ಎನ್‌ಡಿಎ ಕೂಟದಿಂದ ‘ಜೆಡಿಎಸ್’ ದೂರವಿಡಿ: ಎಲ್.ಆರ್.ಶಿವರಾಮೇಗೌಡ ಒತ್ತಾಯ

| Published : May 04 2024, 12:35 AM IST

ಎನ್‌ಡಿಎ ಕೂಟದಿಂದ ‘ಜೆಡಿಎಸ್’ ದೂರವಿಡಿ: ಎಲ್.ಆರ್.ಶಿವರಾಮೇಗೌಡ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಬಲೆಯರ ನೆರವಿಗೆ ಧಾವಿಸಬೇಕು. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗುವಂತೆ ಹೋರಾಟ ರೂಪಿಸಬೇಕು. ಯಾವುದೇ ವಿಚಾರವಾದರೂ ಎಚ್ಡಿಕೆ ದಿಢೀರನೇ ಹೋರಾಟಕ್ಕೆ ಇಳಿಯುತ್ತಾರೆ. ಹಾಸನದ ಪ್ರಕರಣದಲ್ಲಿ ಕೇವಲ ವಿಪಕ್ಷಗಳ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟು ನೈಜ ಹೋರಾಟಕ್ಕೆ ಇಳಿಯಲಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಹಾಸನದ ಪೆನ್ ಡ್ರೈವ್ ಪ್ರಕರಣದಿಂದ ಭಾರತೀಯ ಜನತಾ ಪಾರ್ಟಿಗೆ ತೀವ್ರ ಮುಜುಗರ ಉಂಟಾಗಿದೆ. ಕೂಡಲೇ ಎನ್‌ಡಿಎ ಮೈತ್ರಿಕೂಟದಿಂದ ಜೆಡಿಎಸ್ ಅನ್ನು ದೂರ ಇಡಬೇಕು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಗುರುವಾರ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಹಗರಣದಿಂದ ಪ್ರಸ್ತುತ ಲೋಕಸಭಾ ಚುನಾವಣೆ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ. ತಕ್ಷಣ ಜೆಡಿಎಸ್‌ನಿಂದ ಮೈತ್ರಿ ಹೊರಬರಬೇಕು ಎಂದು ಆಗ್ರಹಿಸಿದರು.

ಹಾಸನದ ಪ್ರಜ್ವಲ್ ರೇವಣ್ಣ ಪ್ರಕರಣ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿದೆ. ಈ ಪ್ರಕರಣದ ಮುಜುಗರ ತಪ್ಪಿಸುವ ಸಲುವಾಗಿ ವರಿಷ್ಠರು ಈಗಾಗಲೇ ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಹಾಗಾಗಿ ಬಿಜೆಪಿ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಬಲೆಯರ ನೆರವಿಗೆ ಧಾವಿಸಬೇಕು. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗುವಂತೆ ಹೋರಾಟ ರೂಪಿಸಬೇಕು. ಯಾವುದೇ ವಿಚಾರವಾದರೂ ಎಚ್ಡಿಕೆ ದಿಢೀರನೇ ಹೋರಾಟಕ್ಕೆ ಇಳಿಯುತ್ತಾರೆ. ಹಾಸನದ ಪ್ರಕರಣದಲ್ಲಿ ಕೇವಲ ವಿಪಕ್ಷಗಳ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟು ನೈಜ ಹೋರಾಟಕ್ಕೆ ಇಳಿಯಲಿ ಎಂದು ಸಲಹೆ ನೀಡಿದರು.

ಈ ಹಿಂದೆ ನಾಗಮಂಗಲದ ಗಂಗಾಧರಸ್ವಾಮಿ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನ್ನ ವಿರುದ್ಧ ಆತನ ಫೋಟೋ ತಲೆ ಮೇಲೆ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದರು. ಆದರೆ, ಇಂದು ಅವರ ಮನೆಯಲ್ಲೇ ದೊಡ್ಡ ಘಟನೆ ನಡೆದು ಹೋಗಿದೆ. ಇಂತಹ ಪರಿಸ್ಥಿತಿ ನೋಡಬೇಕಾದ ದುಸ್ಥಿತಿ ಇಳಿವಯಸ್ಸಿನಲ್ಲಿ ಗೌಡರಿಗೆ ಬಂದೊದಗಿದೆ ಎಂದು ವ್ಯಂಗ್ಯವಾಡಿದರು.

ಹಾಸನದಲ್ಲಿ ಈ ಕುಟುಂಬ ಸದಸ್ಯನಿಂದ ಹೆಣ್ಣು ಮಕ್ಕಳು ಹೇಗೆ ನೊಂದಿದ್ದಾರೋ ಅದೇ ರೀತಿ ಒಕ್ಕಲಿಗ ನಾಯಕರು ತುಳಿತಕ್ಕೊಳಗಾಗಿದ್ದಾರೆ. ನಾವೂ ನೊಂದಿದ್ದೇವೆ. ಕಾರಣ ಕುಮಾರಸ್ವಾಮಿ ಅವರು ಆ ನೊಂದ ಮಹಿಳೆಯರಿಗೆ ಸಾಂತ್ವನ ಹೇಳುವ ಕೆಲಸ ಮಾಡಬೇಕು ಎಂದರು.

