ಎರಾಸ್ಮಸ್ ಸಂಶೋಧನಾ ‌ನಿಧಿಯಿಂದ ಪ್ರವಾಸೋದ್ಯಮ ಸಂಬಂಧಿತ ಸಂಶೋಧನೆ ಕೈಗೊಳ್ಳಲು ಹೆಚ್ಚು ಅನುಕೂಲವಾಗಲಿದೆ. ಇದು ಯುರೋಪಿನ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗಕ್ಕೆ ಈ ಸಂಶೋಧನಾ ಸಹಾಯ ದೊರೆತಿದೆ.

ಧಾರವಾಡ:

ಕರ್ನಾಟಕ ವಿವಿಯು ಪ್ರಥಮ ಬಾರಿಗೆ ಯುರೋಪಿಯನ್ ಒಕ್ಕೂಟದ ಎರಾಸ್ಮಸ್ (ERASMUS) ಸಂಶೋಧನಾ ನಿಧಿ ಪಡೆದುಕೊಂಡಿದೆ ಎಂದು ವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಾಸ್ಮಸ್ ಸಂಶೋಧನಾ ‌ನಿಧಿಯಿಂದ ಪ್ರವಾಸೋದ್ಯಮ ಸಂಬಂಧಿತ ಸಂಶೋಧನೆ ಕೈಗೊಳ್ಳಲು ಹೆಚ್ಚು ಅನುಕೂಲವಾಗಲಿದೆ. ಇದು ಯುರೋಪಿನ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗಕ್ಕೆ ಈ ಸಂಶೋಧನಾ ಸಹಾಯ ದೊರೆತಿದೆ. ವಿಭಾಗವು ಸುಮಾರು ₹ 48 ಲಕ್ಷಕ್ಕೂ ಅಧಿಕ ಧನಸಹಾಯ ಪಡೆಯಲಿದ್ದು, ಪ್ರವಾಸೋದ್ಯಮ ವಿಭಾಗವು ‘ಹೈಯರ್ ಎಜುಕೇಶನ್ ಅಂಡ್ ಸಸ್ಟೆನೇಬಲ್ ಗ್ರೋಥ್ ಥ್ರೊ ರಿಲಿಜಿಯಸ್ ಟೂರಿಸಂ’ (ಸೆಕ್ರೆಡ್ ಟ್ರಾವೆಲ್ ಫಾರ್ ಗ್ರೋಥ್) ಎಂಬ ವಿಷಯದ ಮೇಲೆ ಸಂಶೋಧನಾ ಕಾರ್ಯ ಕೈಗೊಳ್ಳಲಿದೆ ಎಂದು ವಿವರಿಸಿದರು.

ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಕಿವುಡನವರ ಸಂಯೋಜನಾ ಅಧಿಕಾರಿಯಾಗಿ ಈ ಯೋಜನೆಯ ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ. ಈ ಸಂಶೋಧನಾ ತಂಡದಲ್ಲಿ ಆರು ಜನರ ಶಿಕ್ಷಕರ ತಂಡವಿದೆ. ವಿಭಾಗದ ಪಠ್ಯಕ್ರಮ, ಸಂಶೋಧನಾ ಕ್ರಮ, ಧಾರ್ಮಿಕ ಪ್ರವಾಸೋದ್ಯಮದ ಇತೀಚಿನ ಬೆಳವಣಿಗೆಯ ವರದಿ ತಯಾರಿಕೆ, ಪ್ರವಾಸೋದ್ಯಮ ವಿಭಾಗದಲ್ಲಿ ಶೈಕ್ಷಣಿಕವಾಗಿ ಮೂಲಭೂತ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ನಿಧಿಯು ಸಹಕಾರಿಯಾಗಲಿದೆ ಎಂದು ಡಾ. ಖಾನ್‌ ಮಾಹಿತಿ ನೀಡಿದರು.

ಯುರೋಪಿಯನ್ ಒಕ್ಕೂಟದ ಸಭೆಗೆ ಅಲ್ಬೇನಿಯಾಕ್ಕೆ ಡಾ. ಜಗದೀಶ ಬರುವ ದಿನಗಳಲ್ಲಿ ತೆರಳಲಿದ್ದಾರೆ. ಈ ನಿಟ್ಟಿನಲ್ಲಿ ಇದು ಆರಂಭ ಮಾತ್ರ, ಇನ್ನು ಮುಂದೆ ಇಂತಹ ಹಲವು ಸಂಶೋಧನಾ ಯೋಜನೆಗಳು ನಮ್ಮ ಸಂಸ್ಥೆಗೆ ದೊರೆಯುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಕವಿವಿಯು ಸಂಶೋಧನೆಗೆ ಹೆಚ್ಚು ಒತ್ತು ನೀಡುವುದು ಅವಶ್ಯಕ ಎಂದು ಕುಲಪತಿ, ಪ್ರವಾಸೋದ್ಯಮ ವಿಭಾಗ ಮತ್ತು ಪ್ರೊ. ಜಗದೀಶ ಅವರನ್ನು ಅಭಿನಂದಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಚಾರ್ಯ ಡಾ. ಐ.ಸಿ. ಮುಳಗುಂದ, ಪ್ರೊ. ಎಸ್. ರಾಜಶೇಖರ, ಡಾ. ಸಂಜಯಕುಮಾರ ಮಾಲಗತ್ತಿ, ಡಾ. ಮುಕುಂದ ಲಮಾಣಿ, ಡಾ‌. ಪ್ರಭಾಕರ ಕಾಂಬಳೆ ಇದ್ದರು.