ಸಾರಾಂಶ
ಧಾರವಾಡ:
ಚುನಾವಣಾ ಕಾರ್ಯ ಪ್ರತಿ ಸರ್ಕಾರಿ ನೌಕರನಿಗೆ ಹೆಮ್ಮೆ ಮತ್ತು ಗೌರವ ತರುವ ಕರ್ತವ್ಯ. ತಾವು ನೇಮಕವಾಗಿ ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಓದಿ, ಅಧ್ಯಯನ ಮಾಡಿ, ಅದರ ಸಂಪೂರ್ಣ ಅರಿವು ಹೊಂದಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಸಭೆ ಚುನಾವಣೆಗೆ ಕರ್ತವ್ಯ ನಿರ್ವಹಿಸಲು ನೇಮಕವಾಗಿರುವ ಎಲ್ಲ ನೋಡಲ್ ಅಧಿಕಾರಿಗಳ, ಜಿಲ್ಲಾ ಚುನಾವಣಾ ಕಚೇರಿ ಸಿಬ್ಬಂದಿಗಳ ಮತ್ತು ವಿವಿಧ ತಂಡಗಳ ಮುಖ್ಯಸ್ಥರ ಸಭೆಯನ್ನು ಸೋಮವಾರ ಜರುಗಿಸಿದ ಅವರು, ಪ್ರತಿಯೊಂದು ಕಾರ್ಯಗಳು ಯಾವ ರೀತಿ, ಯಾವ ನಿಯಮಗಳಡಿ ಜರುಗಬೇಕು ಮತ್ತು ಯಾವ ಸುತ್ತೋಲೆ, ಮಾರ್ಗಸೂಚಿಸಿ, ನಿಯಮ, ಕಾಯ್ದೆಗಳು ಅನ್ವಯಿಸುತ್ತವೆ ಎಂಬುದನ್ನು ಪುಸ್ತಕ ಮಾಡಿ ಚುನಾವಣಾ ಆಯೋಗ ಈಗಾಗಲೇ ನೀಡಿದೆ. ಅದನ್ನು ಸರಿಯಾಗಿ ಅಧ್ಯಯನ ಮಾಡಬೇಕು ಮತ್ತು ಚುನಾವಣಾ ಸಂಬಂಧಿತ ಸಭೆ, ತರಬೇತಿಗಳಿಗೆ ನಿಯೋಜಿತರು ತಪ್ಪದೇ ಹಾಜರಾಗಲು ಸೂಚಿಸಿದರು. ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ, ಉದಾಸೀನತೆ ತೋರಬಾರದು. ಪ್ರತಿಯೊಬ್ಬರೂ ತಮ್ಮ ಕಾರ್ಯ ಮಾಡಲೇಬೇಕು. ನೌಕರರು ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಬೇಕು. ತಮಗೆ ವಹಿಸಿದ ಕಾರ್ಯಗಳನ್ನು ನಿಯಮಾನುಸಾರ ಪಾರದರ್ಶಕವಾಗಿ ಮಾಡಬೇಕು. ರಾಜಕೀಯ ಚಟುವಟಿಕೆಗಳಿಂದ ದೂರವಿರಬೇಕು, ಪಕ್ಷ ಪ್ರಚಾರದಲ್ಲಿ ತೊಡಗಿರುವ ಬಗ್ಗೆ ಅಥವಾ ಮತದಾರರ ಮೇಲೆ ಪ್ರಭಾವ ಬೀರುತ್ತಿರುವ ಬಗ್ಗೆ ಸಿಬ್ಬಂದಿ ಅಥವಾ ಅಧಿಕಾರಿಗಳ ಮೇಲೆ ದೂರು ಬಂದರೆ, ತಕ್ಷಣ ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ ಎಸ್., ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಮೊನಾ ರಾವುತ ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಇದ್ದರು.ಶಿಫಾರಸು, ಒತ್ತಡ ಬೇಡ:ಚುನಾವಣಾ ವಿಷಯದಲ್ಲಿ ಕರ್ತವ್ಯದಿಂದ ಹೊರಗುಳಿಯಲು ಅಥವಾ ತಂಡದ ಬದಲಾವಣೆಗೆ ನೈಜ ಕಾರಣ, ತೊಂದರೆಗಳಿದ್ದರೆ ನೇರವಾಗಿ ಜಿಲ್ಲಾ ಚುನಾವಣಾ ಕಚೇರಿಗೆ ಬನ್ನಿ. ಬದಲಾಗಿ ಬೇರೆಯವರಿಂದ ಶಿಫಾರಸು, ಒತ್ತಡ ತರುವುದು ಅಥವಾ ಸಲ್ಲದ ನೆಪ ಹೇಳುವುದು ಕಂಡು ಬಂದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಿ, ನೇರವಾಗಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.