ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಂದ ಕಲ್ಯಾಣಿಗೆ ಕಾಯಕಲ್ಪ

| Published : Feb 18 2025, 12:33 AM IST

ಸಾರಾಂಶ

ಶಾಸಕ ಪಿ.ರವಿಕುಮಾರ್ ಅವರ ಸಲಹೆ ಮೇರೆಗೆ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ಕಿಳಿದ ವಿದ್ಯಾರ್ಥಿಗಳು, ಸತತ ಮೂರು ದಿನಗಳ ಕಾಲ ಶ್ರಮದಾನ ನಡೆಸಿ ಕಲ್ಯಾಣಿಯೊಳಗೆ ಸುತ್ತ ಬೆಳೆದು ನಿಂತಿದ್ದ ಗಿಡ- ಮರಗಳನ್ನೆಲ್ಲಾ ಸ್ವಚ್ಛಗೊಳಿಸಿ ಅಲ್ಲಿಂದ ತೆರವುಗೊಳಿಸಿದರು. ಗಿಡ- ಮರದ ಎಲೆಗಳನ್ನೆಲ್ಲಾ ಗುಡಿಸಿ ಎತ್ತಿಹಾಕಿದರು

ಕನ್ನಡಪ್ರಭ ವಾರ್ತೆ ಮಂಡ್ಯ

ದಶಕದಿಂದ ಪುನಶ್ಚೇತನ ಕಾಣದೆ ಪಾಳುಬಿದ್ದಿದ್ದ ತಾಲೂಕಿನ ಕೆರಗೋಡು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಕಲ್ಯಾಣಿಗೆ ವಿದ್ಯಾರ್ಥಿಗಳು ಪುನಶ್ಚೇತನ ನೀಡಿದ್ದಾರೆ. ಗ್ರಾಮದಲ್ಲಿ ಒಂದು ವಾರಗಳ ಕಾಲ ನಡೆದ ಎನ್‌ಎಸ್‌ಎಸ್ ಶಿಬಿರದಲ್ಲಿ ಮೂರು ದಿನಗಳ ಕಾಲ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ಹೊಸ ರೂಪ ನೀಡಿದ್ದಾರೆ.

ಮಹಿಳಾ ಸರ್ಕಾರಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಡಿ ಕೆರಗೋಡು ಗ್ರಾಮದಲ್ಲಿ ಶಿಬಿರ ಹಮ್ಮಿಕೊಂಡಿದ್ದ ಸಮಯದಲ್ಲಿ ಶಾಸಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗಳಿಂದ ಶ್ರೀ ಪಂಚಲಿಂಗೇಶ್ವರ ಸ್ವಾಮಿ ದೇವಾಲಯ ಹಾಗೂ ಕಲ್ಯಾಣಿ ಸುತ್ತಮುತ್ತಲ ಪರಿಸರವನ್ನು ಸ್ವಚ್ಛಗೊಳಿಸಿ ಗಿಡ-ಮರಗಳನ್ನು ನೆಟ್ಟು ಸೌಂದರ್ಯವನ್ನು ಹೆಚ್ಚಿಸಿದ್ದಾರೆ.

ಮೂರು ದಿನ ಸ್ವಚ್ಛತಾ ಕಾರ್ಯ:

೨೦೦೯- ೧೦ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಕಲ್ಯಾಣಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ನಿರ್ವಹಣೆ ಕೊರತೆಯಿಂದ ಕೆಲವೇ ವರ್ಷಗಳಲ್ಲಿ ಕಲ್ಯಾಣಿ ಮತ್ತೆ ಹಾಳಾಗಿತ್ತು. ಕಲ್ಯಾಣಿಯೊಳಗೆ ಎಲೆಗಳು ಉದುರಿ, ಗಿಡ- ಮರಗಳು ಬೆಳೆದುಕೊಂಡು ನೀರು ಕೂಡ ಬಳಕೆಗೆ ಯೋಗ್ಯವಿಲ್ಲದಂತಾಗಿತ್ತು. ವಿಷಜಂತುಗಳ ಆವಾಸಸ್ಥಳದಂತೆ ಕಲ್ಯಾಣಿ ಕಂಡುಬರುತ್ತಿತ್ತು.

