ಕೊಪ್ಪಳ: ತಾಲೂಕಿನ ಬಸಾಪುರ ಕೆರೆಯನ್ನು ಜನ ಜಾನುವಾರುಗಳಿಗೆ ಮುಕ್ತವಾಗಿಡಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮೂಲಕ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಕೊಪ್ಪಳ ತಾಲೂಕಿನ ಗಿಣಿಗೇರಿ ಹಾಗೂ ಹಿರೇ ಬಗನಾಳ ಗ್ರಾಮದ ಸುತ್ತಲೂ ತಲೆ ಎತ್ತಿ ನಿಂತಿರುವ ಬೃಹತ್ ಕಾರ್ಖಾನೆಗಳು ಹೊರ ಸೂಸುವ ರಾಸಾಯನಿಕ ಮಿಶ್ರಿತ ಹೊಗೆ ಹಾಗೂ ಧೂಳಿನಿಂದ ಜಿಲ್ಲೆಯ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಖಾನೆಗಳಿಂದ ಉಂಟಾದ ಪರಿಸರ ಮಾಲಿನ್ಯದಿಂದ ಸಾಕಷ್ಟು ಜನ ಜಾನುವಾರು ಮೃತಪಟ್ಟ ಉದಾಹರಣೆಗಳಿವೆ. ಇದರ ವಿರುದ್ಧ ಸುಮಾರು ವರ್ಷಗಳಿಂದ ವಿವಿಧ ರೀತಿಯ ಹೋರಾಟ ನಡೆಯುತ್ತಿವೆ.ಮಾಲಿನ್ಯದ ಜತೆಗೆ ಎಂ.ಎಸ್.ಪಿ.ಎಲ್.ಕಬಳಿಕೆ ಮಾಡಿರುವ ಬಸಾಪುರ ಕೆರೆ ಜನ ಜಾನುವಾರುಗಳಿಗಾಗಿ ಮುಕ್ತಗೊಳಿಸಬೇಕೆಂಬುದು ಮುಖ್ಯ ಬೇಡಿಕೆಯಾಗಿದೆ.

ಜಿಲ್ಲಾಧಿಕಾರಿಗಳು ಕೆರೆ ಮುಕ್ತಗೊಳಿಸಬೇಕು. ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ವರ್ಷವು ಬಿಸಿಲಿನ ತಾಪಮಾನ ವಿಪರೀತ ಇರುವುದರಿಂದ ಕುರಿ, ದನ.ಕರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿ ತೊಂದರೆ ಅನುಭವಿಸುತ್ತಿವೆ. ಕಾರಣ ಬಸಾಪುರ ಕೆರೆ ಮುಕ್ತಗೊಳಿಸುವಲ್ಲಿ ಕಾನೂನಿನ ತೊಡಕುಗಳಿದ್ದಲ್ಲಿ ಮಾನವೀಯ ನೆಲಗಟ್ಟಿನ ಮೇಲೆ ಯೋಚಿಸಿ ಬಸಾಪುರ ಕೆರೆ ಮುಕ್ತಗೊಳಿಸುವ ಮೂಲಕ ಜನ ಜಾನುವಾರಗಳಿಗೆ ನೀರು ಕುಡಿಯಲು ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸುತ್ತೇವೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್ ತಿಳಿಸಿದ್ದಾರೆ.

ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ. ಗಫಾರ್. ಗಿಣಿಗೇರಾ ನಾಗರಿಕ ಹೋರಾಟ ಸಮಿತಿ ಸಂಚಾಲಕ ಮಂಗಳೇಶ ರಾಥೋಡ್, ಕುರಿಗಾರರ ಸಂಘದ ಅಧ್ಯಕ್ಷ ಯಮನೂರಪ್ಪ ಹಾಲಳ್ಳಿ. ಬೀರಪ್ಪ ಶಹಾಪುರ, ಕಂಪ್ಲೆಪ್ಪ ಶಹಾಪುರ. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್, ಅಹಿಂದ ಚಳವಳಿಯ ಸಹ ಸಂಚಾಲಕ ಮುತ್ತುರಾಜ್ ಚನ್ನದಾಸರ, ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಮೌಲಾ ಹುಸೇನ್ ಹಣಗಿ, ಶಿವಪ್ಪ ಹಡಪದ್ ಮುಂತಾದವರು ಕೋರಿದ್ದಾರೆ.