ಸಾರಾಂಶ
ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸ್ವಚ್ಚತಾ ಹಿ ಸೇವಾ ಅಭಿಯಾನಕ್ಕೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಜೆ.ಡಿ. ವೆಂಕಟೇಶ್ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಸಾರ್ವಜನಿಕ ಆಸ್ಪತ್ರೆ, ನಗರಸಭೆಯ ಸಹಯೋಗದೊಂದಿಗೆ ಸ್ವಚ್ಚತಾ ಹಿ ಸೇವಾ ಅಭಿಯಾನಕ್ಕೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಜೆ.ಡಿ. ವೆಂಕಟೇಶ್ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಚ್ಛತೆ ಇಲ್ಲದೆ ಯಾವುದೇ ಕೆಲಸ ಪರಿಪೂರ್ಣವಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯವಂತನಾಗಿದ್ದರೆ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ. ನಮ್ಮ ಆರೋಗ್ಯ ಗಟ್ಟಿಯಾಗಿ ಇರಬೇಕಾದರೆ ನಮ್ಮ ಸುತ್ತಮುತ್ತಲ ವಾತಾವರಣ ಸ್ವಚ್ಛವಾಗಿರ ಬೇಕಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಸ್ವಚ್ಛತಾ ಹೀ ಸೇವಾ ಅಭಿಯಾನದ ಮೂಲಕ ಸಮಾಜದ ಎಲ್ಲರಿಗೂ ಆರೋಗ್ಯವನ್ನು ತಂದುಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಿದೆ. ಎಲ್ಲರೂ ಈ ಕಾರ್ಯದಲ್ಲಿ ಪಾಲ್ಗೊಂಡು ಸ್ವಚ್ಛತೆಯ ನಾಡನ್ನು ನಿರ್ಮಿಸಲು ಕೈಜೋಡಿಸಿ ಎಂದು ಕರೆ ನೀಡಿದರು.ಬಾಪೂಜಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಓ. ಬಾಬುಕುಮಾರ್ ಮಾತನಾಡಿ, ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಬಾಪೂಜಿ ವಿದ್ಯಾಸಂಸ್ಥೆಯೂ ಸಹ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಿದೆ. ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ವಿದ್ಯಾರ್ಥಿಗಳು ಇಂದಿನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನಿರಂತರವಾಗಿ ಸ್ವಚ್ಛತೆಯ ಸಂರಕ್ಷಣೆಗೆ ಶ್ರಮವಹಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಅಧಿಕಾರಿ ಜೆ. ತಿಪ್ಪೇಸ್ವಾಮಿ, ಪ್ರಾಧ್ಯಾಪಕ ಕರಿಯಣ್ಣ, ಉಮೇಶ್, ನಂದಿನಿ, ಮುಜೀಬುಲ್ಲಾ, ನೈರ್ಮಲ್ಯ ಇಂಜಿನಿಯರ್ ನರೇಂದ್ರ ಬಾಬು, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಬಿ. ತಿಪ್ಪೇಸ್ವಾಮಿ, ಮ್ಯಾಟ್ರನ್ ಮಂಜುಳಾ, ಆರೋಗ್ಯ ನಿರೀಕ್ಷಕರಾದ ಗಣೇಶ್, ಗೀತಾಕುಮಾರಿ, ಸುನೀಲ್, ರುದ್ರಮುನಿ ಮುಂತಾದವರು ಉಪಸ್ಥಿತರಿದ್ದರು.