ಶಾಸಕ ಪಿ.ರವಿಕುಮಾರ್ ಅವರ ಸಲಹೆ ಮೇರೆಗೆ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ಕಿಳಿದ ವಿದ್ಯಾರ್ಥಿಗಳು, ಸತತ ಮೂರು ದಿನಗಳ ಕಾಲ ಶ್ರಮದಾನ ನಡೆಸಿ ಕಲ್ಯಾಣಿಯೊಳಗೆ ಸುತ್ತ ಬೆಳೆದು ನಿಂತಿದ್ದ ಗಿಡ- ಮರಗಳನ್ನೆಲ್ಲಾ ಸ್ವಚ್ಛಗೊಳಿಸಿ ಅಲ್ಲಿಂದ ತೆರವುಗೊಳಿಸಿದರು. ಗಿಡ- ಮರದ ಎಲೆಗಳನ್ನೆಲ್ಲಾ ಗುಡಿಸಿ ಎತ್ತಿಹಾಕಿದರು. ಅಶುಚಿತ್ವದಿಂದ ಕೂಡಿದ್ದ ನೀರನ್ನು ಹೊರಕ್ಕೆ ಹಾಕಿದರು. ಈ ಕಾರ್ಯಕ್ಕೆ ಗ್ರಾಮಸ್ಥರೂ ಸಹಕಾರಿಯಾಗಿ ನಿಂತರು. ಪಂಚಾಯಿತಿಯವರು ಕಲ್ಯಾಣಿ ಒಳಭಾಗದ ಒಂದು ಹಂತದ ಮೆಟ್ಟಿಲುಗಳಿಗೆ ಬಣ್ಣ ಹೊಡೆಸಿ ಕಲ್ಯಾಣಿಯ ಅಂದವನ್ನು ಹೆಚ್ಚಿಸಿದರು.

ದೇವಾಲಯದ ಸುತ್ತ ಹಸಿರ ಸಿರಿ:

ಆನಂತರ ಶ್ರೀ ಪಂಚಲಿಂಗೇಶ್ವರ ಸ್ವಾಮಿ ದೇವಾಲಯದ ಆವರಣವನ್ನೂ ಸ್ವಚ್ಛಗೊಳಿಸಿದ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ದೇವಸ್ಥಾನದ ಸುತ್ತ ಇದ್ದ ಖಾಲಿ ಜಾಗದಲ್ಲಿ ಗಿಡ- ಮರಗಳನ್ನು ನೆಟ್ಟರು. ವಿದ್ಯಾರ್ಥಿಗಳ ಶ್ರಮದಾನದಿಂದ ಇಡೀ ದೇವಾಲಯದ ಆವರಣ ಹಾಗೂ ಕಲ್ಯಾಣಿ ಹೊಸ ರೂಪ ಪಡೆದುಕೊಂಡವು.

ಈ ಕಲ್ಯಾಣಿ ಶ್ರೀ ಪಂಚಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಸೇರಿದ್ದಾಗಿದೆ. ಕಲ್ಯಾಣಿಗೆ ಕೆರೆಯಿಂದ ನೀರು ಹರಿದುಬರುವಂತೆ ವ್ಯವಸ್ಥೆ ಮಾಡಲಾಗಿದೆ. ಕೆರೆ ತುಂಬಿದಾಗಲೆಲ್ಲಾ ಕಲ್ಯಾಣಿಯೂ ತುಂಬಿರುತ್ತದೆ. ಸದಾಕಾಲ ಕಲ್ಯಾಣಿಯೊಳಗೆ ನೀರು ಇದ್ದಂತೆಯೇ ಇರುತ್ತದೆ. ಕಲ್ಯಾಣಿ ದೇವಾಲಯಕ್ಕೆ ಸೇರಿದ್ದರೂ ಇದರಲ್ಲಿರುವ ನೀರನ್ನು ದೇವರ ಅಭಿಷೇಕ ಸೇರಿದಂತೆ ಇತರೆ ಯಾವುದಕ್ಕೂ ಬಳಸುವುದಿಲ್ಲ.

