ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಜನತೆ ಮನಸ್ಸು ಮಾಡಿದರೆ ಸರ್ಕಾರದ ನೆರವಿಗೆ ಕಾಯದೆ ಯಾವ ಕಾರ್ಯವನ್ನು ಬೇಕಾದರೂ ಸಾಧಿಸಬಲ್ಲರು ಎಂಬುದಕ್ಕೆ ಕಸಬಾ ಹೋಬಳಿ ಹಾಲಗಾನಹಳ್ಳಿ ಗ್ರಾಮಸ್ಥರು ಉದಾಹರಣೆಯಾಗಿದ್ದಾರೆ.ಕಸಬಾ ಹೋಬಳಿ ಹಾಲಗಾನಹಳ್ಳಿ ಗ್ರಾಮದ ಕೆರೆಗೆ ಈ ಹಿಂದೆ ಕಾಲುವೆ ಮೂಲಕ ಉತ್ತರ ಪಿನಾಕಿನಿ ನದಿ ಹರಿಯುತ್ತಿತ್ತು. ಇದರಿಂದಾಗಿ ಕೆರೆ ತುಂಬಿರುತ್ತಿತ್ತು. ಆದರೆ ಕಾಲುವೆಯಲ್ಲಿ ಕಸ ಹಾಗೂ ಹೂಳು ತುಂಬಿದ್ದರಿಂದ ನೀರು ಹರಿಯಲು ಅಡ್ಡಿಯಾಗಿತ್ತು. ಇದರಿಂದಾಗಿ ಗ್ರಾಮಸ್ಥರು ಹಾಗೂ ರೈತರು ತೊಂದರೆಗೆ ಒಳಗಾಗಿದ್ದರು.
ಕೆರೆ ಕಾಲುವೆ ಸ್ವಚ್ಛತಾ ಕಾರ್ಯಕೆರೆ ಕಾಲುವೆ ಸ್ವಚ್ಛತಾ ಕಾರ್ಯಕ್ಕೆ ಸರ್ಕಾರದ ಅನುದಾನ ಕಾಯುತ್ತಾ ಕುಳಿತರೆ ಕೆರೆಗೆ ನೀರು ಹರಿಯುವುದಿಲ್ಲ ಎಂದು ನಿರ್ಧರಿಸಿದ ಗ್ರಾಮಸ್ಥರು ಸರ್ಕಾರದ ಯಾವುದೇ ಅನುದಾನಕ್ಕೆ ಕಾಯದೆ ಗ್ರಾಮದ ಕೆರೆಗೆ ಕಾಯಕಲ್ಪ ಕಲ್ಪಿಸಲು ತಾವೇ ಸ್ವತಹ ಕಾಲುವೆ ಸ್ವಚ್ಛಗೊಳಿಸಲು ಕಾರ್ಯಕ್ರಮ ರೂಪಿಸಿದ್ದಾರೆ. ಇದಕ್ಕಾಗಿ ಗ್ರಾಮಸ್ಥರು, ರೈತರು ತಾವೇ ಹಣ ಸಂಗ್ರಹಿಸಿ ಹಿಟಾಚಿ ಹಾಗೂ ಜೆಸಿಬಿ ವಾಹನಗಳನ್ನು ಬಳಸಿ ಹಾಲಗಾನಹಳ್ಳಿಯಿಂದ ಚಿಕ್ಕಕುರುಗೋಡು ಗ್ರಾಮದವರೆಗೆ ಸುಮಾರು 6 ಕಿ.ಮೀ ದೂರದ ಕಾಲುವೆಯಲ್ಲಿ ಹೂಳು ಮತ್ತು ಕಸ ತೆಗೆದಿದ್ದಾರೆ.
ನೀರಾವರಿ ಇಲಾಖೆ ನಿರ್ಲಕ್ಷ್ಯಕಾಲುವೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿರುವುದರಿಂದ ಮುಂದಿನ ಮಳೆಗೆ ಕಾಲುವೆ ಮೂಲಕ ತಮ್ಮ ಗ್ರಾಮದ ಕೆರೆಗೆ ನೀರು ಹರಿಯುವ ನಿರೀಕ್ಷೆಯನ್ನು ಹೊಂದಿದ್ದಾರೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದ್ದ ಕೆರೆಯ ಕಾಲುವೆಯನ್ನು ಗ್ರಾಮಸ್ಥರೇ ಸ್ವಚ್ಛಗೊಳಿಸಿ ಅಧಿಕಾರಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ. ಉತ್ತರ ಪಿನಾಕಿನಿ ನದಿಯಿಂದ ಹಾಲಗಾನಹಳ್ಳಿ ಕೆರೆಗೆ ನೀರು ಹರಿಯುವ ಸಂಪರ್ಕ ಕಾಲುವೆಯನ್ನು ಕಳೆದೆರಡು ವರ್ಷಗಳಿಂದ ದುರಸ್ತಿ ಮಾಡದೆ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ.
ಗ್ರಾಮದ ಮುಖಂಡರಾದ ಹನುಮಂತ ರೆಡ್ಡಿ, ಶಿವಾನಂದಪ್ಪ , ವರದ ರೆಡ್ಡಿ, ಎಚ್.ಎಸ್.ಸೋಮು, ನಾಗರಾಜು, ಮಲ್ಲಿಕಾರ್ಜುನ್ ರೆಡ್ಡಿ , ಮಧುಸೂದನ್ ರೆಡ್ಡಿ, ಶಿವರೆಡ್ಡಿ, ಜಯರಾಮ್ ರೆಡ್ಡಿ, ಅಜಯ್ ಭಾಸ್ಕರ್ ರೆಡ್ಡಿ, ಚೇತನ್ ರೆಡ್ಡಿ, ಶ್ರೀರಾಮ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಚಂದ್ರಶೇಖರ್ ರೆಡ್ಡಿ, ರಂಗನಾಥ್, ಕುಮಾರ ಸ್ವಾಮಿ, ಶ್ರೀನಿವಾಸ್, ನರೇಶ್ ರೆಡ್ಡಿ ಮುಂತಾದವರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.