ಕೆ.ಬಿ ಹೊಸಹಳ್ಳಿ ಕಲ್ಲು ಗಣಿಗಾರಿಕೆ ನಿಲ್ಲಿಸಲು ಆಗ್ರಹ

| Published : Jul 25 2025, 12:30 AM IST

ಸಾರಾಂಶ

ನರಸಾಪುರ ಹೋಬಳಿಯ ಕೆ.ಬಿ.ಹೊಸಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ ೧೧೦, ೧೩೦ ರಲ್ಲಿ ಬಂಡೆಗಳನ್ನು ಬ್ಲಾಸ್ಟ್ ಮಾಡಲು ನೀಡಿರುವ ನಿಯಮಗಳನ್ನು ಗಾಳಿಗೆ ತೂರಿ ರಾತ್ರಿ ಸಮಯದಲ್ಲಿ ಓವರ್ ಬ್ಲಾಸ್ಟ್ ಮಾಡುವುದರಿಂದ ಅ ಭಾಗದ ಗ್ರಾಮಗಳಲ್ಲಿ ಜನರು ನೆಮ್ಮದಿಯಿಂದ ಜೀವನ ಮಾಡಲು ಆಗುತ್ತಿಲ್ಲ. ಮನೆಗಳು ಬಿರುಕು ಬಿಟ್ಟಿದ್ದು, ಕುಸಿಯು ಭೀತಿ ಎದುರಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ಕೆ.ಬಿ ಹೊಸಹಳ್ಳಿ ಭಾಗದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಬಂಡೆಗಳನ್ನು ಸ್ಫೋಟ ಮಾಡುತ್ತರುವ ಕಾರಣ ಮನೆಗಳು ಬಿರುಕು ಬಿಟ್ಟಿವೆ. ಅಲ್ಲದೆ ಬೆಳೆಗಲಿಗೆ ಹಾನಿಯಾಗುತ್ತಿದೆ. ಆದ್ದರಿಂದ ಬಂಡೆಗಳನ್ನುಸ್ಫೋಟಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರಾಂತ ರೈತ ಸಂಘ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು,ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಮಾತನಾಡಿ, ನರಸಾಪುರ ಹೋಬಳಿಯ ಕೆ.ಬಿ.ಹೊಸಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ ೧೧೦, ೧೩೦ ರಲ್ಲಿ ಬಂಡೆಗಳನ್ನು ಬ್ಲಾಸ್ಟ್ ಮಾಡಲು ನೀಡಿರುವ ನಿಯಮಗಳನ್ನು ಗಾಳಿಗೆ ತೂರಿ ರಾತ್ರಿ ಸಮಯದಲ್ಲಿ ಓವರ್ ಬ್ಲಾಸ್ಟ್ ಮಾಡುವುದರಿಂದ ಅ ಭಾಗದ ಗ್ರಾಮಗಳಲ್ಲಿ ಜನರು ನೆಮ್ಮದಿಯಿಂದ ಜೀವನ ಮಾಡಲು ಆಗುತ್ತಿಲ್ಲ. ಮನೆಗಳು ಬಿರುಕು ಬಿಟ್ಟು ಮಳೆಗಾಲದಲ್ಲಿ ಬೀಳುವ ಅಪಾಯ ುಂಟಾಗಿದೆ ಎಂದರು.ಪ್ರಾಣಿ, ಪಕ್ಷಿಗಳಿಗೂ ತೊಂದರೆ

ಬಂಡೆಯ ಪಕ್ಕದಲ್ಲಿ ಅರಣ್ಯ ಇದ್ದು ಈ ಅರಣ್ಯದಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗುತ್ತಿದೆ ಹಾಗೂ ಬಂಡೆಯ ಕಲ್ಲಿನ ದೂಳಿನಿಂದ ಬಂಡೆಯ ಸುತ್ತ ಮುತ್ತಲೂ ರೈತರು ಯಾವುದೇ ರೀತಿಯ ತರಕಾರಿ ಮತ್ತು ರೇಷ್ಮೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ದನ-ಕರುಗಳ ಮೇವಿಗೂ ತುಂಬಾ ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್ ಮಾತನಾಡಿ, ಬಂಡೆ ಬ್ಲಾಸ್ಟ್ ಮಾಡಿ ತೆಗೆಯುವ ಕಲ್ಲುಗಳನ್ನು ಟಿಪ್ಪರ್‌ಗಳ ಮೂಲಕ ಅಗತ್ಯಕ್ಕಿಂತ ಹೆಚ್ಚಿನ ಭಾರ ತುಂಬಿಸಿ ಊರಿನ ಮಧ್ಯೆ ಸಾಮಾನ್ಯ ರಸ್ತೆಗಳಲ್ಲಿ ಸಾಗಿಸುತ್ತಾರೆ. ಇದರಿಂದ ರಸ್ತೆಗಳು ಹಾಳಾಗುತ್ತಿವೆ. ಊರಿನ ಒಳಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ಶಾಲೆಯಿದ್ದು ಮಕ್ಕಳು, ಮಹಿಳೆಯರು ಹೆಚ್ಚು ಒಡಾಡುತ್ತಿರುತ್ತಾರೆ. ಇಲ್ಲಿ ಟಿಪ್ಟರ್‌ಗಳು ವೇಗವಾಗಿ ಸಂಚರಿಸುವ ಕಾರಣ ಜನ ಭಯಭೀತರಾಗಿ ಬದುಕುವ ಪರಿಸ್ಥಿತಿ ಇದೆ ಎಂದರು.ಮನವಿ ಸಲ್ಲಿಸಿದರೂ ಕ್ರಮ ಇಲ್ಲ

ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ಸಂಘಟನೆ ಮತ್ತು ಗ್ರಾಮಸ್ಥರಿಂದ ಎರಡು ಮೂರು ಬಾರಿ ಮನವಿ ಪತ್ರ ನೀಡಿದರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಆದ್ದರಿಂದ ಸಂಬಂಧಪಟ್ಟ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಂಡು ಓವರ್ ಬ್ಲಾಸ್ಟ್‌ಗೆ ಕಡಿವಾಣ ಹಾಕಿ ಗ್ರಾಮದ ಜನರು ನಿರ್ಭಿತಿಯಿಂದ ಜೀವನ ಮಾಡಲು ಅನುವು ಮಾಡಿಕೊಡಬೇಕೆಂದರುಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ತಾಲ್ಲೂಕು ಅಧ್ಯಕ್ಷ ಅಲಹಳ್ಳಿ ವೆಂಕಟೇಶಪ್ಪ, ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಮುಖಂಡರಾದ ವಿ.ವೆಂಕಟೇಶಪ್ಪ, ಕೆ.ಎಂ.ನಾರಾಯಣಸ್ವಾಮಿ, ಚಿನ್ನಮ್ಮ,ಅಪ್ಪಯ್ಯಣ್ಣ, ಮಂಜುಳಾ, ರಾಜೇಂದ್ರ, ಹರೀಶ್, ವಿಜಯ ರಾಘವರೆಡ್ಡಿ, ಮಂಜುನಾಥ್, ಚಂದ್ರಶೇಖರ್, ಚಂದ್ರಪ್ಪ, ವೆಂಕಟೇಶರೆಡ್ಡಿ, ನಾರಾಯಣರೆಡ್ಡಿ, ಶೈಲಜಾ, ಪ್ರಭಮ್ಮ, ರಾಜಮ್ಮ ಇದ್ದರು.