ನಿರ್ವಹಣೆಗೆ ಇಚ್ಛಾಶಕ್ತಿ ಅವಶ್ಯ:

ಶ್ರೀ ಪಂಚಲಿಂಗೇಶ್ವರ ಸ್ವಾಮಿ ದೇವಾಲಯದ ಕಲ್ಯಾಣಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡು ಹೋಗುವಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರಲ್ಲಿ ಇಚ್ಛಾಶಕ್ತಿಯ ಕೊರತೆ ಕಂಡುಬರುತ್ತಿದೆ. ೨೦೦೯- ೧೦ರಲ್ಲೇ ನರೇಗಾ ಯೋಜನೆಯಡಿ ಕಲ್ಯಾಣಿ ಪುನಶ್ಚೇತನಗೊಳಿಸಿದ್ದರೂ ನಿರ್ವಹಣೆಯಿಲ್ಲದೆ ಕೆಲವೇ ವರ್ಷಗಳಲ್ಲಿ ಹಾಳಾಗಿತ್ತು. ಈಗ ಮಹಿಳಾ ಸರ್ಕಾರಿ ಕಾಲೇಜಿನ ಎನ್‌ಎಸ್ಎಸ್ ತಂಡದವರಿಂದ ಕಲ್ಯಾಣಿಗೆ ಕಾಯಕಲ್ಪ ನೀಡಲಾಗಿದೆ. ಈಗಲೂ ಸರಿಯಾದ ನಿರ್ವಹಣೆ ಮಾಡದಿದ್ದರೆ ಕಲ್ಯಾಣಿ ಮತ್ತೆ ಪಾಳು ಬೀಳುವುದು ನಿಶ್ಚಿತ. ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮಸ್ಥರು ಮತ್ತೆ ಅವಕಾಶ ನೀಡಬಾರದು. ಕಲ್ಯಾಣಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಹೋಗುವ ಮನಸ್ಥಿತಿಯನ್ನು ಎಲ್ಲರೂ ಪ್ರದರ್ಶಿಸಿದಾಗ ಇಂತಹ ಶ್ರಮದಾನಗಳು ಸಾರ್ಥಕತೆಯನ್ನು ಪಡೆದುಕೊಳ್ಳುತ್ತವೆ.

---------------------------

ಪಂಚಾಯಿತಿಯಿಂದ ಹದಿನೈದು ವರ್ಷಗಳ ಹಿಂದೆ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಲಾಗಿತ್ತು. ಈಗ ವಿದ್ಯಾರ್ಥಿಗಳಿಂದ ಶ್ರಮದಾನ ನಡೆಸಿ ಸ್ವಚ್ಛಗೊಳಿಸಲಾಗಿದೆ. ಮುಂದೆ ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮಸ್ಥರಿಗೆ ಸ್ವಚ್ಛತೆ ಕಾಯ್ದುಕೊಳ್ಳುವಂತೆ ತಿಳಿಸಿದ್ದೇವೆ. ಶಾಸಕರೂ ಕಲ್ಯಾಣಿ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ.

- ವೈ.ಎಸ್.ವಿನಯ್‌ಕುಮಾರ್, ಪಿಡಿಒ, ಕೆರಗೋಡು ಗ್ರಾಪಂ

----------------------------

ಮುಂದಿನ ತಿಂಗಳು ಶ್ರೀ ಪಂಚಲಿಂಗೇಶ್ವರ ಸ್ವಾಮಿ ಉತ್ಸವ ನಡೆಯಲಿರುವುದರಿಂದ ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಗಿದೆ. ದಶಕದಿಂದ ಪಾಳು ಬಿದ್ದಿದ್ದ ಕಲ್ಯಾಣಿಗೆ ವಿದ್ಯಾರ್ಥಿಗಳು ಶ್ರಮದಾನ ನಡೆಸಿ ಹೊಸ ರೂಪ ನೀಡಿದ್ದಾರೆ. ಕಲ್ಯಾಣಿ ಹಾಳಾಗದಂತೆ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ನಿರ್ವಹಣೆಯಲ್ಲಾಗಿರುವ ಲೋಪವನ್ನು ಸರಿಪಡಿಸಿಕೊಳ್ಳಬೇಕಿದೆ.

- ನವೀನ್‌ಕುಮಾರ್, ಅಧ್ಯಕ್ಷರು, ಕೆರಗೋಡು ಗ್ರಾಪಂ