ಇಂದು ಕೆಡಿಪಿ ಸಭೆ: ರಸ್ತೆ, ನೀರಿನ ಸಮಸ್ಯೆಗಳಿಗೆ ಸಿಗಲಿದೆಯಾ ಪರಿಹಾರ?

| Published : Jun 24 2024, 01:35 AM IST

ಇಂದು ಕೆಡಿಪಿ ಸಭೆ: ರಸ್ತೆ, ನೀರಿನ ಸಮಸ್ಯೆಗಳಿಗೆ ಸಿಗಲಿದೆಯಾ ಪರಿಹಾರ?
Share this Article
  • FB
  • TW
  • Linkdin
  • Email

ಸಾರಾಂಶ

ಅಣ್ಣಿಗೇರಿ ಮತ್ತು ನವಲಗುಂದ ತಾಲೂಕಿನ ಪ್ರಗತಿ ಪರಿಶೀಲನಾ ಸಭೆ ಚುನಾವಣೆ ಮತ್ತು ಇತರೆ ಅಡಚಣೆಗಳಿಂದ 13 ತಿಂಗಳು ಗತಿಸಿದ ಮೇಲೆ ಜೂ. 24ರಂದು ಅಣ್ಣಿಗೇರಿಯ ಪಂಪಭವನದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ನವಲಗುಂದ

ಅಣ್ಣಿಗೇರಿ ಮತ್ತು ನವಲಗುಂದ ತಾಲೂಕಿನ ಪ್ರಗತಿ ಪರಿಶೀಲನಾ ಸಭೆ ಚುನಾವಣೆ ಮತ್ತು ಇತರೆ ಅಡಚಣೆಗಳಿಂದ 13 ತಿಂಗಳು ಗತಿಸಿದ ಮೇಲೆ ಜೂ. 24ರಂದು ಅಣ್ಣಿಗೇರಿಯ ಪಂಪಭವನದಲ್ಲಿ ನಡೆಯಲಿದೆ.

ತಾಲೂಕುಗಳ ಅಭಿವೃದ್ಧಿ ಕುರಿತಂತೆ ಚರ್ಚೆ ಜೋರಾಗಿಯೇ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಕೆಲವು ಭಾಗಗಳಲ್ಲಿ ರೈತರಿಗೆ ಚಕ್ಕಡಿ ರಸ್ತೆ ನಿರ್ಮಾಣ ಮಾಡಿ ಸರಾಗ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೆಲ ಭಾಗಗಳಲ್ಲಿ ಚಕ್ಕಡಿ ರಸ್ತೆ ಇದ್ದರೂ ಅಕ್ಕಪಕ್ಕದ ಜಮೀನಿನ ರೈತರು ಅತಿಕ್ರಮಣ ಮಾಡಿ ರಸ್ತೆ ಇಲ್ಲದಂತೆ ಮಾಡಿದ್ದಾರೆ.

ಇತ್ತೀಚಿಗೆ ಸುರಿದ ರೋಹಿಣಿ ಮಳೆಯಿಂದ ಶೆಲವಡಿ ಮತ್ತು ನವಲಗುಂದ ಮಧ್ಯಭಾಗದಲ್ಲಿ ಭಾರಿ ಮಳೆಯಾಗಿ ಒಡ್ಡುಗಳು ಒಡೆದು ರಸ್ತೆಗಳು ಮಳೆಯ ರಭಸಕ್ಕೆ ಕೊಚ್ಚಿ ಮತ್ತೆ ಸಂಚರಿಸದಂತಾಗಿವೆ. ರೈತರೇ ಆ ರಸ್ತೆಗಳನ್ನು ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ.

ಮಳೆಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ. ಹೊಸ ನೀರು ಕೆರೆಗೆ ಸೇರಿದ್ದರಿಂದ ಇದನ್ನು ಕುಡಿದ ಜನರ ಆರೋಗ್ಯ ಹದಗೆಡುತ್ತಿದೆ. ಶುದ್ದ ನೀರಿನ ಘಟಕಗಳು ಕಾರ್ಯನಿರ್ವಹಿಸದೆ ಕೆಲ ಗ್ರಾಮಗಳಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ನವಲಗುಂದ ಚೆನ್ನಮ್ಮನ ಕೆರೆಗೆ ಅಳವಡಿಸಿರುವ ಪಂಪ್‌ಸೆಟ್ ಕಳೆದ ತಿಂಗಳಲ್ಲಿ ಒಮ್ಮೆ ಬಂದ್ದ್ ಆಗಿದ್ದರಿಂದ 8 ದಿನಕ್ಕೆ ಬರುವ ನೀರು 10 ದಿನಕ್ಕೆ ಬರುವಂಥಾಗಿತ್ತು. ಡೆಂಘೀ ಜ್ವರ ಹರಡುತ್ತಿದೆ. ಹೀಗಾಗಿ, 3ರಿಂದ 4 ದಿನಗಳವರೆಗೆ ಮಾತ್ರ ನೀರನ್ನು ಶೇಖರಣೆ ಮಾಡಿ ಕುಡಿಯಬೇಕು ಎಂದು ಪಟ್ಟಣ ಪ್ರದೇಶಗಳಲ್ಲಿ ಈಗಾಗಲೇ ಪುರಸಭೆ ಹಾಗೂ ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ತಿಂಗಳಲ್ಲಿ ಮೂರರಿಂದ ನಾಲ್ಕು ಬಾರಿ ನೀರು ಬಿಟ್ಟರೆ ಸಂಗ್ರಹಿಸಿಡುವುದು ಅನಿವಾರ್ಯವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂದಿನ ಕೆಡಿಪಿ ಸಭೆ ಮಹತ್ವ ಪಡೆದುಕೊಂಡಿದೆ.4 ದಿನಕ್ಕೊಮ್ಮೆ ನೀರು ಬಿಡುವುದರಿಂದ ಹೊಸ ನೀರು ಶೇಖರಣೆ ಮಾಡಿ ಸೇವಿಸುತ್ತೇವೆ. ಇದರಿಂದ ಸಾಂಕ್ರಾಮಿಕ ಹೆಚ್ಚುವ ಅಪಾಯವಿದ್ದು, ನಾಲ್ಕು ದಿನಕ್ಕೊಮ್ಮೆ ನೀರು ಬಿಡಬೇಕು.

ಬಸನಗೌಡ ಪಾಟೀಲ ಸ್ಥಳೀಯರುಶೆಲವಡಿ ರಸ್ತೆಗೆ ಹೊಂದಿರುವ ಜಮೀನುಗಳಿಗೆ ಹೋಗುವ ಚಿಕ್ಕ ರಸ್ತೆಯನ್ನು ನಿರ್ಮಿಸಿಕೊಡಬೇಕೆಂದು ಈಗಾಗಲೇ ಶಾಸಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ರಸ್ತೆಯನ್ನು ಅಕ್ಕಪಕ್ಕದ ರೈತರು ಅತಿಕ್ರಮಿಸಿಕೊಂಡಿದ್ದಾರೆ. ಆದಷ್ಟು ಬೇಗನೆ ಶಾಸಕರು ಮುತುವರ್ಜಿ ವಹಿಸಿ ರೈತರಿಗೆ ಚಕ್ಕಡಿ ರಸ್ತೆ ನಿರ್ಮಿಸಿಕೊಡಬೇಕು.

ಅನೀಲ ಬಸವಂತಕರ, ಮಂಜುನಾಥ ಗಡ್ಡಿ ರೈತರು