ಚುನಾವಣೆಗೂ ಮುನ್ನ ಹಾಸನದಲ್ಲಿ ಪ್ರಚಾರ ಮಾಡುವ ವೇಳೆ ಪ್ರಜ್ವಲ್ ನನ್ನ ಮಗನಿದ್ದಂತೆ ಆತ ಏನೇ ಮಾಡಿರಲಿ, ನಾನು ಸರಿಪಡಿಸುತ್ತೇನೆ. ಅವನಿಗೆ ಆಶೀರ್ವಾದ ಮಾಡಿ ಎಂದು ಕುಮಾರಸ್ವಾಮಿ ಕೇಳಿದ್ದರು. ಆದರೆ, ಲೈಂಗಿಕ ಹಗರಣ ಹೊರ ಬಂದ ನಂತರ ರೇವಣ್ಣ ಕುಟುಂಬಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡುವುದು ಬೇಡ ಎಂದು ಅಮಿತ್‌ ಶಾ ಹೇಳಿದ್ದರು. ಆದರೆ, ಪ್ರಧಾನಿ ಮೋದಿಯವರು ಕೇಳಲಿಲ್ಲ. ಈತನನ್ನು ನಂಬಿ ಟಿಕೆಟ್ ಕೊಟ್ಟು ಅಪಮಾನ ಮಾಡಿಸಿಕೊಂಡಂತಾಗಿದೆ ಎಂದು ಜರಿದರು.

ಈ ಘಟನೆಗೆ ಕಾರಣನಾದ ಆರೋಪಿ, ಪೆನ್‌ಡ್ರೈವ್ ಮೂಲಕ ಹೊರಜಗತ್ತಿಗೆ ತಂದವರು, ಇದರಲ್ಲಿ ಯಾರ್‍ಯಾರು ಶಾಮೀಲಾಗಿದ್ದಾರೋ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹೇಮಂತರಾಜು, ಚೇತನ, ಕೊಪ್ಪ ರಮೇಶ್, ನಾಗರಾಜು, ವಕೀಲ ಉಮೇಶ್ ಇದ್ದರು.

ನನಗೇನು ಕೊಟ್ಟರು..?

ಜೆಡಿಎಸ್‌ಗಾಗಿ ನಾನೂ ಸೇರಿದಂತೆ ಹಲವರು ದುಡಿದಿದ್ದೇವೆ. ಕೋಟ್ಯಂತರ ರು. ಕಳೆದುಕೊಂಡಿದ್ದೇನೆ. ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡದೆ ಸುರೇಶ್‌ಗೌಡರಿಗೆ ನೀಡಿದರು. ನಂತರ ಕೇವಲ 5 ತಿಂಗಳ ಅವಗೆ ಸಂಸದನಾದೆ. ನಂತರ ತಮ್ಮ ಮಗನಿಗೆ ಟಿಕೆಟ್ ಕೊಟ್ಟರು. ನನಗೇನು ಕೊಟ್ಟರು ಎಂದು ಎಲ್.ಆರ್.ಶಿವರಾಮೇಗೌಡ ಪ್ರಶ್ನಿಸಿದರು.

ಕೇವಲ ಬಾಯಿ ಮಾತಿಯಿಂದ ಆಡಿದ ಸಣ್ಣ ತಪ್ಪುನ್ನು ಗಮನಿಸಿ ಅರ್ಧ ಗಂಟೆಯಲ್ಲೇ ನನ್ನನ್ನು ಪಕ್ಷದಿಂದ ಹೊರ ಹಾಕಿದರು. ಇಂತಹ ದೊಡ್ಡ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಜ್ವಲ್ ಅಮಾನತ್ತಿಗೆ ಸಭೆ ಮಾಡಿ ನಂತರ ತೀರ್ಮಾನ ಮಾಡಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ತಂದೆ-ಮಗ ಇಬ್ಬರೂ ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿದ್ದಾರೆ. ರೇವಣ್ಣ ಅವರು ಒಳ್ಳೆಯ ನಡವಳಿಕೆಯ ವ್ಯಕ್ತಿಯಲ್ಲ. ಪ್ರಜ್ವಲ್ ಇಷ್ಟೆಲ್ಲಾ ಮಾಡುವಾಗ ಅಪ್ಪ- ಅಮ್ಮ ಕತ್ತೆ ಕಾಯುತ್ತಿದ್ದರಾ?. ಸಂತ್ರಸ್ಥೆಯೊಬ್ಬರು ಹೇಳಿರುವಂತೆ ಮಗ ಒಂದು ಕಡೆ, ಅಪ್ಪ ಒಂದು ಕಡೆ ಹೋಗುತ್ತಿದ್ದರು ಎಂದಿದ್ದಾರೆ. ಇದೆಲ್ಲಾ ಸುಳ್ಳಾ?.

- ಎಲ್.ಆರ್.ಶಿವರಾಮೇಗೌಡ, ಮಾಜಿ ಸಂಸದ