ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೊಬೈಲ್‌ಗಳಿಂದ ದೂರವಿದ್ದು ಬದುಕಿನ ಕಡೆಗೆ ಸಾಗುವಂತಹ ಮಾರ್ಗದರ್ಶನವನ್ನು ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ನೀಡಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಶೇಖ್ ತನ್‌ವೀರ್ ಆಸೀಫ್ ಸಲಹೆ ನೀಡಿದರು.ರಾಜ್ಯ ಸರ್ಕಾರದ ವಾಹನ ಚಾಲಕರ ಸಂಘದಿಂದ ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ನಡೆದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಮೊಬೈಲ್ ಗೀಳು ಅತಿಯಾಗಿದೆ. ಇದರಿಂದ ಅವರ ಬದುಕು ಹಾಳಾಗುತ್ತಿದೆ. ಇದಕ್ಕೆ ಪೋಷಕರಾದ ನಾವೇ ಕಾರಣರಾಗಿದ್ದೇವೆ. ಬಿಡುವಿನ ವೇಳೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುವುದನ್ನೂ ಸಹ ಮರೆತಿದ್ದೇವೆ. ಮನೆಯಲ್ಲಿರುವ ಪ್ರತಿಯೊಬ್ಬರೂ ಅಕ್ಕ ಪಕ್ಕದಲ್ಲಿ ಕುಳಿತಿದ್ದರೂ, ಪರಸ್ಪರ ಮಾತುಕತೆ, ಚರ್ಚೆ ಇರುವುದಿಲ್ಲ. ಮೊಬೈಲ್‌ನಲ್ಲೇ ಮುಳುಗಿರುತ್ತೇವೆ. ಇಂತಹ ಬೆಳವಣಿಗೆ ಸರಿಯಲ್ಲ. ಇದರಿಂದ ಮಕ್ಕಳ ಬದುಕು ಸಹ ಕಮರಿಹೋಗುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.ಮಕ್ಕಳಿಗೆ ಒಳ್ಳೆಯ ಜೀವನ ನೀಡುವ ನಿಟ್ಟಿನಲ್ಲಿ ಚಿಂತಿಸಬೇಕು. ಅಗತ್ಯವಿರುವಷ್ಟು ಮಾತ್ರ ಮೊಬೈಲ್ ಬಳಕೆ ಮಾಡಬೇಕು. ಉಳಿದಂತೆ ಚಿಂತನೆ, ಚರ್ಚೆ ಇತರೆ ವಿಚಾರಗಳತ್ತ ಗಮನ ಹರಿಸುವುದರ ಜೊತೆಗೆ ಮಕ್ಕಳಿಗೆ ತಮ್ಮ ಕಷ್ಟ, ಸಮಸ್ಯೆ, ಸಂಕಷ್ಟಗಳನ್ನು ಹೇಳಬೇಕು. ಪೋಷಕರು ತುಂಬಾ ಕಷ್ಟಪಟ್ಟು ಮಕ್ಕಳಿಗೆ ತಿಳಿಯದಂತೆ ಎಲ್ಲ ಸೌಲಭ್ಯಗಳನ್ನೂ ಅವರಿಗೆ ನೀಡುತ್ತಾರೆ. ಮಕ್ಕಳು ಪೋಷಕರ ಕಷ್ಟ-ಸುಖಗಳನ್ನು ತಿಳಿಯುವುದು ಯಾವಾಗ, ಅವರಿಗೂ ಎಲ್ಲದರ ಅರಿವು ಆಗಬೇಕು. ಆಗ ಮಾತ್ರ ಅವರ ಬದುಕು ಸುಂದರವಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ವಾಹನ ಚಾಲಕರು ಅತಿ ಜಾಗೃತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅನಾಹುತವೇ ನಡೆದುಹೋಗುತ್ತದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಇದರಿಂದ ತಮ್ಮ ಜೊತೆಗೆ ಇತರರ ಪ್ರಾಣವನ್ನೂ ಕಳೆದುಕೊಳ್ಳುವುದು, ಇಲ್ಲವೇ ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರತಿಯೊಬ್ಬ ವಾಹನ ಚಾಲಕರು ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಅತ್ಯವಶ್ಯಕ. ಕ್ಲಿಷ್ಟಕರ ಕರ್ತವ್ಯದಲ್ಲಿ ಏನಾದರೂ ಅವಘಡಗಳು ಸಂಭವಿಸಿದಾಗ ತಮ್ಮ ಜೊತೆಗೆ ಇಡೀ ಕುಟುಂಬವೂ ಸಂಕಷ್ಟ ಅನುಭವಿಸಬೇಕಾಗುತ್ತದೆ ಹಾಗಾಗಿ ಆರೋಗ್ಯ ವಿಮೆ ಅತ್ಯವಶ್ಯಕ. ಸಾರಿಗೆ ಇಲಾಖೆ ಕಾರ್ಯದರ್ಶಿಯವರು ಇಲಾಖೆಯ ಎಲ್ಲ ಚಾಲಕರಿಗೂ ಆರೋಗ್ಯ ವಿಮೆ ಒದಗಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದರು.
ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಚೆಲುವರಾಜು, ಮುಖಂಡರಾದ ಟಿ.ರಾಜು, ವಿ. ನಾಗರಾಜು, ತಿಮ್ಮರಾಜು, ಕೆ.ಎಸ್. ವಿಜಯಕುಮಾರ್ ಇತರರು ಭಾಗವಹಿಸಿದ್ದರು.