ಕೆಸಿಸಿ ಬ್ಯಾಂಕ್ ಜನಸಾಮಾನ್ಯರ ನಾಡಿಮಿಡಿತ

| Published : Dec 01 2024, 01:31 AM IST

ಸಾರಾಂಶ

ಗ್ರಾಮೀಣ ಜನರಿಗೆ ಕೃಷಿ ಚಟುವಟಿಕೆಗಳಿಗಾಗಿ ಆಧಾರಿತವಾದ ಬೆಳೆ ಸಾಲ, ಮಾಧ್ಯಮಿಕ ಕೃಷಿ ಸಾಲ ಕೊಡುವ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕಾರ್ಯ ಮಾಡುತ್ತಿದೆ

ಮುಂಡರಗಿ: ಪ್ರತಿಷ್ಠಿತ ಕೆಸಿಸಿ ಬ್ಯಾಂಕ್‌ ರಾಜ್ಯದಲ್ಲಿಯೇ ಉನ್ನತ ಶ್ರೇಣಿಯ ಬ್ಯಾಂಕ್ ಆಗಿದ್ದು, ಇದು ರೈತ ಪರ ಬ್ಯಾಂಕ್ ಆಗಿ ಜನಸಾಮಾನ್ಯರ ನಾಡಿಮಿಡಿತವಾಗಿದೆ ಎಂದು ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮುದಕನಗೌಡ ಎಸ್. ಪಾಟೀಲ ಹೇಳಿದರು.

ಅವರು ಮುಂಡರಗಿ ಪಟ್ಟಣದ ಕೆಸಿಸಿ ಬ್ಯಾಂಕಿನಲ್ಲಿ ಏರ್ಪಡಿಸಿದ್ದ ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಧಾರವಾಡದ 109ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಠೇವಣಿ ಸಂಗ್ರಹಣೆ, ಸಾಲ ವಿತರಣೆ ಹಾಗೂ ಸಾಲ ವಸೂಲಾತಿ ಸಾಧನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಜನರಿಗೆ ಕೃಷಿ ಚಟುವಟಿಕೆಗಳಿಗಾಗಿ ಆಧಾರಿತವಾದ ಬೆಳೆ ಸಾಲ, ಮಾಧ್ಯಮಿಕ ಕೃಷಿ ಸಾಲ ಕೊಡುವ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕಾರ್ಯ ಮಾಡುತ್ತಿದೆ. ನಮ್ಮ ರೈತ ಬಾಂಧವರು ಸಹಕಾರಿಗಳು, ತಮ್ಮ ಉಳಿತಾಯದ ಹಣ ಕೆಸಿಸಿ ಬ್ಯಾಂಕ್ ನಲ್ಲಿ ತೊಡಗಿಸುವ ಮೂಲಕ ಬ್ಯಾಂಕಿನೊಂದಿಗೆ ಕೈಜೋಡಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿ, ಕೆಸಿಸಿ ಬ್ಯಾಂಕ್ ರೈತಾಪಿ ವರ್ಗದ ಜನರಿಗೆ ಆರ್ಥಿಕ ಸಬಲತೆ ತಂದು ಕೊಡುವಲ್ಲಿ ಸರಳ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಮತ್ತು ಆಕರ್ಷಕ ಬಡ್ಡಿ ದರದಲ್ಲಿ ಠೇವಣಿದಾರರಿಗೆ ಬಡ್ಡಿ ನೀಡುವ ಮೂಲಕ ಜನಮಾನಸದ ಬ್ಯಾಂಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ನ್ಯಾಯವಾದಿ ಎಂ.ಬಿ. ಪಾಟೀಲ ಮಾತನಾಡಿ, ಕೆಸಿಸಿ ಬ್ಯಾಂಕ್ ಇಂದಿನ ರಾಷ್ಟ್ರೀಕೃತ ಬ್ಯಾಂಕ್‌ಗಳ ಜತೆ ಪೈಪೋಟಿ ನಡೆಸಿ ಎಲ್ಲ ಆಧುನಿಕ ತಾಂತ್ರಿಕತೆಯಲ್ಲಿ ಕಾರ್ಯ ಮಾಡುತ್ತಿದೆ. ಇತರೆ ಬ್ಯಾಂಕುಗಳಿಗಿಂತ ಠೇವಣಿದಾರರಿಗೆ ಆಕರ್ಷಿಕ ಬಡ್ಡಿ ಹಾಗೂ ಕಡಿಮೆ ಬಡ್ಡಿಯಲ್ಲಿ ಕೃಷಿ ಮತ್ತು ಕೃಷಿಯೇತರ ಸಾಲ ನೀಡುವ ಮೂಲಕ ಜನಸಾಮಾನ್ಯರ ಆರ್ಥಿಕ ಸಬಲತೆಗೆ ನೆರವಾಗಿ ನಿಂತಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಖಾ ವ್ಯವಸ್ಥಾಪಕ ಎಸ್‌.ಬಿ.ಕೂಗು ಹಾಗೂ ಸಹ ವ್ಯವಸ್ಥಾಪಕ ಎಸ್.ವಿ. ಪಾಟೀಲ್, ಬ್ಯಾಂಕಿನ ಸೇವಾ ಸೌಲಭ್ಯ ಕುರಿತು ವಿವರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ ದೇಸಾಯಿ, ಪಿಆರ್ಡಿ ಬ್ಯಾಂಕ್ ವ್ಯವಸ್ಥಾಪಕ ಮಹಮ್ಮದ್ ರಫಿ, ತಿಪ್ಪಣ್ಣ, ಷಣ್ಮುಖಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ದೇಶಕ ಕೆ.ವಿ. ದೊಡ್ಡಮನಿ ಸ್ವಾಗತಿಸಿ ವಂದಿಸಿದರು.