ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ''ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿ ಪ್ರೈವೇಟ್ ಲಿಮಿಟೆಡ್'' ಘಟಕ ವಿಸ್ತರಣೆಗೆ ಕವಾಸಕಿ ಹೆವಿ ಇಂಡಸ್ಟ್ರೀಸ್ ಸಂಸ್ಥೆ ಮುಂದಿನ 10 ವರ್ಷಗಳಲ್ಲಿ ₹800 ಕೋಟಿವರೆಗೆ ಹೂಡಿಕೆ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಿದೆ.

ಕನ್ನಡಪ್ರಭ ವಾರ್ತೆ ಜಪಾನ್‌

ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ''''ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿ ಪ್ರೈವೇಟ್ ಲಿಮಿಟೆಡ್'''' ಘಟಕ ವಿಸ್ತರಣೆಗೆ ಕವಾಸಕಿ ಹೆವಿ ಇಂಡಸ್ಟ್ರೀಸ್ ಸಂಸ್ಥೆ ಮುಂದಿನ 10 ವರ್ಷಗಳಲ್ಲಿ ₹800 ಕೋಟಿವರೆಗೆ ಹೂಡಿಕೆ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಿದೆ.

ಇದು ಕರ್ನಾಟಕದ ಉತ್ಪಾದನಾ ಮತ್ತು ಎಂಜಿನಿಯರಿಂಗ್ ವಲಯಕ್ಕೆ ದೊಡ್ಡ ಉತ್ತೇಜನ ನೀಡಲಿದ್ದು, ಡಿ.ಕೆ.ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರ ಸಮ್ಮುಖದಲ್ಲಿ ಟೋಕಿಯೊದಲ್ಲಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್‌ ಹಾಗೂ ಕವಾಸಕಿ ಹೆವಿ ಇಂಡಸ್ಟ್ರೀಸ್‌ನ ಕೆಂಜಿ ಮಟ್ಸುಶಿತಾ ಮತ್ತು ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿಯ ಸಿಇಒ ಮಿನೋರು ಹಟ್ಸುಡಾ ಅವರು ಒಪ್ಪಂದ ವಿನಿಮಯ ಮಾಡಿಕೊಂಡರು.

600 ಉನ್ನತ ಮಟ್ಟದ ಉದ್ಯೋಗ ಸೃಷ್ಟಿ ನಿರೀಕ್ಷೆ:

ಪ್ರಸ್ತಾವಿತ ಘಟಕವು ನಿರ್ಮಾಣ ಸಲಕರಣೆಗಳ ಉದ್ಯಮಕ್ಕೆ ಅಗತ್ಯವಿರುವ ಹೈಡ್ರಾಲಿಕ್‌ ಪಂಪ್‌, ಸ್ವಿಂಗ್‌ ಮೋಟಾರ್‌ ಹಾಗೂ ಸಂಬಂಧಿತ ಬಿಡಿಭಾಗ ತಯಾರಿಸಲಿದೆ. ಹೂಡಿಕೆ ಪೈಕಿ ಮೊದಲ ಹಂತದಲ್ಲಿ ₹200-400 ಕೋಟಿ ಮತ್ತು 2ನೇ ಹಂತದಲ್ಲಿ ₹400-800 ಕೋಟಿ ಹೂಡಿಕೆಯಾಗಲಿದ್ದು, 600 ಉನ್ನತ ಮಟ್ಟದ ಉತ್ಪಾದನಾ ಉದ್ಯೋಗ ಸೃಷ್ಟಿಯಾಗಲಿವೆ.

ಕರ್ನಾಟಕ ಜಪಾನ್‌ ಹೂಡಿಕೆದಾರರ ನೆಚ್ಚಿನ ತಾಣ:

2016ರಿಂದೀಚೆಗೆ 101 ಜಪಾನೀಸ್ ಗ್ರೀನ್ಫೀಲ್ಡ್ ಯೋಜನೆಗಳು ಮತ್ತು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 525ಕ್ಕೂ ಹೆಚ್ಚು ಜಪಾನೀಸ್ ಸಂಸ್ಥೆಗಳೊಂದಿಗೆ, ಕರ್ನಾಟಕವು ಜಪಾನ್ ಹೂಡಿಕೆದಾರರ ನೆಚ್ಚಿನ ತಾಣವಾಗಿ ಮುಂದುವರಿದಿದೆ. ಈ ಯೋಜನೆ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರ ಭೂಮಿ ಹಂಚಿಕೆ, ಅನುಮೋದನೆಗಳು, ನಿರಾಕ್ಷೇಪಣಾ ಪತ್ರಗಳು (ಕ್ಲಿಯರೆನ್ಸ್) ಮತ್ತು ಅನ್ವಯವಾಗುವ ಪ್ರೋತ್ಸಾಹಕಗಳನ್ನು ಒದಗಿಸಲಿದೆ.

2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ- ''''ಇನ್ವೆಸ್ಟ್ ಕರ್ನಾಟಕ 2027'''' (ಹೂಡಿಕೆದಾರರ ಸಮಾವೇಶ) ದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿಗಳು ಮತ್ತು ಕೈಗಾರಿಕಾ ಸಚಿವರು ಕವಾಸಕಿ ಸಂಸ್ಥೆ ನಾಯಕತ್ವಕ್ಕೆ ಆಹ್ವಾನ ನೀಡಿದರು.

