ಕಾಯಕಯೋಗಿ ಶಿವಲಿಂಗೇಶ್ವರ ಶ್ರೀ ಲಿಂಗೈಕ್ಯ

| Published : Nov 18 2024, 12:05 AM IST

ಸಾರಾಂಶ

ಹುಬ್ಬಳ್ಳಿ ತಾಲೂಕಿನ ಮಂಟೂರು ಅಡವಿ ಸಿದ್ಧೇಶ್ವರ ಮಠ ಪೀಠಾಧಿಪತಿಗಳಾಗಿದ್ದ ಶಿವಲಿಂಗೇಶ್ವರ ಶ್ರೀಗಳು (82) ಭಾನುವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.

ಹುಬ್ಬಳ್ಳಿ: ತಾಲೂಕಿನ ಮಂಟೂರು ಅಡವಿ ಸಿದ್ಧೇಶ್ವರ ಮಠ ಹಾಗೂ ಶಿವಮೊಗ್ಗ ಜಿಲ್ಲೆ ಬಳ್ಳಿಗಾವಿ ಶ್ರೀ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠದ ಪೀಠಾಧಿಪತಿಗಳಾಗಿದ್ದ ಶಿವಲಿಂಗೇಶ್ವರ ಶ್ರೀಗಳು (82) ಭಾನುವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.

ಹೃದಯಾಘಾತವಾಗಿದ್ದ ಶ್ರೀಗಳನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 11 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿದ್ದ ಶ್ರೀಗಳು ಭಾನುವಾರ ಬೆಳಗಿನ ಜಾವ 1 ಗಂಟೆಗೆ ಕೊನೆಯುಸಿರು ಎಳೆದಿದ್ದಾರೆ.

ತಾಲೂಕಿನ ಮಂಟೂರು ಹಾಗೂ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಅಡವಿ ಸಿದ್ಧೇಶ್ವರ ಮಠ, ಹುಬ್ಬಳ್ಳಿ ಹರುಷದೇವರ ಮಠ, ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗೆರಕೊಪ್ಪ- ಬೊಪ್ಪಗೊಂಡನಕೊಪ್ಪ ಇಂದುಧರೇಶ್ವರ ಮಠ, ಶಿಕಾರಿಪುರ ತಾಲೂಕು ಬೆಳ್ಳಿಗಾವಿಯ ಶ್ರೀ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠ ಹಾಗೂ ಬೀದರ ಜಿಲ್ಲೆ ಬಸವಕಲ್ಯಾಣ ಕೆಳಗಿ ಪೀಠದ ಪೀಠಾಧಿಪತಿಗಳಾಗಿದ್ದರು.

ತಾಲೂಕಿನ ಮಂಟೂರು ಗ್ರಾಮದ ಗುರುಪಾದಮ್ಮ ಶಿವಜೋಗಯ್ಯನವರ ಮಗನಾಗಿ 1943 ಜುಲೈ 2ರಂದು ಜನಿಸಿದ್ದ ಶ್ರೀಗಳು ತಮ್ಮ‌ ವಿದ್ಯಾಭ್ಯಾಸವನ್ನು ಮಂಟೂರಿನಲ್ಲಿ ಪೂರ್ಣಗೊಳಿಸಿದ್ದರು. ಶಿವಯೋಗ ಮಂದಿರದಲ್ಲಿ ಅಧ್ಯಯನ ಹಾಗೂ ವಾರಾಣಸಿಯಲ್ಲಿ ತಮ್ಮ ಎಂಎ ಸಂಸ್ಕೃತ ಅಧ್ಯಯನ ಮಾಡಿದ್ದರು. ಮಂಟೂರಿನಲ್ಲಿ ಶಿವಲಿಂಗೇಶ್ವರ ಪ್ರೌಢಶಾಲೆ ಸ್ಥಾಪಿಸಿ‌ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಅಡವಿ ಸಿದ್ಧೇಶ್ವರ ಮಠವನ್ನು ಭಕ್ತರ ದೇಣಿಗೆ ಹಾಗೂ ಅವಿರತ ಶ್ರಮದಿಂದ ಅಭಿವೃದ್ಧಿ ಪಡಿಸಿದ್ದಾರೆ.

