ಕಾಯಾ, ವಾಚಾ, ಶುದ್ಧ ಮನಸ್ಸಿನಿಂದ ಸಾಧನೆ ಸಾಧ್ಯ: ಡಾ.ನಿರುಪಾಧೀಶ ಶ್ರೀ

| Published : Nov 24 2024, 01:50 AM IST

ಸಾರಾಂಶ

ಮುಧೋಳ ದಾನಮ್ಮದೇವಿ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಮುಧೋಳ

ಪ್ರತಿಯೋಬ್ಬರೂ ತಮ್ಮ ಆಸಕ್ತಿ ಕ್ಷೇತ್ರ ಆಯ್ಕೆಮಾಡಿಕೊಂಡು ಕಾಯಾ, ವಾಚಾ, ಮನಸ್ಸಿನಿಂದ ಪರಿಶುದ್ಧರಾಗಿ ಪ್ರಯತ್ನಿಸಿದಾಗ ಯಶಸ್ಸು ಶತಸಿದ್ಧವೆಂದು ಆಧುನಿಕ ವಚನಕಾರರು, ಷಟ್ಪದಿ ಹರಿಕಾರ ಮರೇಗುದ್ದಿ ಶ್ರೀ ಅಡವಿಸಿದ್ಧೇಶ್ವರ ಮಠದ ಡಾ.ನಿರುಪಾಧೀಶ ಮಹಾಸ್ವಾಮೀಜಿ ಹೇಳಿದರು.

ನಗರದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಎಲ್ಲ ಸಾಧನೆ ಮಾಡಲಾರರು, ಸಾಧನೆ ಮಾಡುವವರಿಗೆ ವಿವೇಚನೆ, ವೈಚಾರಿಕತೆ, ತಾತ್ವಿಕತೆಯಿರಬೇಕು. ಸಾಧಿಸಿದ ಸಾಧನೆ ಪ್ರಸಾದದಂತೆ ಪರಿಶುದ್ಧವಾಗಿರಬೇಕು. ಸಾಧನೆ ಸಾರ್ಥಕವಾಗಬೇಕಾದರೆ ಸಂಸ್ಕೃತಿ, ಸಂಸ್ಕಾರದ ಲೇಪನವಾಗಬೇಕು ಎಂದರು. ಅತಿಯಾದ ಸಮೂಹ ಮಾಧ್ಯಮಗಳ ಬಳಕೆ ಮೂಲಕ ನಿಮ್ಮ ಸಾಧನೆಯಿಂದ ವಿಚಲಿತರಾಗದೆ ಅಂದುಕೊಂಡ ಗುರಿಯಲ್ಲಿ ಯಶಸ್ವಿಯಾಗಿರಿ ಎಂದರು.

ರನ್ನ ವಾಹಿನಿ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಪಮ್ಮಾರ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ, ನಮ್ಮ ಕಲೆ ಹಾಗೂ ಸಂಸ್ಕೃತಿ ಮರೆಯದೆ ಉಳಿಸಿ ಬೆಳೆಸಿರಿ. ಸಾಧನೆ ಯಾವುದೋ ಒಂದು ಹಂತಕ್ಕೆ ಕೊನೆಗೊಳ್ಳದೆ ಅದು ನಿರಂತರವಾಗಿದ್ದಾಗ ಮಾತ್ರ ಕಲ್ಪಿಸಲಾಗದ ಸಾಧನೆ ಗರಿ ಮುಡಿಯಲು ಸಾಧ್ಯ ಎಂದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಎಮ್.ಎಮ್.ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ಕೇವಲ ಪಠ್ಯ ವಿಷಯಗಳ ಕಡೆಗಷ್ಟೇ ಗಮನಹರಿಸದೆ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯವು ಆಯೋಜನೆ ಮಾಡುವ ಯುವ ಜನೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ತಾವು ಬಹುಮಾನ ಪಡೆದುಕೊಂಡು ಮಹಾವಿದ್ಯಾಲಯಕ್ಕೆ ಕೀರ್ತಿ ತರಬೇಕೆಂದು ವಿದ್ಯಾರ್ಥಿನಿಯರಿಗೆ ಕರೆ ಕೊಟ್ಟರು. ರಾಜ್ಯೋತ್ಸವದ ಅಂಗವಾಗಿ ಡೊಳ್ಳು ವಾದ್ಯ, ಕುಂಭಮೇಳ ಹಾಗೂ ಆರತಿಯೊಂದಿಗೆ ತಾಯಿ ಭುವನೇಶ್ವರಿ ಭಾವಚಿತ್ರ ಸಾಂಸ್ಕೃತಿಕ ಮೆರವಣಿಗೆಯು ಅತೀ ವಿಜೃಂಭಣೆಯಿಂದ ಜರುಗಿತು. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಪ್ರೊ.ಎನ್.ಎನ್.ಬಾರಕೇರ ಸ್ವಾಗತಿಸಿ, ಪ್ರೊ.ಎ.ಎನ್.ಬಾಗೇವಾಡಿ ಪರಿಚಯಿಸಿ, ಪ್ರೊ.ಮಲ್ಲಿಕಾರ್ಜುನ ಎಮ್ ನಿರೂಪಿಸಿ, ಪ್ರೊ.ಕೆ.ಎಲ್.ಗುಡಿಮನಿ ವಂದಿಸಿದರು. ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಇರಿದ್ದರು.