ಪೋಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮೊಬೈಲ್ ಕೊಟ್ಟು ಅಭ್ಯಾಸ ಮಾಡಿಸುವುದು ಕೆಟ್ಟ ಬೆಳವಣಿಗೆ. ಇದರಿಂದ ಮಕ್ಕಳ ಮಾನಸಿಕ ಸ್ಥಿತಿಗೆ ನಾವೇ ಪೆಟ್ಟು ಕೊಟ್ಟಂತಾಗುತ್ತದೆ .

ಕನ್ನಡಪ್ರಭ ವಾರ್ತೆ ಮಂಡ್ಯ

ಮಕ್ಕಳನ್ನು ಮೊಬೈಲ್‌ನಿಂದ ದೂರ ಇಟ್ಟು ಪುಸ್ತಕಗಳನ್ನು ಕೊಟ್ಟು ಅಧ್ಯಯನ, ಅಭ್ಯಾಸ ಮಾಡಲು ಪ್ರೇರೇಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಪೋಷಕರಿಗೆ ಸಲಹೆ ನೀಡಿದರು.

ನಗರದ ಹಾಲಹಳ್ಳಿ ಕಿಡ್ಸ್‌ ಪ್ಲಾನೆಟ್ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಪೋಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮೊಬೈಲ್ ಕೊಟ್ಟು ಅಭ್ಯಾಸ ಮಾಡಿಸುವುದು ಕೆಟ್ಟ ಬೆಳವಣಿಗೆ. ಇದರಿಂದ ಮಕ್ಕಳ ಮಾನಸಿಕ ಸ್ಥಿತಿಗೆ ನಾವೇ ಪೆಟ್ಟು ಕೊಟ್ಟಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಹಿಂದೆ ನಮ್ಮ ಅಜ್ಜ- ಅಜ್ಜಿಯರು ಅವರ ಕಾಲದಲ್ಲಿ ನಮಗೆ ಕಥೆಗಳನ್ನು ಹೇಳುವ ಮೂಲಕ ಸಮಾಜಕ್ಕೆ ಮಾದರಿಯಾಗುವಂತೆ ಮಾಡುತ್ತಿದ್ದರು. ಅದರಿಂದ ಎಷ್ಟೋ ಮಂದಿ ಪ್ರೇರಿತರಾಗಿ ತಮ್ಮ ಬದುಕಿನ ದಾರಿಯನ್ನೇ ಬದಲಾಯಿಸಿಕೊಂಡಿರುವ ಉದಾಹರಣೆಗಳೂ ಇವೆ. ಆದರೆ, ಇಂದು ಪೋಷಕರು ಮಕ್ಕಳು ಗಲಾಟೆ ಮಾಡುತ್ತಾರೆ ಎಂಬ ಕಾರಣಕ್ಕೆ ಮೊಬೈಲ್ ಕೊಟ್ಟು ಅವರು ಬೇರೆಯದ್ದೇ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.

ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಸಂಸ್ಕೃತಿ, ಸಂಸ್ಕಾರ ನೀಡಬೇಕು. ಒಳ್ಳೆಯ ರೀತಿಯಲ್ಲಿ ಬೆಳೆಸಬೇಕು. ಮಹನೀಯರು, ದಾರ್ಶನಿಕರು, ಸಾಧಕರ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಮುಖ್ಯವಾಗಿ ಮಾನವೀಯತೆಯ ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವಂತಹ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಶಾಲೆ ಅಭಿವೃದ್ಧಿಗೆ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ₹5 ಲಕ್ಷ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಸ್ವಾಭಿಮಾನಿ ಪಡೆ ಅಧ್ಯಕ್ಷ ಶಶಿಕುಮಾರ್ ಹನಕೆರೆ, ಮುಖಂಡರಾದ ಸುರೇಶ್, ಮಂಜು, ಹೇಮಂತ್, ಸಜ್ಜನ್, ಮಂಜುನಾಥ್, ಮಹೇಶ್, ಆಶಾ, ಹೊಂಬಾಳೆ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಬಸವರಾಜು ಇತರರು ಇದ್ದರು.