ಸಾರಾಂಶ
ಚಿತ್ರದುರ್ಗ: ಕೇರಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ವರದಿಯಾಗುತ್ತಿರುವುದರಿಂದ, ಶಬರಿಮಲೆಗೆ ಹೋಗಿಬಂದವರ ಬಗ್ಗೆ ನಿಗಾ ವಹಿಸಬೇಕು. ಕೋವಿಡ್ ಸೋಂಕು ದೃಢಪಟ್ಟವರನ್ನು ಮಾತ್ರವಲ್ಲದೆ, ಪ್ರಾಥಮಿಕ ಸಂಪರ್ಕಿತರ ಪರೀಕ್ಷೆಯನ್ನೂ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯಲ್ಲಿ ಕೋವಿಡ್-19ರ ಸಂಬಂಧ ಸಿದ್ಧತೆ ಮತ್ತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಬಾರಿ ಕೋವಿಡ್-19ರ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಎದುರಾದ ಲೋಪದೋಷಗಳು, ವೈಫಲ್ಯಗಳನ್ನು ಗಮನದಲ್ಲಿರಿಸಿಕೊಂಡು, ಈ ಬಾರಿ ಮರುಕಳಿಸದಂತೆ ಮುಂಜಾಗ್ರತೆವಹಿಸಬೇಕು. ಅಗತ್ಯ ಸಿದ್ಧತೆಗಳೊಂದಿಗೆ ಕಾರ್ಯನಿರ್ವಹಿಸಬೇಕೆಂದರು.ಜಿಲ್ಲೆಯಲ್ಲಿ ಈಗಾಗಲೇ 14 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಯಾರೂ ಸಹ ಭಯ, ಆತಂಕ ಪಡುವ ಅಗತ್ಯವಿಲ್ಲ. ಕೋವಿಡ್ ಸಾಂಕ್ರಾಮಿಕದ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು ಅಗತ್ಯವಿರುವ ಎಲ್ಲ ಕ್ರಮಗಳನ್ನು, ತಯಾರಿಗಳನ್ನು ಮಾಡಿಟ್ಟುಕೊಳ್ಳಬೇಕು.
ಕಳೆದ ಬಾರಿಯ ಕೋವಿಡ್ ಅಲೆ ಸಂದರ್ಭದಲ್ಲಿ ಬಹಳಷ್ಟು ಜನ ಸಾವು ನೋವು ಅನುಭವಿಸಿದರು. ಬಡವರು ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಬೆಡ್ ದೊರೆಯದೆ ಅಲೆದಾಡುವ ಪರಿಸ್ಥಿತಿ ಎದುರಿಸಿದರು. ಹೀಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಇನ್ನಷ್ಟು ಬಲಪಡಿಸಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಸೂಕ್ತ ಚಿಕಿತ್ಸೆ ದೊರೆಯುವಂತಾಗಬೇಕು. ಇದಕ್ಕಾಗಿ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆವತಿಯಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ನಿಯಮಿತವಾಗಿ ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷಿಸಬೇಕು. ಈ ಕುರಿತು ತಾಲೂಕು ಆರೋಗ್ಯಾಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಹಾಸ್ಟೆಲ್‍ಗಳಲ್ಲಿ ಸ್ಯಾನಿಟೈಜರ್ ಸೇರಿದಂತೆ ಇತ್ಯಾದಿ ಪರಿಕರಗಳನ್ನು ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂಬ ದೂರುಗಳಿವೆ ಈ ಕುರಿತು ಅಗತ್ಯ ಕ್ರಮವಹಿಸಬೇಕು ಎಂದು ಸಚಿವರು ತಿಳಿಸಿದರು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಿವಿ ಸಾಗರ ಜಲಾಶಯ, ಜೋಗಿಮಟ್ಟಿ, ಚಿತ್ರದುರ್ಗ ಕೋಟೆ, ನಾಯಕನಹಟ್ಟಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಹೆಚ್ಚಿನ ಜನಸಂದಣಿಯಾಗುವ ಸಾಧ್ಯತೆಗಳಿವೆ, ಹೀಗಾಗಿ ಪ್ರವಾಸಿ ತಾಣಗಳ ಬಗ್ಗೆ ನಿಗಾ ಇರಿಸುವುದು ಸೂಕ್ತವೆಂದರು.ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಕೋವಿಡ್-19ರ ಸಂಬಂಧ ಜಿಲ್ಲೆಯಲ್ಲಿ ನಿಗದಿತ ಗುರಿಗಿಂತ ಹೆಚ್ಚು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 14 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಇದರಲ್ಲಿ 12 ಮಂದಿ ಹೋಂ ಐಸೋಲೇಷನ್‍ನಲ್ಲಿದ್ದಾರೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಕ್ರಮ ವಹಿಸಲಾಗುತ್ತಿದೆ. ಒಬ್ಬರು ಜಿಲ್ಲಾಸ್ಪತ್ರೆಯಲ್ಲಿ ಹಾಗೂ ಮತ್ತೊಬ್ಬರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ 450 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಇದರ ಜೊತೆಗೆ ಹೊಸ ಕಟ್ಟಡದಲ್ಲಿ 150 ಹಾಸಿಗೆಗಳಿದ್ದು, ಒಟ್ಟಾರೆ 600 ಬೆಡ್‍ಗಳು ಲಭ್ಯವಿದೆ. 60 ವರ್ಷ ಮೇಲ್ಪಟ್ಟವರು ಹಾಗೂ ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಮುಂಜಾಗ್ರತಾ ಕ್ರಮವಾಗಿ ಜನನಿಬಿಡ ಪ್ರದೇಶಗಳಿಗೆ ತೆರಳದಂತೆ ಹಾಗೂ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಕೋವಿಡ್ ಪರೀಕ್ಷೆ ಸಂಬಂಧ ಈಗಾಗಲೇ 800 ಕಿಟ್‍ಗಳು ಬಂದಿದ್ದು, 15 ದಿನಗಳಿಗೆ ಆಗುವಷ್ಟು ಟೆಸ್ಟಿಂಗ್ ಕಿಟ್‍ಗಳು ಇವೆ. ನಿಗದಿಪಡಿಸಿರುವ ಗುರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಟ್ ಮಾಡಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್ ಸಭೆಗೆ ಮಾಹಿತಿ ನೀಡಿದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿನ ವೈದ್ಯಕೀಯ ಆಕ್ಸಿಜನ್ 3 ಘಟಕಗಳ ಪೈಕಿ 2 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಘಟಕದ ದುರಸ್ತಿಗಾಗಿ ಸುಮಾರು 10 ಲಕ್ಷ ರು. ಅನುದಾನದ ಅಗತ್ಯವಿದೆ. 234 ಜಂಬೋ ಸಿಲಿಂಡರ್‌ಗಳು ಲಭ್ಯವಿದೆ. ಕೋವಿಡ್ ಚಿಕಿತ್ಸೆಗಾಗಿ ತುರ್ತಾಗಿ 10 ಮಂದಿ ಶುಶ್ರೂಷಕರ ಅವಶ್ಯಕತೆ ಇದೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ದೃಢಪಟ್ಟಿರುವ 14 ಕೋವಿಡ್ ಪ್ರಕರಣದಲ್ಲಿ ಯಾರಲ್ಲೂ ಜೆಎನ್-01 ಸೋಂಕು ಇಲ್ಲ. ಕೋವಿಡ್ ದೃಢಪಟ್ಟಿರುವವರ ಸಂಗ್ರಹಿತ ಮಾದರಿಯನ್ನು ಈಗಾಗಲೇ ಜಿನೋಮ್ ಸೀಕ್ವೆನ್ಸ್ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಇನ್ನೂ ವರದಿ ಬಂದಿಲ್ಲ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ತಾಲೂಕು ವೈದ್ಯಾಧಿಕಾರಿ ಡಾ. ಗಿರೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.