ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶಿಕ್ಷಣ ತಜ್ಞ ಕೆ.ಸಿ.ರಂಗಯ್ಯ ಅವರು ಕೇವಲ ದಲಿತ ಮಕ್ಕಳಿಗೆ ಶಿಕ್ಷಣ ನೀಡಲಿಲ್ಲ. ಎಲ್ಲ ವರ್ಗದ ಬಡವರಿಗೂ ಶಿಕ್ಷಣವನ್ನು ನೀಡಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಶ್ರಮಿಸಿದ ಮಹಾಪುರುಷ ಎಂದು ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ತಿಳಿಸಿದರು.ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಾರ್ವಜನಿಕ ಹಾಸ್ಟೆಲ್ ಆವರಣದಲ್ಲಿರುವ ದಿ.ಕೆ.ಸಿ.ರಂಗಯ್ಯ ಪುತ್ಥಳಿಗೆ ೯೮ ವರ್ಷದ ಜಯಂತಿ ಅಂಗವಾಗಿ ಮಾರ್ಲಾಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ದಿ.ಬಿ.ರಾಚಯ್ಯ ಅವರು ಈ ಭಾಗದ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಟಿಸಿಎಚ್ ಕಾಲೇಜು ತೆರೆಯಲು ಅನುಮೋದನೆ ಕೊಡಿಸಿ, ಎಲ್ಲಾ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡ ಕೆ.ಸಿ.ರಂಗಯ್ಯ ಅವರು ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸದ ವಿದ್ಯಾರ್ಥಿಗಳಿಗೆ ಟಿಸಿಎಚ್ ಶಿಕ್ಷಕರ ತರಬೇತಿ ನೀಡಿ ಅವರೆಲ್ಲರು ಶಿಕ್ಷಕರಾಗುವಂತೆ ಮಾಡಿದರು. ಈ ದಿಕ್ಕಿನಲ್ಲಿ ಅವರಿಂದ ಶಿಕ್ಷಣ ಪಡೆದ ಬಹಳಷ್ಟು ಮಂದಿ ಉನ್ನತ ಸ್ಥಾನದಲ್ಲಿ ದ್ದಾರೆ. ಪರಿಶಿಷ್ಟ ಸಮುದಾಯ ಅಲ್ಲದೇ ಇತರೇ ವರ್ಗಗಳಲ್ಲಿರುವ ಬಡವರಿಗೂ ಸೀಟು ನೀಡಿ, ಅವರಿಗೆ ಫೀಜು, ಬಟ್ಟೆ ತೆಗೆದುಕೊಟ್ಟು ಸಹಾಯ ಮಾಡಿದ ನಿರ್ದಶನಗಳು ಬಹಳ ಇದೆ. ಇಂಥ ನಿಸ್ವಾರ್ಥ ಸೇವೆ ಮಾಡಿದ ಕೆ.ಸಿ.ರಂಗಯ್ಯರ ೧೦೦ನೇ ಜಯಂತಿಯನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡುವುದಾಗಿ ಪಾಪು ತಿಳಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಅವರನ್ನು ಸನ್ಮಾಸಿ, ೧ ಲಕ್ಷ ರು. ನಗದು ಪುರಸ್ಕಾರ ನೀಡುವ ಜೊತೆಗೆ ಅವರ ಹೆಸರಿನಲ್ಲಿ ಶಾಶ್ವತ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದಾಗಿ ಹೇಳಿದರು. ನಮ್ಮ ಜಿಲ್ಲೆಯ ಅಭಿವೃದ್ಧಿಯಲ್ಲಿ ಬಿ.ರಾಚಯ್ಯ ಹಾಗೂ ಕೆ.ಸಿ. ರಂಗಯ್ಯ ಅವರು ಎರಡು ಕಣ್ಣಿಗಳಿದ್ದಂತೆ. ಅವರ ಸೇವೆಯನ್ನು ಗುಣಗಾನ ಮಾಡುವ ಜೊತೆಗೆ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡೋಣ ಎಂದರು. ತಾಪಂ ಮಾಜಿ ಅಧ್ಯಕ್ಷ ಆರ್.ಮಹದೇವ್ ಮಾತನಾಡಿ, ಕೆ.ಸಿ. ರಂಗಯ್ಯ ಅವರು ಸೇವೆ ಅನನ್ಯ. ಕೆ.ಸಿ.ಆರ್ ಹಾಸ್ಟೆಲ್ ಎಂದು ಖ್ಯಾತಿಯಾಗಿದ್ದ ವಿದ್ಯಾರ್ಥಿನಿಲಯದಲ್ಲಿ ಬಹಳಷ್ಟು ಗ್ರಾಮಾಂತರ ಪ್ರದೇಶ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮ ವಹಿಸಿದ್ದಾರೆ. ಜೊತೆಗೆ ಅನ್ನ ದಾಸೋಹ ಸಹ ಹಾಸ್ಟೆಲ್ ನಲ್ಲಿ ನಡೆಯುತ್ತಿತ್ತು. ಮಠ ಮಾನ್ಯಗಳು ಮಾಡುತ್ತಿದ್ದ ಕಾರ್ಯವನ್ನು ಕೆ.ಸಿ. ರಂಗಯ್ಯರು ಮಾಡಿದ್ದಾರೆ ಎಂದು ಸ್ಮರಿಸಿಕೊಂಡರು. ನಂತರ ಕೆ.ಸಿ.ರಂಗಯ್ಯ ವೃತ್ತ ನಾಮಫಲಕವನ್ನು ಗಣ್ಯರು ಅನಾವರಣಗೊಳಿಸಿದರು. ಬಳಿಕ ಒಳ ಮೀಸಲಾತಿ ಸಮೀಕ್ಷೆಯಲ್ಲಿ ನಿಖರವಾಗಿ ಹೊಲೆಯ ಎಂದು ನಮೂದಿಸುವ ಕುರಿತು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಮುಖಂಡರಾದ ನಾಗವಳ್ಳಿ ನಾಗಯ್ಯ, ಜ್ಯೋತಿಗೌಡನಪುರ ದುಂಡಯ್ಯ, ಮಹದೇವ್ ಬುದ್ದ, ಅಲೂರು ಮಹದೇವಯ್ಯ, ಡಿಎಸ್‌ಎಸ್ ಶಿವಣ್ಣ, ಸಿದ್ದಯ್ಯನಪುರ ಗೋವಿಂದರಾಜು, ದಲಿತರಾಜ್, ದಡದಹಳ್ಳಿ ಮೂರ್ತಿ, ನಾಗರಾಜು, ಶಿಕ್ಷಕರಾದ ಮಹದೇವಯ್ಯ, ಮಹದೇವಸ್ವಾಮಿ, ರಾಮಸ್ವಾಮಿ, ಕೃಷ್ಣಮೂರ್ತಿ, ಮಹದೇವಸ್ವಾಮಿ ಮೊದಲಾದವರು ಇದ್ದರು.