ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
12ನೇ ಶತಮಾನದಲ್ಲಿದ್ದ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದ ವಚನಕಾರರಲ್ಲಿ ಶಿವಯೋಗಿ ಸಿದ್ಧರಾಮೇಶ್ವರರು ಪ್ರಮುಖರು. ಅವರು ವಚನಗಳ ಮೂಲಕ ನೀಡಿದ ವಿಚಾರಗಳು ಸಾರ್ವಕಾಲಿಕವಾಗಿವೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.ಗುರುವಾರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ 852ನೇ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 12ನೇ ಶತಮಾನ ಮಹಾಶರಣ ಶ್ರೀ ಸಿದ್ಧರಾಮೇಶ್ವರ ಸಮಾಜದ ಒಳಿತಿಗಾಗಿ ಬದುಕಿದ ನಿಜವಾದ ಕಾಯಕ ಯೋಗಿ. ಹೀಗಾಗಿ ಜಾತಿ, ಮತ, ಪಂಥಗಳೆನ್ನದೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಎಲ್ಲರೂ ಆಚರಿಸಬೇಕು. ಅಲ್ಲದೆ, ಅವರ ಆದರ್ಶವನ್ನು ಪಾಲಿಸಬೇಕು ಎಂದರು.ಶಿವಯೋಗಿ ಸಿದ್ಧರಾಮೇಶ್ವರರು ಬಸವಣ್ಣನವರಿಗೆ ನಿಕಟ ವ್ಯಕ್ತಿಯಾಗಿದ್ದರು. ಅವರಿಗೆ ಕಾಯಕದಿಂದ ಜ್ಞಾನೋದಯವಾಗಿ, ಕೆರೆಗಳನ್ನು ನಿರ್ಮಿಸಿ ಕೃಷಿಗೆ ಒತ್ತು ನೀಡಿದ್ದರು. ವಿಚಾರ, ಆಚಾರದಲ್ಲಿ ಸಾಮ್ಯತೆ ಇದ್ದುದ್ದರಿಂದ ಬಸವಣ್ಣನವರ ಒಡನಾಟಕ್ಕೆ ಬಂದು, ಕಾಯಕ ಸಮಾಜ ನಿರ್ಮಾಣ ಮಾಡಿದರು. ತನ್ನನ್ನು ತಾನು ಅರಿತು ಬಾಳಿದ ಶ್ರೀ ಸಿದ್ಧರಾಮೇಶ್ವರರು ಕೆರೆ, ಕಾಲುವೆ, ದೇವಸ್ಥಾನ, ಕಟ್ಟಿಸುವ ಮೂಲಕ ಕರ್ಮ ಮಾರ್ಗದಲ್ಲಿ ಸಾಗಿ ಮಾನವ ಜನ್ಮ ಸಾರ್ಥಕ ಎಂದು ನಿರೂಪಿಸಿದ್ದಾರೆ. ನಂತರದ ದಿನಗಳಲ್ಲಿ ಬಸವಣ್ಣ ಮತ್ತು ಸಾವಿರಾರು ಶರಣರ ಭೇಟಿಯಿಂದ ಜ್ಞಾನ ಮಾರ್ಗದಲ್ಲಿ ಸಾಗಿದರು. ಆ ಮೂಲಕ ಸಕಲ ಜೀವಾತ್ಮಗಳಿಗೂ ಒಳಿತನ್ನು ಬಯಸುವ ಹೃದಯವಂತರು ಶ್ರೀಸಿದ್ಧರಾಮೇಶ್ವರರು ಎಂದು ಬಣ್ಣಿಸಿದರು.
