಿಕ್ಸ್‌ ರಿಲೇಯಲ್ಲಿ 10 ಸೇರಿದ ಒಟ್ಟು 172 ಅಂಕಗಳೊಂದಿಗೆ ಜೆಎಸ್‌ಎಸ್‌ ಸಂಸ್ಥೆಯು ಸಮಗ್ರ ವೀರಾಗ್ರಣಿ ಮುಡಿಗೇರಿಸಿಕೊಂಡಿತು. ರನ್ನರ್ ಆಪ್ ಸ್ಥಾನವನ್ನು ಪುರುಷರ ವಿಭಾಗದಲ್ಲಿ 52, ಮಹಿಳಾ ವಿಭಾಗದಲ್ಲಿ 22, ಮಿಕ್ಸ್‌ ರಿಲೇಯಲ್ಲಿ ಆರು ಸೇರಿ ಒಟ್ಟು 80 ಅಂಕಗಳೊಂದಿಗೆ ಕರ್ನಾಟಕ ಆರ್ಟ್ಸ ಕಾಲೇಜು ಹಾಗೂ ಹೊನ್ನಾವರದ ಎಂಪಿಇಎಸ್ ಎಸ್‌ಡಿಎಂ ಪದವಿ ಕಾಲೇಜು ಪುರುಷರ ವಿಭಾಗದಲ್ಲಿ 37, ಮಹಿಳೆಯರ ವಿಭಾಗದಲ್ಲಿ 17, ಮಿಕ್ಸ್‌ ರಿಲೇಯಲ್ಲಿ ಎರಡು ಅಂಕಗಳೊಂದಿಗೆ 2ನೇ ರನ್ನರ್ ಆಪ್ ಸ್ಥಾನ ಪಡೆದುಕೊಂಡಿತು.

ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಜೀವನದಲ್ಲಿ ಸೋಲು-ಗೆಲುವು ಸಾಮಾನ್ಯ. ಪಾಲಕರು ಮಕ್ಕಳಲ್ಲಿ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ಅಂಕಗಳು ಮಾತ್ರ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂದರು.

1992ನೇ ಬಾರ್ಸಿಲೋನಾ ಓಲಂಪಿಕ್‌ನಲ್ಲಿ ಭಾಗವಹಿಸಿದ್ದ ಏಕಲವ್ಯ ಪ್ರಶಸ್ತಿ ಪುರಸ್ಕೃತ, ಎಂ.ಆರ್. ಪಾಟೀಲ್ ಮಾತನಾಡಿ, ಓಲಂಪಿಕ್‌ನಲ್ಲಿ ಸಾಧನೆ ಮಾಡಲು ಸತತ ಪ್ರಯತ್ನ, ಕಠಿಣ ಪರಿಶ್ರಮ ಬೇಕು. ಸರ್ಕಾರ ಕ್ರೀಡೆಗೆ ಹಲವು ಪ್ರೋತ್ಸಾಹಕರ ಯೋಜನೆ ಜಾರಿಗೊಳಿಸಿದೆ. ಅವುಗಳನ್ನು ಸದುಪಯೋಗ ಪಡೆದುಕೊಳ್ಳಿ ಎಂದರು.

ಕವಿವಿ ಪ್ರಭಾರಿ ಕುಲಪತಿ ಬಿ.ಎಂ. ಪಾಟೀಲ್, ಕ್ರೀಡಾಕೂಟದಲ್ಲಿ 13 ನೂತನ ದಾಖಲೆಗಳು ಸೃಷ್ಟಿಯಾಗಿದ್ದು, ಹೆಮ್ಮೇಯ ಸಂಗತಿ ಎಂದರು.

3ನೇ ಬಾರಿಗೆ ಆತಿಥ್ಯ:

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೆಎಸ್ಸೆಸ್‌ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಅಥ್ಲೆಟಿಕ್ ಕ್ರೀಡಾಕೂಟಗಳ ಆಯೋಜನೆಯಿಂದ ದೇಶಕ್ಕೆ ಕ್ರೀಡಾ ಪ್ರತಿಭೆಗಳನ್ನು ಪರಿಚಯಿಸಲು ಸಾಧ್ಯ. ನಮ್ಮ ಸಂಸ್ಥೆಯಿಂದ 3ನೇ ಬಾರಿಗೆ ಈ ಕ್ರೀಡಾಕೂಟ ಆಯೋಜಿಸಿದ್ದು, ನೂತನ ದಾಖಲೆ ಬರೆದ ಪ್ರತಿ ಕ್ರೀಡಾಪಟುವಿಗೆ ಪ್ರಥಮ ಬಾರಿಗೆ ₹ 10 ಸಾವಿರ ನೀಡಲಾಗಿದೆ ಎಂದರು.

ಈ ವೇಳೆ ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಸೂರಜ್ ಜೈನ್‌ ಸ್ವಾಗತಿಸಿದರು. ಶ್ರವಣಕುಮಾರ ಯೋಗಿ ವರದಿ ವಾಚಿಸಿದರು. ಜಿನೇಂದ್ರ ಕುಂದಗೋಳ ನಿರೂಪಿಸಿದರು. ಮಹಾವೀರ ಉಪಾದ್ಯೆ ಇದ್ದರು.