ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ತೀವ್ರ ನಿಗಾ ಇರಲಿ: ಅನುಪಕುಮಾರ

| Published : Apr 14 2024, 01:50 AM IST

ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ತೀವ್ರ ನಿಗಾ ಇರಲಿ: ಅನುಪಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆಗಾಗಿ ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚದ ಮೇಲೆ ತೀವ್ರ ನಿಗಾ ಇಡುವ ಕಾರ್ಯವಾಗಬೇಕು ಎಂದು ವಿಜಯಪುರ ಲೋಕಸಭೆ ಚುನಾವಣೆ ವೆಚ್ಚ ವೀಕ್ಷಕ ಐ.ಆರ್.ಎಸ್. ಅಧಿಕಾರಿ ಅನುಪಕುಮಾರ ಸೂಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಲೋಕಸಭೆ ಚುನಾವಣೆಗಾಗಿ ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚದ ಮೇಲೆ ತೀವ್ರ ನಿಗಾ ಇಡುವ ಕಾರ್ಯವಾಗಬೇಕು ಎಂದು ವಿಜಯಪುರ ಲೋಕಸಭೆ ಚುನಾವಣೆ ವೆಚ್ಚ ವೀಕ್ಷಕ ಐ.ಆರ್.ಎಸ್. ಅಧಿಕಾರಿ ಅನುಪಕುಮಾರ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಶನಿವಾರ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಬ್ಯಾಂಕುಗಳಲ್ಲಿ ಹೊಸ ಖಾತೆ ತೆರೆಯಲಾಗುತ್ತಿದೆಯೇ ಎಂದು ಪರಿಶೀಲಿಸಿ ಮತ್ತು ಆ ಖಾತೆಗಳಿಗೆ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ವರ್ಗಾವಣೆಯಾಗುತ್ತಿದೆಯೇ ಎಂಬುದನ್ನು ವಿಚಾರಿಸಿ ಖಚಿತಪಡಿಸಿಕೊಳ್ಳಬೇಕು, ಚೆಕ್ ಪೋಸ್ಟ್ ಗಳಲ್ಲಿ ಕಾಟಾಚಾರದ ತಪಾಸಣೆ ಆಗಬಾರದು, ಕಟ್ಟುನಿಟ್ಟಾಗಿ ಪರಿಶೀಲಿಸುವುದರೊಂದಿಗೆ ಸಾರ್ವಜನಿಕರಿಗೆ ತೊಂದೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಮದ್ಯದ ಅಂಗಡಿಗಳಲ್ಲಿ ನಿಗದಿಪಡಿಸಿದ್ದಕಿಂತ ಹೆಚ್ಚಿನ ಮಟ್ಟದ ಸಾರಾಯಿ ಮಾರಾಟವಾದಲ್ಲಿ ತಕ್ಷಣ ಗಮನಕ್ಕೆ ತರಬೇಕು, ಮಹಾರಾಷ್ಟ್ರ ರಾಜ್ಯದ ಗಡಿಜಿಲ್ಲೆಯಾಗಿರುವುದರಿಂದ ಅಬಕಾರಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಿ, ಪ್ರಿಂಟಿಂಗ್ ಪ್ರೆಸ್‌ಗಳ ಮೇಲೆ ಕೂಡ ನಿಗಾ ಇಡುವುದು ಅವಶ್ಯವಾಗಿದೆ ಎಂದು ಹೇಳಿದರು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನವರಿ 22ರಂದು ಹೊರಡಿಸಲಾದ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 19,19,048 ಮತದಾರರಿದ್ದು, ಈ ಪೈಕಿ 9,76,073 ಪುರುಷ, 9,42,757 ಮಹಿಳಾ ಹಾಗೂ 218 ತೃತೀಯ ಲಿಂಗ ಮತದಾರಿದ್ದಾರೆ. ಗ್ರಾಮೀಣ ಭಾಗದಲ್ಲಿ 1507 ಹಾಗೂ ಪಟ್ಟಣ ಪ್ರದೇಶದಲ್ಲಿ 578 ಸೇರಿ ಒಟ್ಟು 2085 ಮತಗಟ್ಟೆ ಸ್ಥಾಪಿಸಲಾಗಿದೆ. ಸುಗಮ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ಜರುಗಿಸುವ ದೃಷ್ಟಿಯಿಂದ ಒಟ್ಟು 167 ಸೆಕ್ಟರ್ ಅಧಿಕಾರಿ, 72 ಪ್ಲೈಯಿಂಗ್ ಸ್ಕ್ವಾಡ್, 87 ಸ್ಟೆಟಿಕ್ ಸರ್ವೆಲೈನ್ಸ್ ತಂಡ, 24 ವಿಡಿಯೋ ಸರ್ವಲೈನ್ಸ್ ಹಾಗೂ 8 ವಿಡಿಯೋ ವಿವ್ಹಿಂಗ್ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಮಾತನಾಡಿ, ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿಯಿಂದ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಪ್ರದೇಶಗಳನ್ನು ಗುರುತಿಸಿ ಆ ಪ್ರದೇಶಗಳಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮನೆ ಮನೆಗೆ ಭೇಟಿ ನೀಡುವ ಮತ್ತು ಸೈಕಲ್ ಜಾಥಾ ಹಾಗೂ ಬೈಕ್ ರ‍್ಯಾಲಿ ಹಮ್ಮಿಕೊಂಡು ಜನರಲ್ಲಿ ಮತ ಚಲಾಯಿಸಲು ಜಾಗೃತಿ ಮೂಡಲಾಗುತ್ತಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 29 ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಅವುಗಳಲ್ಲಿ 12 ಅಂತರರಾಜ್ಯ ಹಾಗೂ 17 ಅಂತರ ಜಿಲ್ಲಾ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಯಾವುದೇ ಚುನಾವಣೆಯಾದರೂ ಕೂಡ ನಿರ್ಲಕ್ಷಿಸುವಂತಿಲ್ಲ. ವಿಧಾನಸಭೆ ಚುನಾವಣೆಯಂತೆ ಲೋಕಸಭೆ ಚುನಾವಣೆಯನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಿ ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.

- ಅನುಪಕುಮಾರ ಚುನಾವಣೆ ವೆಚ್ಚ ವೀಕ್ಷಕ ಅಧಿಕಾರಿ