ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿಕಳೆದ ತಿಂಗಳು ನಿಗಮ-ಮಂಡಳಿಯ ವಿವಿಧ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಬ್ಲೂಟೂತ್ ಅಕ್ರಮ ನಡೆದಿದ್ದು ಬಯಲಾದ ಬೆನ್ನಲ್ಲೇ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನ.19ರಿಂದ 25ರವರೆಗೆ ನಡೆಸಲುದ್ದೇಶಿಸಿರುವ ಉಳಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅಕ್ರಮದ ಆತಂಕ ಕಾಣಸಿಕೊಂಡಿದೆ. ಹೀಗಾಗಿ ಯಾದಗಿರಿಯಲ್ಲಿ ನಿಗದಿಯಾಗಿದ್ದ ಪರೀಕ್ಷಾ ಕೇಂದ್ರಗಳನ್ನೇ ರದ್ದು ಮಾಡಲಾಗಿದೆ. ಯಾದಗಿರಿಯಲ್ಲಿ ಪರೀಕ್ಷೆ ನಡೆಯಬೇಕಿದ್ದ ಕೇಂದ್ರಗಳನ್ನು ಅಕ್ಕಪಕ್ಕದ ಜಿಲ್ಲೆಗಳಾದ ಕಲಬುರಗಿ ಮತ್ತು ರಾಯಚೂರಿಗೆ ವರ್ಗಾವಣೆ ಮಾಡಲಾಗಿದೆ.
ಸರ್ಕಾರದ ಐದು ಇಲಾಖೆ(ನಿಗಮ-ಮಂಡಳಿ)ಗಳಲ್ಲಿ ಖಾಲಿಯಿರುವ ವ್ಯವಸ್ಥಾಪಕರು ಹಾಗೂ ಗ್ರೂಪ್ ಸಿ ಹುದ್ದೆಗಳಿಗಾಗಿ ಕೆಇಎ ಈ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ. ಅಕ್ಟೋಬರ್ ತಿಂಗಳಾಂತ್ಯದಲ್ಲಿ ಕೆಇಎಯಿಂದ ನಡೆದ ಪರೀಕ್ಷೆಗಳಲ್ಲಿ ಮೊದಲ ದಿನವೇ ಅಕ್ರಮ ಬಯಲಾಗಿತ್ತು. ಕಲಬುರಗಿ ಮತ್ತು ಯಾದಗಿರಿಯಲ್ಲಿ ಅನೇಕರ ಬಂಧನವಾಗಿ ಸರ್ಕಾರ ಪ್ರಕರಣದ ತನಿಖೆಯನ್ನು ಈಗ ಸಿಐಡಿಗೂ ವಹಿಸಿದೆ.ಅ.28 ಹಾಗೂ 29ರಂದು ಎರಡು ದಿನ ಪರೀಕ್ಷೆಗಳು ನಡೆದಿದ್ದು, ಅ.30ರಂದು ಪಿಯು ಕಾಲೇಜುಗಳ ರೀ-ಓಪನಿಂಗ್ ಇದ್ದುದರಿಂದ ಆ ದಿನ ನಡೆಯಬೇಕಿದ್ದ ಪರೀಕ್ಷೆಗಳನ್ನು ನ.19ರಿಂದ ನ.25ರವರೆಗೆ ಮುಂದೂಡಲು ನಿರ್ಧರಿಸಲಾಗಿತ್ತು. ಆದರೆ, ಯಾದಗಿರಿಯ ಐದು ಪ್ರತಿಷ್ಠಿತ ಕಾಲೇಜುಗಳ ಪರೀಕ್ಷಾ ಕೇಂದ್ರಗಳಲ್ಲೇ ಅಕ್ರಮ ಬಯಲಿಗೆ ಬಂದಿದ್ದರಿಂದ, ಅನಿವಾರ್ಯವಾಗಿ ಜಿಲ್ಲೆಯಲ್ಲಿ ನಡೆಯಬೇಕಿದ್ದ ಈ ಪರೀಕ್ಷೆಗಳನ್ನು ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಶಿಫ್ಟ್ ಮಾಡಲಾಗಿದೆ ಎಂದು ಡಿಡಿಪಿಯು ಕುಳಗೇರಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸುಮಾರು 4 ಸಾವಿರದಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದು, ಅವರ ಪರೀಕ್ಷಾ ಕೇಂದ್ರಗಳನ್ನು ಬೇರೆ ಜಿಲ್ಲೆಗಳ ಕೇಂದ್ರಗಳಿಗೆ ವರ್ಗಾಯಿಸಲಾಗಿದೆ.