ವಿದೇಶಾಂಗ ವ್ಯವಹಾರಗಳ ಸಚಿವರ ಜತೆ ಸಿಎಂ ಸಭೆ:

ಡಿ.ಕೆ.ಶಿವಕುಮಾರ್ ಅವರು ಟೋಕಿಯೊದಲ್ಲಿ ಜಪಾನ್‌ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಯಸುತಾಕಾ ನಕಸೋನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ​ಜಪಾನ್ ಮತ್ತು ಕರ್ನಾಟಕದ ನಡುವಿನ ಆರ್ಥಿಕ ಸಹಕಾರ ಹಾಗೂ ದ್ವಿಪಕ್ಷೀಯ ಸಹಭಾಗಿತ್ವ ಬಲಪಡಿಸುವ ಅಗತ್ಯದ ಬಗ್ಗೆ ಹೇಳಿದರು. ಅಲ್ಲದೆ ​ಕರ್ನಾಟಕ‌ದಲ್ಲಿ ಜಪಾನ್ ಹೂಡಿಕೆಗಳನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ ಎಂದು ಒತ್ತಿ ಹೇಳಿದರು.

ಇದೇ ವೇಳೆ ಮುಂದಿನ ತಿಂಗಳು ನಡೆಯುವ ''''ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ 2027''''ರಲ್ಲಿ ''''ಜಪಾನ್ ಕಂಟ್ರಿ ಪೆವಿಲಿಯನ್'''' ಜತೆ ಭಾಗವಹಿಸುವಂತೆ ಜಪಾನ್ ಸರ್ಕಾರದ ಉನ್ನತ ಮಟ್ಟದ ನಿಯೋಗವನ್ನು ಶಿವಕುಮಾರ್‌ ಆಹ್ವಾನಿಸಿದರು.

ಇದೇ ವೇಳೆ ಜೆಎಫ್‌ಇ ಎಂಜಿನಿಯರಿಂಗ್ ಕಾರ್ಪೊರೇಷನ್ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ನೇತೃತ್ವದ ನಿಯೋಗ ಭೇಟಿ ಮಾಡಿ ತ್ಯಾಜ್ಯ ನಿರ್ವಹಣೆ ಹಾಗೂ ನಗರ ಮೂಲಸೌಕರ್ಯ ಕ್ಷೇತ್ರದಲ್ಲಿ ಸಹಯೋಗ ಕುರಿತು ಚರ್ಚೆ ನಡೆಸಿದರು. ರಾಜ್ಯದ ಪ್ರಮುಖ ನಗರಗಳಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಕುರಿತು ಸರ್ಕಾರದ ಆಸಕ್ತಿ ಬಗ್ಗೆ ವಿವರಿಸಿದರು.ಪ್ಯಾನಾಸೋನಿಕ್‌ ಕಂಪೆನಿ ಅಧ್ಯಕ್ಷರೊಂದಿಗೆ ಚರ್ಚೆ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಎಂ.ಬಿ.ಪಾಟೀಲ್‌ ಅವರು ಜಪಾನ್‌ನಲ್ಲಿ ಪ್ಯಾನಾಸೋನಿಕ್ ಆಟೋಮೋಟಿವ್ ಸಂಸ್ಥೆ ಅಧ್ಯಕ್ಷ ಮತ್ತು ಸಿಇಒ ನಾಗಯಾಸು ಅವರ ನೇತೃತ್ವದ ಆಡಳಿತ ಮಂಡಳಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕರ್ನಾಟಕದಲ್ಲಿ ತನ್ನ ಕಾರ್ಯಚಟುವಟಿಕೆ ವಿಸ್ತರಿಸುವ ಹಾಗೂ ಹೊಸ ಹೂಡಿಕೆ ಮಾಡುವ ಸಾಧ್ಯತೆಗಳ ಕುರಿತು ಚರ್ಚಿಸಿ, ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲ ಸಹಕಾರ ನೀಡುವ ಭರವಸೆ ನೀಡಿದರು. ಜತೆಗೆ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನಿಸಿದರು.ಟೋಕಿಯೊ ಮಿಡ್ಟೌನ್ ರೊಪ್ಪೊಂಗಿಗೆ ಭೇಟಿ:

ರಕ್ಷಣಾ ಇಲಾಖೆ ಭೂಮಿಯಲ್ಲಿ ಅಭಿವೃದ್ಧಿ ಹೊಂದಿದ ಚೈತನ್ಯಶೀಲ ನಗರವಾದ ಟೋಕಿಯೋ ಮಿಡ್ಟೌನ್‌ ರೊಪ್ಪೊಂಗಿಗೆ ಶಿವಕುಮಾರ್ ನೇತೃತ್ವದ ನಿಯೋಗ ಭೇಟಿ ನೀಡಿತು. ಇದೇ ವೇಳೆ ಯೋಜನೆಯ ಮಾಸ್ಟರ್ ಪ್ಲಾನಿಂಗ್‌ನಲ್ಲಿ ನಿಕಟವಾಗಿ ಕೆಲಸ ಮಾಡಿದ್ದ ನಿಕ್ಕೆನ್ ಸೆಕ್ಕಿ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಾಗತಿಕ ವ್ಯವಹಾರ ವಿಭಾಗದ ಮುಖ್ಯಸ್ಥರಾದ ವಟಾರು ತನಕಾ ಅವರೊಂದಿಗೆ ನಿಯೋಗ ಸಂವಾದ ನಡೆಸಿತು. ವಿಶ್ವದರ್ಜೆಯ ನಗರ ಮೂಲಸೌಕರ್ಯ, ಎಲ್ಲಾ ರೀತಿಯ ಮೂಲಸೌಕರ್ಯ ಅಭಿವೃದ್ಧಿ ಅಧ್ಯಯನ ನಡೆಸಿ ಬೆಂಗಳೂರಿನಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.