ಶ್ರೀ ಸಿದ್ಧರಾಮೇಶ್ವರರ ವಚನಗಳು ಸಮಾಜದಲ್ಲಿರುವ ಸಕಲ ಜೀವಿಗಳಿಗೂ ಒಳಿತನ್ನು ಬಯಸುವುದಾಗಿವೆ. ಬದುಕು ಶ್ರೇಷ್ಠವಾಗಬೇಕಾದರೆ ದುಡಿಮೆಯನ್ನು ಪೂಜಿಸಬೇಕು. ದುಡಿಮೆಯಲ್ಲಿ ಭಗವಂತನನ್ನು ಕಾಣಬೇಕು ಎಂದು ತಿಳಿಸುತ್ತವೆ. ಹೀಗಾಗಿ ಪ್ರತಿಯೊಬ್ಬರೂ ಸೋಮಾರಿಗಳಾಗದೆ ದುಡಿಮೆಗೆ ಪ್ರಾಮುಖ್ಯತೆ ನೀಡಬೇಕೆಂದು ಕಿವಿಮಾತು ಹೇಳಿದರು.ಅಕ್ಷರಸ್ಥರನ್ನಾಗಿಸುವ ಸಿದ್ಧರಾಮರ ಪವಾಡ:
ಶ್ರೀಸಿದ್ಧರಾಮೇಶ್ವರರನ್ನು ಪವಾಡ ಪುರುಷನೆಂದರೆ ತಪ್ಪಾಗಲಾರದು. ಆದರೆ, ಅವರು ಡಂಭಾಚಾರದ ಪವಾಡಗಳನ್ನು ಸೃಷ್ಟಿಸಲಿಲ್ಲ. ಬದಲಾಗಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವ ಪವಾಡ ಮಾಡಿದರು. ಹೀಗಾಗಿ ಪವಾಡಗಳನ್ನು ಸೃಷ್ಟಿವುದು ಮನುಷ್ಯನೇ ಹೊರತು ದೇವರಲ್ಲ. ಮನುಷ್ಯ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲ ಎಂಬುದನ್ನು ಅವರು 12ನೇ ಶತಮಾನದಲ್ಲಿಯೇ ತೋರಿಸಿಕೊಟ್ಟಿದ್ದಾರೆ. ಅವರನ್ನು ಸ್ಫೂರ್ತಿಯನ್ನಾಗಿಸಿಕೊಂಡು ಇಂದಿನ ಯುವ ಪೀಳಿಗೆ ಸಾಧನೆಯ ಶಿಖರವನ್ನೇರಬೇಕು ಎಂದು ತಿಳಿಸಿದರು.ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಜೀವನದಲ್ಲಿ ಪಾಲಿಸಬೇಕು. 12ನೇ ಶತಮಾನದ ಬಸವಣ್ಣ, ಅಲ್ಲಮಪ್ರಭು, ಹಡಪದ ಹಪ್ಪಣ್ಣ ಸೇರಿದಂತೆ ಅನೇಕ ವಚನಕಾರರು ಸಮಾಜದ ಸುಧಾರಣೆಗೆ ಶ್ರಮಿಸಿದರು. ಸಿದ್ಧರಾಮೇಶ್ವರರು ಉತ್ತಮ ಸಾಹಿತಿಯಾಗಿದ್ದರು. ಅವರು ರಚಿಸಿರುವ ಎಲ್ಲ ವಚನಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಎಂದರು.ನಗರಸಭೆ ಅಧ್ಯಕ್ಷ ಗಜೇಂದ್ರ ಮಾತನಾಡಿ, ಸಮಾಜದ ಎಲ್ಲಾ ವರ್ಗದವರು ಸಿದ್ಧರಾಮೇಶ್ವರರ ವಚನಗಳನ್ನು ಹಾಗೂ ಜೀವನವನ್ನು ಅಧ್ಯಯನ ಮಾಡುವ ಮೂಲಕ ಅವರ ವಚನಗಳಿಂದ ಪ್ರೇರಣೆಯನ್ನು ಪಡೆಯಬೇಕು. ನಮ್ಮ ಜೀವನದಲ್ಲಿ ಅವರ ಆದರ್ಶಗಳನ್ನು ಅನುಸರಿಸಿದರೆ ನಮಗೆ ಹಾಗೂ ಸಮಾಜಕ್ಕೂ ಒಳಿತು ಆಗಲಿದೆ. ಇವರ ಆದರ್ಶಗಳು ಇಂದಿನ, ಮುಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಹೇಳಿದರು.ಕಾರ್ಯಕ್ರಮಕ್ಕೂ ಮುನ್ನ ಜಯಂತ್ಯುತ್ಸವದ ಪ್ರಯುಕ್ತ ಶಿವಯೋಗಿ ಸಿದ್ಧರಾಮೇಶ್ವರರ ಬೃಹತ್ ಭಾವಚಿತ್ರದ ಮೆರವಣಿಗೆಯು ಪಲ್ಲಕ್ಕಿಗಳು ಹಾಗೂ ಜಾನಪದ ಕಲಾ ತಂಡಗಳೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಿಂದ ಒಕ್ಕಲಿಗರ ಕಲ್ಯಾಣ ಮಂಟಪದವರೆಗೆ ಸಾಗಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ ಸೇರಿ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.ನಗರಸಭೆ ಉಪಾಧ್ಯಕ್ಷ ಜೆ.ನಾಗರಾಜು, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಜಿಪಂ ಉಪಕಾರ್ಯದರ್ಶಿ ಅತಿಕ್ ಪಾಷಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ತಹಸೀಲ್ದಾರ್ ಅನಿಲ್, ಭೋವಿ ಸಂಘದ ಮುಖಂಡ ಹಾಗೂ ಜಿಪಂ ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಸಮುದಾಯದ ಮುಖಂಡರಾದ ನಾರಾಯಣಸ್ವಾಮಿ, ಕೆ.ವಿ ವಿಜಯ್ ಕುಮಾರ್, ಶ್ರೀನಿವಾಸ್, ವೆಂಕಟೇಶ್ ವೈ.ಶಂಕರ್, ಗುರ್ರಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.