ಅಡವಿ ಸಿದ್ದೇಶ್ವರ ಮಠದಲ್ಲಿ ಲೀನ

ತಾಲೂಕಿನ ಮಂಟೂರು ಗ್ರಾಮದ‌ ಅಡವಿ ಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಲಿಂಗೇಶ್ವರ ಶ್ರೀಗಳು ಭಾನುವಾರ ಸಂಜೆ ಅಡವಿ ಸಿದ್ಧೇಶ್ವರ ಕರ್ತೃ ಗದ್ದುಗೆ ಪಕ್ಕದ ಕ್ರಿಯಾ ಸಮಾಧಿಯಲ್ಲಿ ಲೀನವಾದರು. ರಾಜ್ಯದ ವಿವಿಧ ಮಠಗಳ ಶ್ರೀಗಳ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ನೆರವೇರಿದವು. ಮಧ್ಯಾಹ್ನ 3 ಗಂಟೆವರೆಗೂ ಶ್ರೀ ಮಠದ ಆವರಣದಲ್ಲಿ ಭಕ್ತರ ದರ್ಶನಕ್ಕೆ ಇಡಲಾಯಿತು. ಜಿಲ್ಲೆ ಹಾಗೂ ನೆರೆಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.

ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಶ್ರೀಗಳು, ಶಿರಹಟ್ಟಿ ಫಕೀರೇಶ್ವರ ಶ್ರೀಗಳು, ಫಕೀರ ದಿಂಗಾಲೇಶ್ವರ ಶ್ರೀಗಳು, ನಿಡಸೋಸಿಯ ಶಿವಲಿಂಗೇಶ್ವರ ಶ್ರೀಗಳು, ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳು, ಹೊಸಳ್ಳಿ ಬೋದೆಸ್ವಾಮಿ ಮಠದ ಶ್ರೀ, ಹರಿಹರದ ಪುಣ್ಯಕೋಟಿ ಮಠದ ಜಗದೀಶ್ವರ ಶ್ರೀ, ಹುಬ್ಬಳ್ಳಿ ಎರಡೆತ್ತಿನ ಮಠದ ಶ್ರೀ, ರುದ್ರಾಕ್ಷಿ‌ಮಠದ ಶ್ರೀ, ಬೊಮ್ಮನಹಳ್ಳಿಯ ಶಿವಯೋಗೇಶ್ವರ ಶ್ರೀ, ನವಲಗುಂದದ ಗವಿಮಠದ ಶ್ರೀ, ತೊಗರಸಿ ಮಠದ ಶ್ರೀ, ಶಿರಾಳಕೊಪ್ಪ ವಿರಕ್ತಮಠದ ಸಿದ್ಧೇಶ್ವರ ಶ್ರೀಗಳು ಸೇರಿದಂತೆ ವಿವಿಧ ಮಠಾಧಿಪತಿಗಳ ನೇತೃತ್ವದಲ್ಲಿ ಭಾನುವಾರ ಸಂಜೆ ಪೂಜಾ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.

ಉತ್ತರಾಧಿಕಾರಿ ಘೋಷಣೆ

ಶಿವಲಿಂಗೇಶ್ವರ ಸ್ವಾಮೀಜಿ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರ ಕೋರಿಕೆ ಮೇರೆಗೆ 2 ದಿನಗಳ ಹಿಂದೆಯೇ, ಇಂದುಧರ ದೇವರ ಅವರನ್ನು ಆಸ್ಪತ್ರೆ ಆವರಣದಲ್ಲಿ ಮಂಟೂರು ಮತ್ತು ಗೇರಕೊಪ್ಪ ಇಂದುಧರೇಶ್ವರ ಮಠ, ಬಳ್ಳಿಗಾವಿಯ ಅಲ್ಲಮಪ್ರಭು ಅನುಭಾವ ಪೀಠದ ಉತ್ತರಾಧಿಕಾರಿಯನ್ನಾಗಿ ಸಾಂಕೇತಿಕವಾಗಿ ಘೋಷಿಸಲಾಗಿತ್ತು.