1975ರಲ್ಲಿ ಸ್ಥಾಪನೆಯಾಗಿ ಕಳೆದ ಐದು ದಶಕಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿರುವ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವು ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.
ಇಂದಿನಿಂದ 2 ದಿನಗಳ ಕಾಲ ರಾಷ್ಟ್ರೀಯ ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ ಕಾರವಾರ1975ರಲ್ಲಿ ಸ್ಥಾಪನೆಯಾಗಿ ಕಳೆದ ಐದು ದಶಕಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿರುವ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವು ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಈ ವಿಶೇಷ ಸಂದರ್ಭದ ಅಂಗವಾಗಿ ಡಿ. 12 ಮತ್ತು 13ರಂದು ಎರಡು ದಿನಗಳ ಕಾಲ ಬೃಹತ್ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಹಾಗೂ ಸಾಗರ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ಹರಗಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಪಿಎಂ–ಉಷಾ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಪ್ರಾಯೋಜಿತವಾಗಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಉದ್ಯಮ ಮತ್ತು ನೀಲಿ ಕ್ರಾಂತಿ: ಪರಿಸರ ಸುಸ್ಥಿರತೆಗೆ ಒಂದು ಮಾರ್ಗ (Industry and Blue Revolution: A Pathway to Environmental Sustainability) ಎಂಬ ಶೀರ್ಷಿಕೆಯಡಿ ಈ ಸಮ್ಮೇಳನ ನಡೆಯಲಿದೆ. ಇಂದಿನ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಸವಾಲಾದ ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿಯ ಸಮತೋಲನ ಕಾಯ್ದುಕೊಳ್ಳುವ ಕುರಿತು ತಜ್ಞರು ಚರ್ಚಿಸಲಿದ್ದಾರೆ.ಮಹಾರಾಷ್ಟ್ರ, ಕೇರಳ, ಗೋವಾ, ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಂದ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಪ್ರಾಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಆಗಮಿಸಲಿದ್ದು, ಸುಮಾರು 300ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪರಿಸರ ಸ್ನೇಹಿ ವ್ಯವಹಾರಗಳ ಮೂಲಕ ಸುಸ್ಥಿರ ಬೆಳವಣಿಗೆ ಸಾಧಿಸುವ ಕುರಿತು ಉದ್ಯಮಿಗಳು ಮತ್ತು ತಜ್ಞರು ಹೊಸ ಆಲೋಚನೆ ಹಂಚಿಕೊಳ್ಳಲಿದ್ದಾರೆ.
ಡಿ. 12ರಂದು ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಖಾನ್ ವಹಿಸಲಿದ್ದಾರೆ. ಕೈಗಾ ಮತ್ತು ಕಾರವಾರದ ನಿರ್ದೇಶಕ ಬಿ.ವಿನೋದ್ ಕುಮಾರ್ ಉದ್ಘಾಟಿಸಲಿದ್ದು, ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ. ರವಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಲ್ಲದೆ, ಕುಲಸಚಿವ ಡಾ. ಶಂಕರ್ ಒಣಿಕೆಯಾಳ ಮತ್ತು ಸಿಂಡಿಕೇಟ್ ಸದಸ್ಯ ಡಾ. ಶಿವಾನಂದ ನಾಯಕ್ ಉಪಸ್ಥಿತರಿರಲಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಡಾ. ಎ.ಮುನಿಮನಿ ಹಾಗೂ ಡಾ. ಶಿವಶಂಕರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.ಸಮ್ಮೇಳನದ ಎರಡನೇ ದಿನವಾದ 13 ರಂದು ಮಧ್ಯಾಹ್ನ ವಿಶೇಷ ಪ್ಯಾನಲ್ ಚರ್ಚೆ ನಡೆಯಲಿದೆ. ಈ ವೇಳೆ ಮಾಧ್ಯಮ ಮಿತ್ರರು ಮತ್ತು ವಿಷಯ ತಜ್ಞರು ನೀಡುವ ಸಲಹೆ ಕ್ರೋಢೀಕರಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಗ್ರಾಸಿಮ್ ಇಂಡಸ್ಟ್ರೀಸ್, ಸೇಂಟ್ ಮಿಲಾಗ್ರಿಸ್, ಕೆನರಾ ಬ್ಯಾಂಕ್ ಮತ್ತು ಸ್ಥಳೀಯ ಸಂಸ್ಥೆಗಳು ಸಹಕಾರ ನೀಡಿವೆ ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹನುಮಂತ ಎನ್. ಮುಸ್ತಾರಿ ಹಾಗೂ ದಿವೇಕರ ಕಾಲೇಜಿನ ಗ್ರಂಥಪಾಲಕ ಸುರೇಶ್ ಇದ್ದರು.