ಸಾರಾಂಶ
ಹೂವಿನಹಡಗಲಿ: ಸತ್ಯ, ಶುದ್ಧ ಕಾಯಕ ಮಾಡುವುದು, ಕಾಯಕದಿಂದ ಗಳಿಸಿದ ಸಂಪತ್ತನ್ನು ದಾಸೋಹದ ಮೂಲಕ ಸಮಾಜಕ್ಕೆ ವಿನಿಯೋಗಿಸುವುದು ಶರಣ ಧರ್ಮದ ಜೀವಾಳವಾಗಿದೆ. ಇವುಗಳ ಮೂಲಕವೇ ಶರಣರು ಸ್ವಾವಲಂಬಿ, ಸಮ ಸಮಾಜದ ನಿರ್ಮಾಣಕ್ಕೆ ಕಾರಣರಾದರು ಎಂದು ಎಸ್ಆರ್ ಎಂಪಿಪಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಸತೀಶ್ ಪಾಟೀಲ್ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಪಟ್ಟಣದ ಸೊಪ್ಪಿನ ಕಾಳಮ್ಮನವರ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ಐಗೋಳ್ ಬಸವರಾಜಪ್ಪ ಸ್ಮಾರಕ ದತ್ತಿ, ಟಿ.ಎಂ. ವೀರಮ್ಮ ಶಿವಶಂಕರಯ್ಯ ದತ್ತಿ, ಕನ್ನಿಹಳ್ಳಿ ಗಂಗಮ್ಮ ಪರಮೇಶ್ವರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಯಕ ಮತ್ತು ದಾಸೋಹ ವಿಷಯ ಕುರಿತು ಮಾತನಾಡಿದರು.ವಿಭೂತಿ, ರುದ್ರಾಕ್ಷಿ ಧಾರಣೆ ನಿತ್ಯ ಲಿಂಗಪೂಜೆ ಮಾಡುವುದರಿಂದಲೇ ಧರ್ಮ ಪಾಲನೆಯಾಗುವುದಿಲ್ಲ. ಸತ್ಯ, ಶುದ್ಧ ಕಾಯಕದಲ್ಲಿ ನಿರತರಾದಾಗ ಮಾತ್ರ ಅದು ಪೂಜೆಗಿಂತಲೂ ಮಿಗಿಲು ಎಂಬುದನ್ನು ವಿವರಿಸಿದರು.
ಪದವಿಪೂರ್ವ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಎ. ಕೊಟ್ರಗೌಡ ಮಾತನಾಡಿ, ಎಲ್ಲರೂ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.ಕಲಾವಿದ ಪ್ರಕಾಶ್ ಜೈನ್ ಬೀಳಗಿಯ ಸಿದ್ದಪ್ಪ ಬಿದರಳ್ಳಿ ಅವರ ಅರ್ಥಪೂರ್ಣ, ಒಗಟಿನ ಕವನಗಳನ್ನು ವಾಚಿಸಿ, ಕನ್ನಡ ಗೀತೆಗಳ ಗಾಯನ ಮಾಡಿದರು.
ಉಪಪ್ರಾಚಾರ್ಯ ಕೆ.ಎನ್. ಚಂದ್ರಗೌಡ ಮಾತನಾಡಿ, ಕಸಾಪ ಇಂಥ ಉಪಯುಕ್ತ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಆಯೋಜಿಸಿ ನಮ್ಮ ವಿದ್ಯಾರ್ಥಿಗಳ ವಿಚಾರಶಕ್ತಿಯನ್ನು ಉದ್ದೀಪಿಸಿದೆ ಎಂದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವರಚಿತ ಕವನ ವಾಚಿಸಿದರು. ಸಮಾರಂಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ತೋ.ಮ. ಶಂಕ್ರಯ್ಯ, ಕೋಶಾಧ್ಯಕ್ಷ ಡಾ. ಕೆ. ಸತೀಶ್, ದತ್ತಿದಾನಿಗಳಾದ ಐಗೋಳ್ ಸುಭಾಷ್, ಕನ್ನಿಹಳ್ಳಿ ಪರಮೇಶ್ವರಪ್ಪ, ಪ್ರೌಢಶಾಲೆಯ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಕಸಾಪ ತಾಲೂಕು ಘಟಕದ ಅಧ್ಯಕ್ಷರಾದ ಟಿ. ವೀರೇಂದ್ರ ಪಾಟೀಲ್ ವಹಿಸಿದ್ದರು. ಸಂಗೀತ ಶಿಕ್ಷಕ ಮೌಲಾಸಾಬ್ ಪ್ರಾರ್ಥಿಸಿದರು. ಶಿಕ್ಷಕ ಗಡ್ಡಿ ಶಿವಕುಮಾರ್ ಸ್ವಾಗತಿಸಿದರು. ಶಿಕ್ಷಕ ಎಂ. ರಾಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಎ.ಎಂ. ಚನ್ನವೀರಸ್ವಾಮಿ ವಂದಿಸಿದರು. ಶಿಕ್ಷಕ ಎಚ್.ಎಂ. ಶಿವಮೂರ್ತೆಯ್ಯ ನಿರ್ವಹಿಸಿದರು.